ವೃದ್ಧೆ ಮನೆ ನಕಲಿ ದಾಖಲೆ ಸೃಷ್ಟಿಸಿ ₹4 ಕೋಟಿ ಸಾಲ!

| Published : Dec 23 2023, 01:45 AM IST

ಸಾರಾಂಶ

ವೃದ್ಧೆಯ ಮನೆ ದಾಖಲೆ ಪಡೆದು ನಕಲಿ ಸೃಷ್ಟಿಸಿ ಬ್ಯಾಂಕಿಂದ ಸಾಲ: ಐವರ ಸೆರೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ವೃದ್ಧೆಯೊಬ್ಬರ ಮನೆಗೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿ ಫೋರ್ಜರಿ ಸಹಿ ಮಾಡಿ ಒಂದೇ ದಾಖಲೆಯನ್ನು ಮೂರು ಬ್ಯಾಂಕ್‌ಗಳಲ್ಲಿ ಅಡಮಾನವಿರಿಸಿ ಬರೋಬ್ಬರಿ ₹3.85 ಕೋಟಿ ಸಾಲ ಪಡೆದು ವಂಚಿಸಿದ ಆರೋಪದಡಿ ಐವರ ಗ್ಯಾಂಗ್‌ವೊಂದನ್ನು ಸಿಸಿಬಿ ಆರ್ಥಿಕ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ.

ಮಹೇಶ್‌(50), ಭಾಸ್ಕರ್‌ ಕೃಷ್ಣ(50), ಅಭಿಷೇಕ್‌ ಗೌಡ(28), ಶಶಿ ಕುಮಾರ್‌(45) ಹಾಗೂ ಅರುಣ್‌(55) ಬಂಧಿತರು. ಆರೋಪಿಗಳ ಬ್ಯಾಂಕ್‌ ಖಾತೆಗಳನ್ನು ಸೀಜ್‌ ಮಾಡಿದ್ದು, ವಂಚನೆಗೆ ಕೃತ್ಯಕ್ಕೆ ಬಳಸಿದ್ದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಜೆ.ಪಿ.ನಗರ 6ನೇ ಹಂತದ ನಿವಾಸಿ ಅಂಬುಜಾಕ್ಷಿ ನಾಗರಕಟ್ಟಿ(75) ಎಂಬುವವರು ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣ ಸಿಸಿಬಿ ವರ್ಗಾವಣೆಯಾದ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ದೂರುದಾರೆ ಅಂಬುಜಾಕ್ಷಿ ಅವರು ಜೆ.ಪಿ.ನಗರ 6ನೇ ಹಂತದಲ್ಲಿ 1350 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ಡ್ಯೂಪ್ಲೆಕ್ಸ್‌ ಮನೆ ಕಟ್ಟಿಸಿಕೊಂಡು ಒಂಟಿಯಾಗಿ ನೆಲೆಸಿದ್ದಾರೆ. ಇವರಿಗೆ ಒಬ್ಬ ಮಗನಿದ್ದು, ಉದ್ಯೋಗ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದಾರೆ. ಹೀಗಾಗಿ ಈ ಮನೆಯನ್ನು ಮಾರಾಟ ಮಾಡಿ ವಿದೇಶದಲ್ಲಿರುವ ಮಗನ ಜತೆಗೆ ನೆಲೆಸಲು ಅಂಬುಜಾಕ್ಷಿ ತೀರ್ಮಾನಿಸಿದ್ದರು. ಅದರಂತೆ ಮನೆ ಮಾರಾಟಕ್ಕಿಟ್ಟುರುವ ಬಗ್ಗೆ ಪರಿಚಿತರಿಗೆ ಹೇಳಿದ್ದಾರೆ.

ಮನೆ ಮಾರಾಟದ ವಿಚಾರ ತಿಳಿದು ಪಕ್ಕದ ಮನೆಯ ಮಂಜುನಾಥ್‌ ಎಂಬಾತ ಕಳೆದ ಮಾರ್ಚ್‌ನಲ್ಲಿ ಮನೆ ಬ್ರೋಕರ್‌ ಭಾಸ್ಕರ್‌ ಕೃಷ್ಣ ಎಂಬುವವನನ್ನು ಅಂಬುಜಾಕ್ಷಿಗೆ ಪರಿಚಯಿಸಿದ್ದ. ಈ ಭಾಸ್ಕರ್‌ ಕೃಷ್ಣ ತಾನೇ ಮನೆಯನ್ನು ಖರೀದಿಸುವುದಾಗಿ ₹10 ಸಾವಿರ ಮುಂಗಡ ಹಣ ನೀಡಿ ಮನೆಯ ಸೇಲ್‌ ಡೀಡ್‌, ಪ್ಲ್ಯಾನ್‌ ಪ್ರತಿ, ಇಸಿ, ಬಿಡಿಎಯಿಂದ ನೀಡಿರುವ ನಿವೇಶನ ಅಲಾಟ್‌ಮೆಂಟ್‌ ಪ್ರತಿ ಹಾಗೂ ಅಂಬುಜಾಕ್ಷಿಯವರ ಪಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ನಕಲು ಪ್ರತಿ ಸೇರಿದಂತೆ ಇತರೆ ದಾಖಲೆಗಳನ್ನು ಪಡೆದುಕೊಂಡಿದ್ದ.

