ಸೃಜನಶೀಲತೆಯ ತಾಣ ರಂಗಭೂಮಿ: ಪ್ರೊ.ನಾಗೇಶ ಬೆಟ್ಟಕೋಟೆ

| Published : Mar 28 2024, 12:50 AM IST

ಸಾರಾಂಶ

ರಂಗಭೂಮಿಯು ಹಲವಾರು ಕ್ಷೇತ್ರಗಳಲ್ಲಿ ಕ್ರಾಂತಿಗಳಿಗೆ ಎಡೆಮಾಡಿಕೊಟ್ಟಿದ್ದು, ರಂಗಭೂಮಿ ಇಂದಿಗೂ ಪ್ರಸ್ತುತವಾಗಿದೆ. ನಮ್ಮ ದೇಶದಲ್ಲಿ ರಂಗಭೂಮಿ ಅಗತ್ಯಕ್ಕೆ ಮಾತ್ರ ಸೀಮಿತವಾಗಿದೆ

ಬಳ್ಳಾರಿ: ಮನೋರಂಜನೆಗೆ ಹಲವಾರು ಮಾಧ್ಯಮಗಳಿದ್ದರೂ ಸೃಜನಶೀಲತೆ ಅರಳಿಸುವ ಪಾತ್ರವನ್ನು ರಂಗಭೂಮಿ ಮಾಡುತ್ತದೆ ಎಂದು ಮೈಸೂರಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ನಾಗೇಶ ವಿ. ಬೆಟ್ಟಕೋಟೆ ಹೇಳಿದರು.ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಪ್ರದರ್ಶನ ಕಲೆ ನಾಟಕ, ಕನ್ನಡ ಮತ್ತು ಇಂಗ್ಲೀಷ್ ಅಧ್ಯಯನ ವಿಭಾಗಗಳು ಜಂಟಿಯಾಗಿ ಬುಧವಾರ ಆಯೋಜಿಸಿದ್ದ ರಂಗಭೂಮಿಯ ಕಾಲಾತೀತ ಅಸ್ತಿತ್ವ ಎಂಬ ವಿಷಯದ ಕುರಿತು ಒಂದು ದಿನದ ಅಂತರ್ ಶಿಸ್ತೀಯ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ರಂಗಭೂಮಿಯು ಹಲವಾರು ಕ್ಷೇತ್ರಗಳಲ್ಲಿ ಕ್ರಾಂತಿಗಳಿಗೆ ಎಡೆಮಾಡಿಕೊಟ್ಟಿದ್ದು, ರಂಗಭೂಮಿ ಇಂದಿಗೂ ಪ್ರಸ್ತುತವಾಗಿದೆ. ನಮ್ಮ ದೇಶದಲ್ಲಿ ರಂಗಭೂಮಿ ಅಗತ್ಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ರಂಗಭೂಮಿಯ ಶಿಕ್ಷಣ ಉತ್ತಮವಾಗಿದ್ದರೆ ಕಲಾವಿದರು ಸಮಾಜಕ್ಕೆ ನೈತಿಕ ಶಿಕ್ಷಣ ನೀಡಲು ಸಹಕಾರಿಯಾಗುತ್ತದೆ. ಉತ್ತಮ ಪ್ರದರ್ಶನವು ಬೇರೆ ಬೇರೆ ಭಾಷೆಗಳಿಗೆ ತಾನಾಗೆಯೇ ಪ್ರದರ್ಶನಕ್ಕೆ ಅನುವು ಮಾಡಿಕೊಡುತ್ತದೆ. ಪ್ರದರ್ಶನ ಕಲೆಗಳೂ ವಿಶ್ವವಿದ್ಯಾಲಯದ ಅವಿಭಾಜ್ಯ ಅಂಗವಾಗಿಸುವ ನಿಟ್ಟಿನಲ್ಲಿ ಸರ್ಕಾರವು ಗಮನಹರಿಸಬೇಕು ಎಂದು ಹೇಳಿದರು.ಮಹಾರಾಷ್ಟ್ರದ ಎಸ್‍ಪಿಪಿ ಮಹಾವಿದ್ಯಾಲಯದ ಸಿರ್ಸಲ ಪಾರ್ಲಿ ವೈಜನಾಥ್‍ ಹಾಗೂ ಪ್ರದರ್ಶನ ಕಲೆ ನಾಟಕ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್ ಕನಸೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ರಂಗಭೂಮಿಯೂ ಸಮಾಜದಲ್ಲಿ ಗಂಭೀರ ವಿಷಯಗಳತ್ತ ಬೆಳಕು ಚೆಲ್ಲುವ ಕೆಲಸ ಮಾಡುತ್ತಾ ಬಂದಿದೆ ಎಂದು ತಿಳಿಸಿದರು.ಕಾರ್ಯಕ್ರಮ ಸಂಯೋಜಕ ಪ್ರೊ.ಶಾಂತನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಎಂ.ಮೇತ್ರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವದಾದ್ಯಂತ ಆಚರಿಸಲ್ಪಡುವ ದಿನಾಚರಣೆಗಳು ನಮ್ಮ ದೇಶದಲ್ಲಿವೆ. ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆಯ ಮಾಡಿಕೊಂಡು ರಂಗಭೂಮಿ ಜೊತೆಗೆ ಸಂಗೀತ ಸಂಬಂಧಿತ ಕಾರ್ಯಕ್ರಮಗಳನ್ನು ನಡೆಸಬಹುದು ಎಂದು ಹೇಳಿದರು.ವಿವಿಯ ಕುಲಸಚಿವ (ಮೌಲ್ಯಮಾಪನ) ಪ್ರೊ.ರಮೇಶ್ ಓಲೇಕಾರ್ ಸೇರಿದಂತೆ ನಾಟಕ ವಿಭಾಗದ ಅತಿಥಿ ಉಪನ್ಯಾಸಕರಾದ ಸಹನಾ ಪಿಂಜಾರ, ಹೇಮೇಶ್ವರ ಕೆ. ಹಾಗೂ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸಮ್ಮೇಳನದಲ್ಲಿ 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ ತಮ್ಮ ಸಂಶೋಧನಾ ಕುರಿತಾದ ಪ್ರಬಂಧವನ್ನು ಮಂಡಿಸಿದರು.

ಅತಿಥಿ ಉಪನ್ಯಾಸಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಹಾಗೂ ಇಂಗ್ಲೀಷ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಾತ್ಸಲ್ಯ ಕಾರ್ಯಕ್ರಮ ನಿರ್ವಹಿಸಿದರು.