ರಾಮನಗರ: ಆರ್ಥಿಕವಾಗಿ ಹಿಂದುಳಿದವರು, ಮಹಿಳೆಯರು, ಮಕ್ಕಳು, ಕಾರ್ಮಿಕರು ಹಾಗೂ ಎಲ್ಲಾ ದುರ್ಬಲ ವರ್ಗದವರೂ ಸೇರಿದಂತೆ ಪ್ರತಿಯೊಬ್ಬರಲ್ಲೂ ಕಾನೂನು ಅರಿವು ಮೂಡಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಎಂ.ಎಚ್. ಅಣ್ಣಯ್ಯನವರ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಕರೆ ನೀಡಿದರು
ರಾಮನಗರ: ಆರ್ಥಿಕವಾಗಿ ಹಿಂದುಳಿದವರು, ಮಹಿಳೆಯರು, ಮಕ್ಕಳು, ಕಾರ್ಮಿಕರು ಹಾಗೂ ಎಲ್ಲಾ ದುರ್ಬಲ ವರ್ಗದವರೂ ಸೇರಿದಂತೆ ಪ್ರತಿಯೊಬ್ಬರಲ್ಲೂ ಕಾನೂನು ಅರಿವು ಮೂಡಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಎಂ.ಎಚ್. ಅಣ್ಣಯ್ಯನವರ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಕರೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಔಟ್ ಲಾಡ್ ಇಂಡಿಯಾ ಫೌಂಡೇಶನ್, ಜಿಲ್ಲಾ ವಕೀಲರ ಸಂಘ ಹಾಗೂ ತಾಲೂಕು ವಕೀಲರ ಸಂಘ ಆಯೋಜಿಸಿದ್ದ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ದುರ್ಬಲ ವರ್ಗದವರು, ರೈತರು ಹಾಗೂ ಕಾನೂನು ಅರಿವಿಲ್ಲದೆ ಸಂಕಷ್ಟದಲ್ಲಿರುವ ಜನರ ಮನೆ ಬಾಗಿಲಿಗೆ ತೆರಳಿ ಅವರಿಗೆ ಹಕ್ಕುಗಳು ಮತ್ತು ಕಾನೂನಿನ ಅರಿವು ಮೂಡಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಅರೆಕಾಲಿಕ ಸ್ವಯಂ ಸೇವಕರು ತಮ್ಮ ತರಬೇತಿಯಲ್ಲಿ ಕಲಿತ ವಿಷಯಗಳನ್ನು ಸಮಾಜದ ಎಲ್ಲ ವರ್ಗದ ಜನರನ್ನು ತಲುಪಬೇಕು. ಜಾತಿ-ಧರ್ಮ, ಬಡವ-ಶ್ರೀಮಂತ ಎಂಬ ಭೇದ ತೋರದೆ ಗಡಿಯಾರ ಹೇಗೆ ಎಲ್ಲರಿಗೂ ಒಂದೇ ರೀತಿಯ ಸಮಯವನ್ನು ತೋರಿಸುತ್ತದೆಯೋ ಹಾಗೆಯೇ ಕಾನೂನು ಸ್ವಯಂ ಸೇವಕರು ಕೂಡ ಸಂಸ್ಕಾರಕ್ಕೆ ಬೆಲೆ ನೀಡಿ ಪ್ರೀತಿ, ವಿಶ್ವಾಸದಿಂದ ಮಾತನಾಡಿ, ಕಾನೂನು ಅರಿವಿಲ್ಲದ ನೊಂದವರಿಗೆ ಕಾನೂನು ಸ್ವಯಂಸೇವಕರು ಬೆಳಕಾಗಿ ಸೂಕ್ತ ಮಾರ್ಗದರ್ಶನ, ಆಪ್ತಸಮಾಲೋಚನೆಯಿಂದ ಅವರ ಭವಿಷ್ಯ ನಿರ್ಮಾಣಕ್ಕೆ ದಾರಿಯಾಗಬೇಕು ಎಂದು ಹೇಳಿದರು.
