ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಮತದಾರರಿಗೆ ಮತ ಚಲಾವಣೆ ಬಗ್ಗೆ ಜಾಗೃತಿ ಮೂಡಿಸುವುದೇ ರಾಜಕೀಯ ಪಕ್ಷಗಳಿಗೆ ದೊಡ್ಡ ಸವಾಲಾಗಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಪಶ್ಚಿಮ ಪದವೀಧರರ ಚುನಾವಣೆಯಲ್ಲಿ ಮತದಾರರಿಗೆ ಮತ ಚಲಾವಣೆ ಬಗ್ಗೆ ಜಾಗೃತಿ ಮೂಡಿಸುವುದೇ ರಾಜಕೀಯ ಪಕ್ಷಗಳಿಗೆ ದೊಡ್ಡ ಸವಾಲಾಗಿದೆ.
ಹಿಂದಿನ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಶೇ.16-18ರಷ್ಟು ಮತಗಳು ಕುಲಗೆಟ್ಟಿವೆ. ಅದಕ್ಕಾಗಿ ಯಾವ ರೀತಿ ಮತಚಲಾಯಿಸಬೇಕು, ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡುವುದೇ ಪಕ್ಷಗಳಿಗೆ ದೊಡ್ಡ ತಲೆ ನೋವಾಗಿದೆ.ಪಶ್ಚಿಮ ಪದವೀಧರ ಕ್ಷೇತ್ರವು ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ ಹೀಗೆ ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ಹೊಂದಿದ್ದು ಪ್ರತಿ ಸಲವೂ ಮತದಾರರ ನೋಂದಣಿ ಮಾಡಿಸಲೇಬೇಕು. ಪದವೀಧರರೇ ಮತದಾರರು. ಅದರಲ್ಲೂ ವಿವಿಧ ಇಲಾಖೆಗಳ ನೌಕರರು, ಶಿಕ್ಷಕರೇ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದ ಮತದಾರರು. ಸುಶಿಕ್ಷಿತರೇ ಮತದಾರರಾಗಿರುವುದು ಮತ ಕುಲಗೇಡುವ ಪ್ರಶ್ನೆಯೇ ಇಲ್ಲ. ಅವರಿಗೇನು ಮತಚಲಾಯಿಸುವ ಬಗ್ಗೆ ಮಾಹಿತಿ ನೀಡುವುದು ಎಂದು ನೀವು ಭಾವಿಸಿದರೆ ಅದು ತಪ್ಪು. ಹಿಂದಿನ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಶೇ.16-18ರಷ್ಟು ಮತಗಳು ತಿರಸ್ಕಾರಗೊಂಡಿರುತ್ತವೆ.
ಏಕೆ ತಿರಸ್ಕಾರ:ಇಲ್ಲಿ ಇವಿಎಂ ಮಷಿನ್ ಇರುವುದಿಲ್ಲ. ಬ್ಯಾಲೇಟ್ ಪೇಪರ್ ಇರುತ್ತದೆ. ಜತೆಗೆ ಪ್ರಾಶಸ್ತ್ಯದ ಮತ ಚಲಾವಣೆ ಮಾಡಬೇಕು. ಮೊದಲ ಪ್ರಾಶಸ್ತ್ಯ, 2ನೆಯ ಪ್ರಾಶಸ್ತ್ಯ.,.. ತಮಗೆ ಯಾರಿಗೆ ಮತ ಚಲಾಯಿಸಬೇಕೋ ಅವರಿಗೆ ಪ್ರಾಶಸ್ತ್ಯದ ಮತ ಚಲಾಯಿಸಬೇಕು. ಅದು ರೋಮನ್ ಅಂಕಿ ಮೂಲಕವೇ ಮತ ಚಲಾಯಿಸಬೇಕು. ಬೇರೆ ಬೇರೆ ಅಂಕಿ ಸಂಖ್ಯೆಗಳನ್ನು ಬರೆದರೆ ಮತ ಕುಲಗೇಡುತ್ತದೆ. ಕೆಲವರು ರೋಮನ್ ಅಂಕಿ ಬದಲು ಬೇರೆ ಬೇರೆ ಅಂಕಿ ಸಂಖ್ಯೆ, ಚಿನ್ಹೆ ಬಳಸುತ್ತಾರೆ. ಆಗ ಸಹಜವಾಗಿ ಮತ ಕುಲಗೇಡುತ್ತದೆ.
