ಪುಸ್ತಕ ಮನೆಯಲ್ಲಿ ಶ್ರೀರಾಮನ ಮಿನಿ ಮ್ಯೂಸಿಯಂ ಸೃಷ್ಟಿ..!

| Published : Jan 22 2024, 02:17 AM IST

ಸಾರಾಂಶ

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿರುವ ಅಂಕೇಗೌಡರ ಪುಸ್ತಕ ಮನೆ ಇದೀಗ ಶ್ರೀರಾಮನ ಮಿನಿ ಮ್ಯೂಸಿಯಂ ಆಗಿ ಪರಿವರ್ತನೆಗೊಂಡಿದೆ. ಶ್ರೀರಾಮನ ಕುರಿತ ಸಹಸ್ರಾರು ಪುಸ್ತಕಗಳು, ನಾಣ್ಯಗಳು, ಫೋಟೋಗಳು, ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ, ಸಂಸ್ಕೃತ ಸೇರಿದಂತೆ ಹಲವಾರು ಭಾಷೆಗಳಲ್ಲಿರುವ ಶ್ರೀರಾಮನ ಪುಸ್ತಕಗಳು ಜನರನ್ನು ಆಕರ್ಷಿಸುತ್ತಿವೆ. ಇವುಗಳಲ್ಲಿ ಈಸ್ಟ್ ಇಂಡಿಯಾ ಕಂಪನಿ ಹೊರತಂದಿದ್ದ ನಾಣ್ಯಗಳು ಇವೆ.

ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯ ಪಾಂಡವಪುರದಲ್ಲಿರುವ ಅಂಕೇಗೌಡರ ಪುಸ್ತಕ ಮನೆ ಇದೀಗ ಶ್ರೀರಾಮನ ಮಿನಿ ಮ್ಯೂಸಿಯಂ ಆಗಿ ಪರಿವರ್ತನೆಗೊಂಡಿದೆ. ಇಲ್ಲಿ ಮೂರು ಸಾವಿರಕ್ಕೂ ಹೆಚ್ಚು ಶ್ರೀರಾಮನ ಕುರಿತ ಪುಸ್ತಕ ಸಂಗ್ರಹವಾಗಿರುವುದಲ್ಲದೇ, ನಾಲ್ಕು ಶತಮಾನದ ಹಿಂದಿನ ಅಪರೂಪದ ಶ್ರೀರಾಮ, ಹನುಮನ ನಾಣ್ಯಗಳು ಪ್ರದರ್ಶನಕ್ಕಿಡಲಾಗಿದೆ.

ಸೋಮವಾರ (ಜ.22) ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯಾಗುತ್ತಿರುವ ಬೆನ್ನಲ್ಲೇ ಅಂಕೇಗೌಡರ ಪುಸ್ತಕ ಮನೆ ಎಲ್ಲರ ಗಮನಸೆಳೆದಿದೆ. ಅಂಕೇಗೌಡರ ಪುಸ್ತಕದ ಮನೆಯಲ್ಲಿರುವ ಶ್ರೀರಾಮನ ಕುರಿತ ಸಹಸ್ರಾರು ಪುಸ್ತಕಗಳು, ನಾಣ್ಯಗಳು, ಫೋಟೋಗಳು, ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ, ಸಂಸ್ಕೃತ ಸೇರಿದಂತೆ ಹಲವಾರು ಭಾಷೆಗಳಲ್ಲಿರುವ ಶ್ರೀರಾಮನ ಪುಸ್ತಕಗಳು ಜನರನ್ನು ಆಕರ್ಷಿಸುತ್ತಿವೆ.

ಶ್ರೀರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿರುವ ಸುಸಂದರ್ಭದಲ್ಲಿ ಪುಸ್ತಕ ಮನೆಯಲ್ಲಿ ಒಂದು ವಾರಗಳ ಕಾಲ ಪುಸ್ತಕಗಳ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಪುಸ್ತಕ ಪ್ರದರ್ಶನದಲ್ಲಿ ಪಾಲ್ಗೊಂಡು ಶ್ರೀರಾಮನ ಬಗ್ಗೆ ಅಧ್ಯಯನ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

10 ಲಕ್ಷ ಪುಸ್ತಕ ಸಂಗ್ರಹಿಸಿ ಲಿಮ್ಕಾ ದಾಖಲೆ ಮಾಡಿದ್ದ ಅಂಕೇಗೌಡರು. ಪ್ರಸ್ತುತ 15ಲಕ್ಷಕ್ಕೂ ಅಧಿಕ ಪುಸ್ತಕ ಸಂಗ್ರಹಿಸಿಟ್ಟಿದ್ದಾರೆ. 15 ಲಕ್ಷ ಪುಸ್ತಕಗಳ ಪೈಕಿ ಶ್ರೀರಾಮನ ಕುರಿತು ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ.

ಪುಸ್ತಕದ ಜೊತೆ ಅಪರೂಪದ ಶ್ರೀರಾಮ, ಹನುಮಂತನ ಚಿತ್ರವಿರುವ 25 ನಾಣ್ಯಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಶ್ರೀರಾಮ, ಲಕ್ಷ್ಮಣ, ಸೀತೆ, ಹನುಮ ಇರುವ ನಾಣ್ಯಗಳು 1600, 1700, 1818ರಲ್ಲಿ ಬಿಡುಗಡೆ ಮಾಡಿದ್ದ ಹಳೆಯ ನಾಣ್ಯಗಳಾಗಿವೆ. ಇವುಗಳಲ್ಲಿ ಈಸ್ಟ್ ಇಂಡಿಯಾ ಕಂಪನಿ ಹೊರತಂದಿದ್ದ ನಾಣ್ಯಗಳು ಇವೆ.

ಕಳೆದ 50 ವರ್ಷಗಳಿಂದ ನಾನು ಪುಸ್ತಕಗಳನ್ನು ಸಂಗ್ರಹಿಸುತ್ತಾ ಬಂದಿದ್ದೇನೆ. ನನ್ನ ಬಳಿ 3 ಸಾವಿರದಷ್ಟು ಶ್ರೀರಾಮನಕುರಿತ ಪುಸ್ತಕಗಳು, 25 ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮನ ಚಿತ್ರವಿರುವ ನಾಣ್ಯಗಳಿವೆ. ಶ್ರೀರಾಮಮಂದಿರ ಉದ್ಘಾಟನೆಗೊಳ್ಳುತ್ತಿರುವ ಕಾರಣ ಅವೆಲ್ಲವನ್ನೂ ಒಂದು ವಾರ ಪ್ರದರ್ಶನಕ್ಕಿಟ್ಟಿದ್ದೇನೆ. ಹೆಚ್ಚು ಜನರು ಬಂದರೆ ಪ್ರದರ್ಶನ ಮುಂದುವರೆಸುತ್ತೇನೆ.

- ಕೆ.ಅಂಕೇಗೌಡ, ಪುಸ್ತಕಮನೆ, ಪಾಂಡವಪುರ