ಸಾರಾಂಶ
12ನೇ ಶತಮಾನದಲ್ಲಿ 33 ಜನ ಮಹಿಳಾ ವಚನಗಾರ್ತಿಯರು ಜೀವನಮುಖಿ ಕಾಳಜಿಯೊಂದಿಗೆ ವಚನ ಸಾಹಿತ್ಯ ರಚಿಸುತ್ತಿದ್ದರು. ಇಂದು ಮಹಿಳೆಯರಿಗೆ ವಿಪುಲ ಅವಕಾಶಗಳಿದ್ದು ಸಾಹಿತ್ಯ ರಚನೆಯಲ್ಲಿ ಮುಂದಾಗಬೇಕು.
ಧಾರವಾಡ:
ಸೃಜನಶೀಲ ಸಾಹಿತ್ಯ ಭಾವನೆಗಳ ಅಭಿವ್ಯಕ್ತಿಗೆ ಸಾಧನವಾಗಿದೆ. ಜಾನಪದ ಗರತಿಯಲ್ಲಿ ಆಗಾಧವಾದ ಸೃಜನಶೀಲತೆ ಇತ್ತು ಎಂದು ವಿಮರ್ಶಕಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಸುವರ್ಣ ಕರ್ನಾಟಕ ಸಂಭ್ರಮದ ನಿಮಿತ್ತ ಆಯೋಜಿಸಿದ್ದ `ಮಹಿಳಾ ಸಾಹಿತ್ಯ ಸಮಾವೇಶದಲ್ಲಿ ಸೃಜನ ಹಾಗೂ ಸೃಜನೇತರ ಸಾಹಿತ್ಯ ಕುರಿತು ಮಾತನಾಡಿದರು.
ಸೃಜನಶೀಲ ಸಾಹಿತ್ಯ ಬುದ್ಧಿ-ಭಾವದ ಪ್ರಧಾನವಾದರೆ ಸೃಜನೇತರ ಸಾಹಿತ್ಯವೆಲ್ಲ ಜ್ಞಾನದ ಪ್ರಧಾನವಾಗಿವೆ. ಕಥೆ, ಕಾದಂಬರಿ, ನಾಟಕ, ಕಾವ್ಯಗಳು ಸೃಜನಶೀಲವಾದರೆ, ತರ್ಕಶಾಸ್ತ್ರ ವಿಮರ್ಶೆ, ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ಶಾಸ್ತ್ರ, ಮಾನಸಿಕ ಶಾಸ್ತ್ರ ಹಾಗೂ ಶಾಸನ ಸಂಶೋಧನೆಗಳು ಸೃಜನೇತರ ಸಾಹಿತ್ಯವಾಗಿವೆ. ಉತ್ತರ ಕರ್ನಾಟಕದಲ್ಲಿ ಸೃಜನೇತರ ಸಾಹಿತ್ಯಕ್ಕೆ ಡಾ. ಹನುಮಾಕ್ಷಿ ಗೋಗಿ ಹಾಗೂ ರಾಯಚೂರಿನ ಕವಿತಾ ಮಿಶ್ರಾರ ಕೊಡುಗೆ ಅನನ್ಯ. ಸೃಜನೇತರ ಸಾಹಿತ್ಯಕ್ಕೂ ವಿಪುಲ ಅವಕಾಶ ಲಭ್ಯವಾಗಬೇಕೆಂದು ಹೇಳಿದರು.ಪ್ರಾಚಾರ್ಯರಾದ ಡಾ. ಶರಣಮ್ಮ ಗೋರೇಬಾಳ ಮಹಿಳೆ ಮತ್ತು ಸಾಹಿತ್ಯ ಕುರಿತು ಮಾತನಾಡಿ, ಮಹಿಳೆ ಎಂದರೇನೇ ಸಾಹಿತ್ಯ. ತ್ಯಾಗ, ಕರುಣೆ, ಪ್ರೀತಿ, ವಾತ್ಸಲ್ಯದ ಮಹಿಳೆ ತನ್ನ ಭಾವನೆಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸುತ್ತಿದ್ದಳು. 12ನೇ ಶತಮಾನದಲ್ಲಿ 33 ಜನ ಮಹಿಳಾ ವಚನಗಾರ್ತಿಯರು ಜೀವನಮುಖಿ ಕಾಳಜಿಯೊಂದಿಗೆ ವಚನ ಸಾಹಿತ್ಯ ರಚಿಸುತ್ತಿದ್ದರು. ಇಂದು ಮಹಿಳೆಯರಿಗೆ ವಿಪುಲ ಅವಕಾಶಗಳಿದ್ದು ಸಾಹಿತ್ಯ ರಚನೆಯಲ್ಲಿ ಮುಂದಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಾಸನ ಶಾಸ್ತ್ರ ಸಂಶೋಧಕಿ ಹನುಮಾಕ್ಷಿ ಗೋಗಿ, ಸೃಜನ, ಸೃಜನೇತರ ಸಾಹಿತ್ಯದ ವ್ಯಾಪ್ತಿ ವಿಸ್ತಾರವಾಗಿದೆ. ಇದಕ್ಕೆ ಸಮಯದ ಮಿತಿ ಇರಲಾರದು. ಇಂದು ಮಹಿಳಾ ಸಾಹಿತ್ಯ ಜಾತಿ, ಗುಂಪುಗಾರಿಕೆ ಮೀರಿ ಬೆಳೆಯುತ್ತಿದೆ ಎಂದು ಹೇಳಿದರು.ಶಂಕರ ಹಲಗತ್ತಿ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ಮಲ್ಲಿಕಾ ಘಂಟಿ, ವಿಶ್ವೇಶ್ವರಿ ಹಿರೇಮಠ, ಪ್ರೊ. ಶಾಂತಾ ಇಮ್ರಾಪೂರ, ರಾಧಾ ಶ್ಯಾಮರಾವ, ಪ್ರಭಾ ನೀರಲಗಿ, ವಿಜಯಲಕ್ಷಿ ಕಲ್ಯಾಣಶೆಟ್ಟರ, ವಿಶ್ವೇಶ್ವರಿ ಹಿರೇಮಠ ಇದ್ದರು.