ಕಳೆದ ಚುನಾವಣೆಯಲ್ಲಿ ಒಟ್ಟು 74268 ಮತಗಳಲ್ಲಿ 52,041 ಮತ ಚಲಾವಣೆಯಾಗಿದ್ದವು. ಇದರಲ್ಲಿ 8772 ಮತ ತಿರಸ್ಕೃತಗೊಂಡಿವೆ. ಈ ರೀತಿ ಮತಗಳು ಕುಲಗೇಡುವುದರಿಂದ ಚುನಾವಣೆ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತದೆ. ಯಾರಾದರೂ ಒಬ್ಬ ಅಭ್ಯರ್ಥಿಗೆ ಸಂಬಂಧಪಟ್ಟ 5-6 ಸಾವಿರ ಮತ ಕುಲಗೆಟ್ಟರೆ ಗೆಲ್ಲುವ ಅವಕಾಶವಿದ್ದರೂ ಪರಾಭವಗೊಳ್ಳಬೇಕಾಗುತ್ತದೆ.ಜಾಗೃತಿ:
ಈ ಕಾರಣದಿಂದ ರಾಜಕೀಯ ಪಕ್ಷಗಳು ಮತ ಕುಲಗೆಡದಂತೆ ಯಾವ ರೀತಿ ಮತಚಲಾಯಿಸಬೇಕು, ಮತಗಟ್ಟೆ ಕೇಂದ್ರದ ಸಿಬ್ಬಂದಿ ನೀಡುವ ಪೆನ್ನಿನಿಂದಲೇ ಮಾರ್ಕ್ ಮಾಡಬೇಕು, ಯಾವ ರೀತಿ ಮಾರ್ಕ್ ಮಾಡಬೇಕು ಎಂಬ ಬಗ್ಗೆ ಪದವೀಧರರಲ್ಲಿ ಜಾಗೃತಿ ಮೂಡಿಸುತ್ತಿವೆ. ಅಭ್ಯರ್ಥಿಗಳು ತಾವು ಎಲ್ಲಿಯೇ ಪ್ರಚಾರಕ್ಕೂ ಹೋದರೂ ಗೆದ್ದ ಮೇಲೆ ತಾವೇನೂ ಮಾಡುತ್ತೇವೆ ಎಂಬುದನ್ನು ನಂತರ ಹೇಳುತ್ತಾರೆ. ಆದರೆ, ಅದಕ್ಕಿಂತ ಮುಂಚೆ ಮತ ಚಲಾಯಿಸುವುದು ಹೇಗೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ ವಿಡಿಯೋ ಮಾಡಿ ಅದನ್ನು ವ್ಯಾಟ್ಸ್ಆ್ಯಪ್ ಗ್ರೂಪ್ ಮೂಲಕವೂ ಪ್ರಚಾರ ನಡೆಸುತ್ತಿವೆ.ಒಟ್ಟಿನಲ್ಲಿ ಮತದಾರರಿಂದ ಮತ ಹಾಕಿಸಿಕೊಳ್ಳುವುದು ಎಷ್ಟು ಮುಖ್ಯವೋ ಅಷ್ಟೇ ಅದು ಕುಲಗೇಡದಂತೆ ಮತ ಹಾಕಿ ಎಂದು ತಿಳಿಹೇಳುವುದೂ ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.ಮತಗಳು ಕುಲಗೇಡದಂತೆ ಯಾವ ರೀತಿ ಮತಚಲಾಯಿಸಬೇಕು ಎಂಬ ಬಗ್ಗೆಯೂ ಪ್ರಚಾರದ ವೇಳೆ ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ವಿಡಿಯೋ ಮಾಡಿ ಎಲ್ಲೆಡೆ ಪ್ರಚಾರ ಮಾಡಲಾಗುತ್ತಿದೆ.
ಮೋಹನ ಲಿಂಬಿಕಾಯಿ, ಕಾಂಗ್ರೆಸ್ ಅಭ್ಯರ್ಥಿ