ಮಹಿಳೆಯರು, ಮಕ್ಕಳು, ಬಾಲಕಾರ್ಮಿಕರು ಹಾಗೂ ಕಾನೂನು ನೆರವು ಅಗತ್ಯವಿರುವವರಿಗೆ ಸೂಕ್ತ ಅರಿವು ಮೂಡಿಸಬೇಕು. ಪ್ರತಿಯೊಬ್ಬರೂ ತಮ್ಮ ಕಾನೂನು ಹಕ್ಕುಗಳನ್ನು ತಿಳಿದುಕೊಂಡು ಅವುಗಳನ್ನು ಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಎಲ್ಲರೂ ಪರಸ್ಪರ ಗೌರವ, ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಲು ಕಾನೂನು ಸ್ವಯಂಸೇವಕರು ಶ್ರಮಿಸಬೇಕು ಎಂದು ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಸೂಕ್ತ ಅನುಮತಿ ಪಡೆದು, ಅರೆಕಾಲಿಕ ಕಾನೂನು ಸ್ವಯಂ ಸೇವಕರು ಜೈಲುಗಳು, ಲಾಕ್-ಅಪ್‌ಗಳು, ಮನೋವೈದ್ಯಕೀಯ ಆಸ್ಪತ್ರೆಗಳು, ಮಕ್ಕಳ ಗೃಹಗಳು/ವೀಕ್ಷಣಾ ಗೃಹಗಳಿಗೆ ಭೇಟಿ ನೀಡಿ, ಅಲ್ಲಿರುವವರ ಕಾನೂನು ಸೇವೆಯ ಅಗತ್ಯಗಳನ್ನು ಪರಿಶೀಲಿಸಬೇಕು. ಮೂಲಭೂತ ಅಗತ್ಯಗಳಲ್ಲಿ, ವಿಶೇಷವಾಗಿ ನೈರ್ಮಲ್ಯಕ್ಕೆ ಸಂಬಂಧಿಸಿದ ಅಗತ್ಯಗಳಲ್ಲಿ ಯಾವುದೇ ಕೊರತೆ ಕಂಡುಬಂದರೆ, ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಮಕ್ಕಳ ಹಕ್ಕುಗಳ ಉಲ್ಲಂಘನೆ, ಬಾಲಕಾರ್ಮಿಕ ಪದ್ಧತಿ, ಕಾಣೆಯಾದ ಮಕ್ಕಳು ಹಾಗೂ ಬಾಲಕಿಯರ ಕಳ್ಳಸಾಗಣೆ ಕುರಿತು ಸಮೀಪದ ಕಾನೂನು ಸೇವಾ ಸಂಸ್ಥೆಗಳಿಗೆ ಅಥವಾ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ಮಾಡಬೇಕು. ಪ್ಯಾರಾ-ಲೀಗಲ್ ಸ್ವಯಂಸೇವಕರು ತಮ್ಮ ಕಾರ್ಯಕ್ಷೇತ್ರದಲ್ಲಿ ನಡೆಯುವ ಕಾನೂನು ಉಲ್ಲಂಘನೆಗಳು ಅಥವಾ ಅನ್ಯಾಯದ ಕೃತ್ಯಗಳ ಮೇಲೆ ನಿರಂತರ ನಿಗಾ ವಹಿಸಬೇಕು. ಸಮಿತಿಯಿಂದ ಪರಿಣಾಮಕಾರಿ ಪರಿಹಾರಾತ್ಮಕ ಕ್ರಮ ಕೈಗೊಳ್ಳಲು ಸಹಕರಿಸಬೇಕು ಎಂದು ಅಣ್ಣಯ್ಯನವರ ತಿಳಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿ.ಆರ್.ಸವಿತಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಕೆಂಪಯ್ಯ, ಉಪಾಧ್ಯಕ್ಷ ಜಯರಾಂ, ಕಾರ್ಯದರ್ಶಿ ಚಂದ್ರಶೇಖರ್, ಬೆಂಗಳೂರಿನ ಔಟ್ ಲಾಡ್ ಇಂಡಿಯಾ ಫೌಂಡೇಶನ್ ತರಬೇತುದಾರ ಶಮ ಹಾಗೂ ಮೀಮಾನ್ಸಾ ಸಿಂಗ್ ಇತರರು ಉಪಸ್ಥಿತರಿದ್ದರು.
7ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಪಂ ಸಭಾಂಗಣದಲ್ಲಿ ಅರೆಕಾಲಿಕ ಕಾನೂನು ಸ್ವಯಂಸೇವಕರಿಗೆ ಆಯೋಜಿಸಿದ್ದ ಪುನಶ್ಚೇತನ ತರಬೇತಿ ಕಾರ್ಯಾಗಾರವನ್ನು ನ್ಯಾಯಾಧೀಶರಾದ ಅಣ್ಣಯ್ಯನವರ ಉದ್ಘಾಟಿಸಿದರು.