ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಅಭಿವೃದ್ಧಿ ಪ್ರಾಧಿಕಾರ ರಚನೆ

| Published : Apr 25 2025, 11:48 PM IST

ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಅಭಿವೃದ್ಧಿ ಪ್ರಾಧಿಕಾರ ರಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಪುಣ್ಯ ಕ್ಷೇತ್ರಗಳಾದ ಚಿಕ್ಕಲ್ಲೂರು, ಕಪ್ಪಡಿ, ಬಿ.ಜಿ.ಪುರ, ಕುರುಬನಕಟ್ಟೆ ಹಾಗೂ ಆದಿಹೊನ್ನಾಯಕನಹಳ್ಳಿ ಪುಣ್ಯಕ್ಷೇತ್ರಗಳಿಗೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ರಾಜ್ಯ ಸರ್ಕಾರವು ಏ.24ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದು ಸರಿಯಲ್ಲ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮಳವಳ್ಳಿ, ಆದಿಹೊನ್ನಾಯಕನಹಳ್ಳಿ ಹಾಗು ಕಪ್ಪಡಿ ಕ್ಷೇತ್ರಗಳ ಮಠಾಧಿಪತಿ ಎಂ.ಎಲ್.ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ವಿರೋಧ ವ್ಯಕ್ತಪಡಿಸಿದ್ದಾರೆ.ಮಂಟೇಸ್ವಾಮಿ, ರಾಚಪ್ಪಾಜಿ ಹಾಗೂ ಸಿದ್ದಪ್ಪಾಜಿ ನೆಲೆಯಾಗಿರುವ ಪುಣ್ಯ ಕ್ಷೇತ್ರಗಳು ಹಾಗೂ ಇದಕ್ಕೆ ಹೊಂದಿಕೊಂಡಿರುವ ಮಠಗಳು ಸುಮಾರು ಐದು ಶತಮಾನಗಳಷ್ಟು ಪುರಾತನ ಆಧ್ಯಾತ್ಮಿಕ ಹಾಗೂ ಸಾಂಪ್ರದಾಯಿಕ ಪರಂಪರೆಯನ್ನು ಹೊಂದಿವೆ. ಪುಣ್ಯ ಕ್ಷೇತ್ರಗಳಾದ ಚಿಕ್ಕಲ್ಲೂರು, ಕಪ್ಪಡಿ, ಬಿ.ಜಿ.ಪುರ, ಕುರುಬನಕಟ್ಟೆ ಹಾಗೂ ಆದಿಹೊನ್ನಾಯಕನಹಳ್ಳಿ ಪುಣ್ಯಕ್ಷೇತ್ರಗಳಿಗೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ರಾಜ್ಯ ಸರ್ಕಾರವು ಏ.24ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದು ಸರಿಯಲ್ಲ ಎಂದಿದ್ದಾರೆ.ಈ ಪುಣ್ಯಕ್ಷೇತ್ರಗಳ ಆಚರಣೆ, ಸಂಪ್ರದಾಯ, ಸಂಸ್ಕೃತಿ, ಆಚಾರ, ವಿಚಾರಗಳು ಇತಿಹಾಸ ಹಾಗೂ ಸಮುದಾಯ ನಂಬಿಕೆಗಳಾಗಿವೆ. ಪ್ರಮುಖವಾಗಿ ನೀಲಗಾರರ ನಂಬಿಕೆಗಳ ಮೇಲೆ ತಲತಲಾಂತರಗಳಿಂದ ನಡೆದುಕೊಂಡು ಬಂದಿವೆ. ಈ ಕ್ಷೇತ್ರಗಳ ಪಾವಿತ್ರ್ಯತೆಯನ್ನು ಎರಡು ಅನುವಂಶಿಕ ಕುಟುಂಬಗಳು ಅತೀವ ಶ್ರದ್ಧೆ, ಭಕ್ತಿ, ನಂಬಿಕೆಗಳಿಂದ ರಕ್ಷಿಸುತ್ತಾ, ಪೋಷಿಸಿಕೊಂಡು ಬಂದಿವೆ ಎಂದು ತಿಳಿಸಿದ್ದಾರೆ.