ಬ್ಯಾಂಕ್‌ ಅಧಿಕಾರಿ ಸೋಗಲ್ಲಿ ಮನೆ ಪರಿಶೀಲನೆ:

ಕೆಲ ದಿನಗಳ ಬಳಿಕ ಈ ಮನೆ ಮೇಲೆ ಲೋನ್‌ ಮಾಡಿಸುವುದಾಗಿ ಆರೋಪಿಗಳಾದ ಮಹೇಶ್‌, ಅಭಿಷೇಕ್‌ ಹಾಗೂ ಇತರೆ ಆರೋಪಿಗಳನ್ನು ಬ್ಯಾಂಕ್‌ ಅಧಿಕಾರಿಗಳೆಂದು ಮನೆ ಬಳಿ ಕರೆತಂದು ಮನೆ ತೋರಿಸಿಕೊಂಡು ಭಾಸ್ಕರ್‌ ಕೃಷ್ಣ ಹೋಗಿದ್ದ. ಭಾಸ್ಕರ್‌ ಕೃಷ್ಣನ ನಡವಳಿಕೆ ಬಗ್ಗೆ ಅನುಮಾನಗೊಂಡ ಅಂಬುಜಾಕ್ಷಿಯವರು ಮನೆ ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಬಳಿಕ ಕೆಲ ದಿನಗಳ ನಂತರ ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ, ಮನೆಯ ನಕಲಿ ದಾಖಲೆ ಸೃಷ್ಟಿಸಿ ಅಂಬುಜಾಕ್ಷಿ ಅವರ ಹೆಸರಿನಲ್ಲೇ ನಕಲಿ ಬ್ಯಾಂಕ್‌ ಖಾತೆ ತೆರೆದು ಬರೋಬ್ಬರಿ ₹3.85 ಕೋಟಿ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಬಳಿಕ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಗೆ ವಂಚನೆ ದೂರು ನೀಡಿದ್ದಾರೆ. ಈ ಪ್ರಕರಣ ಸಿಸಿಬಿ ವರ್ಗಾವಣೆಯಾದ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಕಲಿ ದಾಖಲೆ ಬಳಸಿ 3 ಬ್ಯಾಂಕ್‌ಗಳಲ್ಲಿ ಸಾಲ

ಆರೋಪಿಗಳು ಅಂಬುಜಾಕ್ಷಿ ಅವರ ಮನೆಯ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸಹಿ ನಕಲು ಮಾಡಿ ಮೂರು ಬ್ಯಾಂಕ್‌ಗಳಲ್ಲಿ ಮನೆಯ ನಕಲಿ ದಾಖಲೆಗಳನ್ನು ಅಡಮಾನವಿರಿಸಿ ಬರೋಬ್ಬರಿ ₹3.85 ಕೋಟಿ ಸಾಲ ಪಡೆದು ವಂಚಿಸಿದ್ದಾರೆ. ಇದೇ ನಕಲಿ ದಾಖಲೆ ಸಲ್ಲಿಸಿ ನಾಲ್ಕನೇ ಬಾರಿ ಸಾಲ ಪಡೆಯಲು ಆರೋಪಿಗಳು ತಯಾರಿ ನಡೆಸಿದ್ದರು. ಅಷ್ಟರಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.ಒಂಟಿ ಮಹಿಳೆಯರೇ ಟಾರ್ಗೆಟ್‌

ಬಂಧಿತ ಆರೋಪಿಗಳು ಹಲವು ವರ್ಷಗಳಿಂದ ಪರಸ್ಪರ ಪರಿಚಿತರು. ಆರೋಪಿ ಮಹೇಶ್‌ 2022ರಲ್ಲಿ ರಾಜಾಜಿನಗರ ಠಾಣಾ ವ್ಯಾಪ್ತಿಯಲ್ಲಿ ಒಂಟಿ ಮಹಿಳೆಯೊಬ್ಬರ ಮನೆಯ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನಲ್ಲಿ ಅಡಮಾನವಿರಿಸಿ ₹85 ಲಕ್ಷ ಸಾಲ ಪಡೆದಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳು, ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ವಂಚಿಸುವ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ. ಈ ವಂಚನೆ ಗ್ಯಾಂಗ್‌ನಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆಯಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.