ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಮಟ್ಟದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪತ್ರಿಕೆಗಳು, ರೇಡಿಯೋ ಜಿಂಗಲ್ಸ್ ಮೂಲಕ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಕುರಿತು ಪ್ರಚಾರ ಕೈಗೊಳ್ಳಬೇಕು. ಹೆಲ್ಮೇಟ್ ಧರಿಸುವುದು ಕಡ್ಡಾಯ ಎನ್ನುವಂತಾಗಬೇಕು. ವಾಹನ ಸವಾರರು ಹೆಲ್ಮೇಟ್ ಧರಿಸದೇ ಓಡಾಡಿದಲ್ಲಿ ಅವರ ಮನೆ ವಿಳಾಸಕ್ಕೆ ನೋಟಿಸ್ ನೊಂದಿಗೆ ದಂಡ ಕಟ್ಟುವ ಸಂದೇಶ ರವಾನಿಸುವ ಕೆಲಸವಾಗಬೇಕು ಎಂದು ಹೇಳಿದರು.
ಕಳೆದ ವರ್ಷದ ಕಬ್ಬು ಕಟಾವಿನ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯ ಟ್ರ್ಯಾಕ್ಟರ್ ಚಾಲಕರು ಸೌಂಡ್ ಸಿಸ್ಟಮ್ ಗಳನ್ನು ಅಳವಡಿಸಿಕೊಂಡು ಓಡಾಡಿಕೊಂಡಿದ್ದರು. ಆದರೆ ಈ ವರ್ಷ ಅವರಲ್ಲಿ ಅದರಿಂದಾಗುವ ಅನಾಹುತಗಳ ಕುರಿತು ಎಚ್ಚರಿಕೆ ನೀಡಿದ್ದರಿಂದ ಅಬ್ಬರದ ದ್ವನಿ ಕಡಿಮೆಯಾಗಿದೆ. ಇದೊಂದು ಒಳ್ಳೆಯ ಬೆಳವಣಿಗೆ ಇದೇ ರೀತಿ ಎಲ್ಲಾ ರೀತಿಯ ರಸ್ತೆ ಸುರಕ್ಷತಾ ಕ್ರಮಗಳನ್ನು ಎಲ್ಲಾ ವಾಹನ ಸವಾರರು ಮತ್ತು ಹಿಂಬಂದಿ ಸವಾರರು ಅಳವಡಿಸಿಕೊಳ್ಳುವ ರೀತಿಯಲ್ಲಿ ಜನ ಜಾಗೃತಿಯಾಗಬೇಕು ಎಂದು ತಿಳಿಸಿದರು.ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ದುರ್ಗಾದಾಸ ಮಾತನಾಡಿ, ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಬರುವ ಬ್ಲಾಕ್ ಸ್ಪಾಟ್‌ಗಳನ್ನು ಸರಿಪಡಿಸುವ ಕ್ರಮ, ಮುದೋಳ ತಾಲೂಕಿನ ಬಾಯ್ಪಾಸ್ ರಸ್ತೆ ಮೇಲೆ ಜಂಕ್ಷನಗಳಲ್ಲಿ ಸೂಚನಾ ಫಲಕಗಳನ್ನು ಹಾಗೂ ರಂಬಲ್ ಸ್ಟ್ರಿಪ್ಸ್ ಗಳನ್ನು ಲೋಕೋಪಯೋಗಿ ಇಲಾಖೆಯಿಂದ ಅಳವಡಿಸಲು ಮತ್ತು ಮಹಾಲಿಂಗಪೂರ ರಸ್ತೆಯನ್ನು ಕರ್ನಾಟಕ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ(ಕೆಶಿಪ) ಗೋಕಾಕ ಉಪವಿಭಾಗ ರವರಿಂದ ಮೇಲ್ದರ್ಜೆಗೇರಿಸಿ ಸದರಿಯವರಿಂದಲೇ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.