ಸಾರಾಂಶ
ತೇರದಾಳ ಪಟ್ಟಣದ ಶ್ರೀ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಪರಿಸರ ರಕ್ಷಣೆ ಕುರಿತಾದ ಕಾರ್ಯಕ್ರಮಕ್ಕೆ ಬೆಂಗಳೂರಿನ ಬಿ.ಡಿ. ಜತ್ತಿ ಫೌಂಡೇಶನ್ ಮುಖ್ಯಸ್ಥ ಧ್ರುವ ಜತ್ತಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ):
ಕಳೆದ ಬೇಸಿಗೆಯಲ್ಲಿ ಎಲ್ಲರೂ ಶಕೆಯ ಸಂಕಷ್ಟ ಅನುಭವಿಸಿದ್ದೀರಿ. ಇನ್ನೆಂದೂ ಇಂತಹ ಶಕೆ ನಮಗೆ ಬೇಡ. ಹಾಗಾದರೆ ನಾವೆಲ್ಲರೂ ಸೇರಿ ಹೆಚ್ಚಿನ ಪ್ರಮಾಣದಲ್ಲಿ ಗಿಡ-ಮರಗಳನ್ನು ಬೆಳೆಸೋಣ. ಪರಿಸರ ರಕ್ಷಣೆಯ ಜಾಗೃತಿ ಮೂಡಿಸಿ, ಗಿಡ ನೆಡಲು ಹಾಗೂ ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಗೆ ಅನೇಕ ಬಗೆಯ ಕಾರ್ಯ ನಿರ್ವಹಿಸಲು ಫ್ರಾನ್ಸ್ ದೇಶದ ಯುವ ಸಂಘಟಕರು ನಮ್ಮೊಂದಿಗೆ ಬಂದಿದ್ದಾರೆ. ಅವರ ಆಲೋಚನೆಗಳಿಗೆ ನಾವು ಸ್ಪಂದಿಸುವ ಮೂಲಕ ಶೈಕ್ಷಣಿಕ ಹಾಗೂ ಪರಿಸರ ರಕ್ಷಣೆಯ ಲಾಭಗಳನ್ನು ಪಡೆಯೋಣ ಎಂದು ಬೆಂಗಳೂರಿನ ಬಿ.ಡಿ. ಜತ್ತಿ ಫೌಂಡೇಶನ್ ಮುಖ್ಯಸ್ಥ ಧ್ರುವ ಜತ್ತಿ ಹೇಳಿದರು.ಪಟ್ಟಣದ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಹಮ್ಮಿಕೊಂಡ ಪರಿಸರ ರಕ್ಷಣೆ ಕುರಿತಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮೀಪದ ಗೋಲಭಾವಿ ಹಾಗೂ ಕಾಲತಿಪ್ಪಿ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಕಳೆದ ವರ್ಷ ನಾವು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಪರ ಕೆಲಸ ಮಾಡಿದ್ದೇವೆ. ಈಗ ಕುಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ದತ್ತು ತೆಗೆದುಕೊಂಡು ಗ್ರಂಥಾಲಯ ಸೇರಿದಂತೆ ಬಹುತೇಕ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಪ್ರತಿ ಶನಿವಾರ, ಭಾನುವಾರದಂದು ಮದನಮಟ್ಟಿ, ಆಸಂಗಿ ಗುಡ್ಡಗಳಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಸಹಯೋಗದಲ್ಲಿ ಗಿಡಗಳನ್ನು ನೆಡುವ ಹಾಗೂ ಬೆಳೆಸುವ ಕಾರ್ಯ ನಿರ್ವಹಿಸುತ್ತೇವೆ. ಪರಿಸರದ ರಕ್ಷಣೆಗಾಗಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ಇದಕ್ಕೂ ಮೊದಲು ಪ್ರಾನ್ಸ್ ದೇಶದ ಯುವಕ, ಯುವತಿಯರಾದ ಹ್ಯೂಗೋ, ಲಾವುರಾ, ಸೊರೆನ್, ಇಸಿಯಾ ಮಾತನಾಡಿ, ಪರಿಸರ ರಕ್ಷಣೆಗೆ ಸ್ವಯಂಪ್ರೇರೆಪಣೆಯಿಂದ ಮುಂದಾಗಬೇಕು. ಉತ್ತಮ ಜನರಿಂದ ಮಾತ್ರ ಪರಿಸರ ರಕ್ಷಣೆ ಸಾಧ್ಯ. ಮಕ್ಕಳೆಲ್ಲರೂ ಒಂದೊಂದು ಗಿಡನೆಟ್ಟು ಭವಿಷ್ಯತ್ತಿನಲ್ಲಿ ಉತ್ತಮ ವಾತಾವರಣ ಇರಿಸಲು ಮುಂದಾಗಬೇಕೆಂದರು. ಶ್ರೀ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಚೇರ್ಮನ್ ಎಂ.ಎಂ. ಯಾದವಾಡ ಅಧ್ಯಕ್ಷತೆ ವಹಿಸಿದ್ದರು. ಎಂ.ವಿಶ್ವೇಶ್ವರಯ್ಯ ವಿಜ್ಞಾನ ಪಿಯು ಕಾಲೇಜಿನ ಚೇರ್ಮನ್ ಪ್ರಕಾಶ ಕಾಲತಿಪ್ಪಿ, ಸ್ವಾಮಿ ವಿವೇಕಾನಂದ ಸಿಬಿಎಸ್‌ಇ ಚೇರ್ಮನ್ ಶಂಕರ ಮಂಗಸೂಳಿ, ಪ್ರೌಢ-ಪ್ರಾಥಮಿಕ ವಿಭಾಗದ ಚೇರ್ಮನ್ನರಾದ ಎ.ಸಿ. ಮುಕುಂದ, ಎಂ.ಕೆ. ಮಿರ್ಜಿ, ಪರಪ್ಪ ಅಥಣಿ, ಶಂಕರ ಹೊಸಮನಿ, ಬಸವರಾಜ ಬಾಳಿಕಾಯಿ, ಮಂಜುನಾಥ ಜಮಖಮಡಿ ಹಿರೇಮಠ, ಮಹಾಂತೇಶ ಪಂಚಾಕ್ಷರಿ, ಈಶ್ವರ ಕಿತ್ತೂರ, ಮಹೇಶ ಹಂಜಿ, ಆಡಳಿತಾಧಿಕಾರಿ ಎಂ.ಬಿ. ಮಾಳೇದ, ಸಿಬ್ಬಂದಿ ಸೇರಿದಂತೆ ಅನೇಕರಿದ್ದರು. ಬಸವರಾಜ ಬಾಳಿಕಾಯಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.