ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಿ: ಆಪ್ ಜಿಲ್ಲಾಧ್ಯಕ್ಷ ಭೈರೇಗೌಡ

| Published : May 21 2024, 12:35 AM IST

ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಿ: ಆಪ್ ಜಿಲ್ಲಾಧ್ಯಕ್ಷ ಭೈರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ವಿದ್ಯಾಸಂಸ್ಥೆಗಳು ಪ್ರತಿವರ್ಷ ಶೇ. 15 ರಿಂದ 20ರಷ್ಟು ಶುಲ್ಕವನ್ನು ಹೆಚ್ಚಳ ಮಾಡುತ್ತಿದ್ದು, ಇದರಿಂದ ಪೋಷಕರಿಗೆ ಹೊರೆ ಆಗುತ್ತಿದೆ. ಈ ಹಿಂದೆ ವಿದ್ಯೆ ಎಂಬುದು ದಾನವಾಗಿತ್ತು. ಆದರೀಗ ಅದು ವ್ಯಾಪಾರೀಕರಣಗೊಂಡಿದೆ.

ರಾಮನಗರ: ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕಲು ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಮಾಡಬೇಕು. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯುವುದಾಗಿ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಭೈರೇಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳಿಂದಾಗಿ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದ್ದು, ನಿಯಮ ಬಾಹಿರವಾಗಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಲು ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಅಗತ್ಯವಿದೆ ಎಂದರು.

ಖಾಸಗಿ ವಿದ್ಯಾಸಂಸ್ಥೆಗಳು ಪ್ರತಿವರ್ಷ ಶೇ. 15 ರಿಂದ 20ರಷ್ಟು ಶುಲ್ಕವನ್ನು ಹೆಚ್ಚಳ ಮಾಡುತ್ತಿದ್ದು, ಇದರಿಂದ ಪೋಷಕರಿಗೆ ಹೊರೆ ಆಗುತ್ತಿದೆ. ಈ ಹಿಂದೆ ವಿದ್ಯೆ ಎಂಬುದು ದಾನವಾಗಿತ್ತು. ಆದರೀಗ ಅದು ವ್ಯಾಪಾರೀಕರಣಗೊಂಡಿದೆ.

ರಾಜಕಾರಣಿಗಳೇ ಖಾಸಗಿ ಶಾಲಾ ಕಾಲೇಜುಗಳ ಮಾಲೀಕರಾಗಿದ್ದಾರೆ. ಹೀಗಾಗಿ ಮಾನದಂಡ ಇಲ್ಲದೇ ಶುಲ್ಕ ಹೆಚ್ಚಳವಾಗುತ್ತಿದ್ದು, ಅದಕ್ಕೆ ನಿಯಂತ್ರಣ ಹೇರುವವರೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಆಪ್ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಂತೆಯೇ ಮೂಲ ಸೌಕರ್ಯ ಕಲ್ಪಿಸಿದ್ದಾರೆ. ರಾಜ್ಯದಲ್ಲಿಯೂ ಸರ್ಕಾರಿ ಶಾಲೆಗಳನ್ನು ಆಧುನೀಕರಣಗೊಳಿಸಿ ಮೂಲ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.

ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ ಮಾಡಿ, ಜಿಲ್ಲಾಡಳಿತಗಳಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ಆಯಾಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಶುಲ್ಕ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಭೈರೇಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎ.ಎಸ್.ಬಾಬು, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಕಾರ್ಯದರ್ಶಿ ಗಿರೀಶ್, ತಾಲೂಕಿನ ಅಧ್ಯಕ್ಷ ರಾಮಕೃಷ್ಣಯ್ಯ, ಚನ್ನಪಟ್ಟಣ ತಾಲೂಕಿನ ಅಧ್ಯಕ್ಷ ಮಂಚೇಗೌಡ, ಮುಖಂಡರಾದ ಅನ್ನದಾನಯ್ಯ ಇದ್ದರು.