ಆದರೆ ಈಗ ಶ್ರೀಮಠದ ಮಠಾಧಿಪತಿಗಳನ್ನಾಗಲೀ, ಪಾಲಕರನ್ನಾಗಲೀ ಯಾರನ್ನೂ ಸಂಪರ್ಕಿಸದೇ ಹಾಗೂ ಸಲಹೆ ಪಡೆಯದೇ ನಿರ್ಧಾರ ತೆಗೆದುಕೊಂಡಿರುವುದು ಸರ್ಕಾರ ಧಾರ್ಮಿಕ ಸ್ವಾಯತ್ತತೆಯ ಮೇಲೆ ನೇರ ಹಸ್ತಕ್ಷೇಪ ಹಾಗೂ ಐತಿಹಾಸಿಕವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯಗಳನ್ನು ಕಡೆಗಣಿಸಿರುವುದಕ್ಕೆ ಸಮಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಮಳವಳ್ಳಿ ಮಂಟೇಸ್ವಾಮಿ ಮಠವು ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಬೆಂಬಲಿಸುವುದಿಲ್ಲ ಹಾಗೂ ಸಚಿವ ಸಂಪುಟದ ಈ ನಿರ್ಧಾರ ಅನಧಿಕೃತ, ಅನಗತ್ಯ ಹಾಗೂ ಶತಶತಮಾನಗಳಿಂದ ನಡೆದುಕೊಂಡು ಬಂದಿರುವಂತಹ ಆಧ್ಯಾತ್ಮಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಪರಂಪರೆಯ ಮೇಲಿನ ದಾಳಿ ಎಂದು ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಅಭಿವೃದ್ಧಿ ಪ್ರಾಧಿಕಾರ ರಚನೆ ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯಬೇಕು. ನಮ್ಮಂತಹ ಪ್ರಾಚೀನ ಧಾರ್ಮಿಕ ಮತಗಳು, ಸಂಸ್ಥೆಗಳ ಸ್ವಾಯತ್ತತೆಯನ್ನು ಗೌರವಿಸಬೇಕು. ಪುಣ್ಯಕ್ಷೇತ್ರಗಳ ಮೇಲೆ ಪರಿಣಾಮ ಬೀರುವಂತಹ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಮುಂಚೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ಚರ್ಚಿಸುವುದು ಸರಿಯಾದ ಕ್ರಮವಾಗಿದೆ ಎಂದಿದ್ದಾರೆ.

ಮಳವಳ್ಳಿ ಮಂಟೇಸ್ವಾಮಿ ಮಠ ಈ ನಿರ್ಧಾರವನ್ನು ಪ್ರಶ್ನಿಸುವ ಹಾಗೂ ಶ್ರೀಮಠದ ಪರಂಪರೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕಾನೂನಾತ್ಮಕ ಹಾಗೂ ಸಾಂವಿಧಾನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.ಎಲ್ಲ ನೀಲಗಾರರು, ಭಕ್ತರು ಹಾಗೂ ನಾಗರೀಕರು, ಸಂಯಮ ಕಳೆದುಕೊಳ್ಳದೇ ಸಂಘಟಿತರಾಗಿ ವಿಶ್ವಾಸದಿಂದ ಇರಬೇಕು. ಸತ್ಯ, ಸಂಪ್ರದಾಯ ಮತ್ತು ನಮ್ಮ ಪವಿತ್ರ ಸಂಸ್ಥೆಗಳ ಹಕ್ಕುಗಳನ್ನು ಎತ್ತಿಹಿಡಿಯಲು ಶ್ರೀಮಠವು ಸದಾ ಬದ್ಧವಾಗಿರುತ್ತದೆ ಎಂದು ಮಠದ ಅನುಯಾಯಿಗಳಿಗೆ ಭರವಸೆ ನೀಡಿದ್ದಾರೆ.

----------

25ಕೆಎಂಎನ್ ಡಿ27

ಎಂ.ಎಲ್.ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್