ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ದಕ್ಷಿಣ ಭಾರತದ ನೇತೃತ್ವವನ್ನು ಸುರಪುರ ಸಂಸ್ಥಾನ ವಹಿಸಿದ್ದು, ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದು. ಇತಿಹಾಸವನ್ನು ನೈಜತೆಯ ನೆಲಗಟ್ಟಿನಲ್ಲಿ ರಚಿಸಿ ಸುರಪುರ ಸಂಸ್ಥಾನಕ್ಕೆ ಕೊಡುಗೆಯಾಗಿ ಇತಿಹಾಸಕಾರರು ನೀಡಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಶೂರನಾಯಕ ಸಂಸ್ಥಾನ ಸುರಪುರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಬ್ರಿಟಿಷರ ವಸಹಾತುಶಾಹಿ ವಿರುದ್ಧ ಹೋರಾಡಿದ ಸುರಪುರ ಸಂಸ್ಥಾನದ ಅರಸರಿಗೆ ದೂರದೃಷ್ಟಿಯಿತ್ತು. ದಾಸ್ಯದ ಬಿಡುಗಡೆಗಾಗಿ ಹೋರಾಟ ನಡೆಸಿದರು. ಪ್ರಸ್ತುತ ಯುವ ಪೀಳಿಗೆಗೆ ಇತಿಹಾಸ ತಿಳಿಯುವ ಅವಶ್ಯಕತೆಯಿದೆ ಎಂದರು.
ಸಗರ ನಾಡಿನ ಸುರಪುರ ಸಂಸ್ಥಾನದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವೆ. ಪ್ರಸ್ತುತ ದಿನಮಾನಗಳಲ್ಲಿ ಮಾನವೀಯತೆ ಕ್ಷೀಣಿಸಿದ್ದು, ಜಾತಿಗಳ ಮಧ್ಯೆ ನಡೆಯುವ ಸಂಘರ್ಷಗಳು ಕೊನೆಗಾಣಬೇಕು. ಜಾತಿ ನೆಲಗಟ್ಟಿನಲ್ಲಿ ಮುನ್ನಡೆದರೆ ಮನೆಯಲ್ಲೇ ಜಗಳ ಆಗುತ್ತವೆ. ಆದ್ದರಿಂದ ಇತಿಹಾಸ ಅರಿತು ಜೀವನ ನಡೆಸಬೇಕು ಎಂದು ಹೇಳಿದರು.ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಸಮಸ್ಯೆ ಎದುರಾದಾಗ ಯಾವ ಪರಿಹಾರಕ್ಕೆ ಮೊರೆ ಹೋಗಿದ್ದೆವು ಎಂಬ ಅರಿವಿದ್ದರೆ ಭವಿಷ್ಯದಲ್ಲಿ ಎದುರಾಗುವ ಸಂಕಷ್ಟಗಳನ್ನ ಎದುರಿಸಬಹುದು. ಇತಿಹಾಸ ಜ್ಞಾಪಿಸೋದಕ್ಕೆ ನಮಗೆ ಚರಿತ್ರೆಯ ಅವಶ್ಯಕತೆಯಿದೆ. ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಹಲವು ವರ್ಷಗಳು ಕಳೆದಿವೆ. ಈ 34 ವರ್ಷದ ಸುದೀರ್ಘ ಇತಿಹಾಸದಲ್ಲಿ ಮನುಷ್ಯತ್ವವನ್ನು ಕಟ್ಟಿಕೊಳ್ಳುವ ಪೂರ್ವ ಪರಂಪರೆಯನ್ನ ಜ್ಞಾಪಿಸಿಕೊಂಡು ಭವಿಷ್ಯದತ್ತ ಮುಖ ಮಾಡುವುದಕ್ಕೆ ಸಹಕಾರ ನೀಡುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ತಿಳಿಸಿದರು.