ಬಳಿಕ ಸಚಿವರು ಹಾಲಹಳ್ಳಿ ಸರ್ಕಾರಿ ಶಾಲೆಗೆ ತೆರಳಿ ಅರ್ಸೆಲರ್ ಮಿತ್ತಲ್ ನಿಫಾನ್ ಸ್ಟೀಲ್ ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ಅಡಿಯಲ್ಲಿ ₹32.50 ಲಕ್ಷ ಅನುದಾನದಲ್ಲಿ ನಿರ್ಮಾಣ ಮಾಡಲಾಗಿರುವ ಎರಡು ಸುಸಜ್ಜಿತ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಶೇಷಚೇತನರಿಗೆ ಅನುಕಂಪದ ಅಗತ್ಯವಿಲ್ಲ. ಬದಲಿಗೆ ಅವರಿಗೆ ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಸಮಾಜದಲ್ಲಿ ಅವರಿಗೆ ಕೂಡ ಸಮಾನ ಅವಕಾಶಗಳು ದೊರೆಯಬೇಕು. ಈ ಬಗ್ಗೆ ಪ್ರತಿಯೊಬ್ಬರಿಗೂ ಹೊಣೆಗಾರಿಕೆ ಇರಬೇಕು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾರತೀಯ ಉಕ್ಕ ಪ್ರಾಧಿಕಾರ ಮತ್ತು ಭಾರತದ ಕೃತಕ ಅಂಗಗಳ ಉತ್ಪಾದನಾ ನಿಗಮದ ವತಿಯಿಂದ ನಡೆದ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅನುದಾನದಲ್ಲಿ ವಿಶೇಷ ಚೇತನರಿಗೆ ನೀಡುವ ವಿವಿಧ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ನನ್ನ ಹೃದಯಕ್ಕೆ ಹತ್ತಿರವಾದ ವಿಶೇಷ ಚೇತನರಿಗೆ ವಿಧಾನ ಸೌಧಕ್ಕೆ ಬರಲು ಅವಕಾಶ ಮಾಡಿಕೊಟ್ಟಿದ್ದೆ. ಆದರೆ, ಇಂದು ಅವರಿಗೆ ಆ ಸೌಲಭ್ಯ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಸುಮಾರು 299 ಮಂದಿಗೆ ಬ್ಯಾಟರಿ ಚಾಲಿತ ತ್ರಿಚಕ್ರ ವಾಹನಗಳು, ಕೃತಕ ಕಾಲುಗಳು, ಶ್ರವಣ ಉಪಕರಣ ಸೇರಿ ವಿವಿಧ ಉಪಕರಣಗಳನ್ನು ವಿತರಿಸಿದ್ದೇವೆ. ನನ್ನ ವ್ಯಾಪ್ತಿಯ ಉಕ್ಕು ಸಚಿವಾಲಯದ ಭಾಗವಾಗಿ ಭಾರತೀಯ ಉಕ್ಕು ಪ್ರಾಧಿಕಾರ ಹಾಗೂ ಭಾರತದ ಕೃತಕ ಅಂಗಗಳ ಉತ್ಪಾದನಾ ನಿಗಮ ಸಿಎಸ್‌ಆರ್ ಅನುದಾನಡಿ ನೀಡಿರುವ ಸೌಲಭ್ಯಗಳನ್ನು ವಿತರಿದ್ದೇವೆ. ಒಟ್ಟು ₹50 ಲಕ್ಷ ಮೌಲ್ಯದ ಸಹಾಯಕ ಸಾಧನಗಳನ್ನು ಕೊಡಲಾಗಿದೆ ಎಂದು ವಿವರಿಸಿದರು.

ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ ತನ್ನ ಸಿಎಸ್‌ಆರ್ ನಿಧಿಯಿಂದ ನೀಡಿರುವ ₹1 ಕೋಟಿ ಮೊತ್ತದಲ್ಲಿ ಆಸ್ಪತ್ರೆಗೆ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಗೆ ಕೇಂದ್ರ ಸಚಿವ ಎಚ್ಡಿಕೆ ಚಾಲನೆ ನೀಡಿದರು.

ಬಳಿಕ ಸಚಿವರು ಹಾಲಹಳ್ಳಿ ಸರ್ಕಾರಿ ಶಾಲೆಗೆ ತೆರಳಿ ಅರ್ಸೆಲರ್ ಮಿತ್ತಲ್ ನಿಫಾನ್ ಸ್ಟೀಲ್ ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ಅಡಿಯಲ್ಲಿ ₹32.50 ಲಕ್ಷ ಅನುದಾನದಲ್ಲಿ ನಿರ್ಮಾಣ ಮಾಡಲಾಗಿರುವ ಎರಡು ಸುಸಜ್ಜಿತ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು.

ನಂತರ ನಗರದ ಮಾಜಿ ಮುನ್ಸಿಪಲ್ ಕಾಲೇಜಿನಲ್ಲಿ ಎರಡು ಹೊಸ ತರಗತಿ ಕೊಠಡಿಗಳಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೂ ಕೂಡ ಅರ್ಸೆಲರ್ ಮಿತ್ತಲ್ ನಿಫಾನ್ ಸ್ಟೀಲ್ ಸಿಎಸ್‌ಆರ್ ನಿಧಿ ಅಡಿಯಲ್ಲಿ ₹32.50 ಲಕ್ಷ ಅನುದಾನ ನೀಡಲಾಗಿದೆ. ಒಟ್ಟು ₹2.15 ಕೋಟಿ ಮೊತ್ತದ ಸಿಎಸ್‌ಆರ್ ಅನುದಾನದಡಿ ವಿವಿಧ ಕಾರ್‍ಯಕ್ರಮಗಳಿಗೆ ಸಚಿವರು ಚಾಲನೆ ನೀಡಿದರು.