ಇಂದಿನ ಆಧುನಿಕ ಯುಗದಲ್ಲಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಮೌಲ್ಯ, ಪರಂಪರೆ ಹಾಗೂ ಸೃಜನಶೀಲತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ರಾಜಾ ಮುಕುಂದ ನಾಯಕ ಹೇಳಿದರು.
ಕನ್ನಡಪ್ರಭ ವಾರ್ತೆ ಸುರಪುರ
ಇಂದಿನ ಆಧುನಿಕ ಯುಗದಲ್ಲಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಮೌಲ್ಯ, ಪರಂಪರೆ ಹಾಗೂ ಸೃಜನಶೀಲತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ರಾಜಾ ಮುಕುಂದ ನಾಯಕ ಹೇಳಿದರು.ನಗರದ ಗರುಡಾದ್ರಿ ಕಲಾಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅರುಣ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ಭಾನುವಾರ ದಿ. ಎ.ಕೃಷ್ಣ ಸುರಪುರ ಅವರ ಕುರಿತು ಉಪನ್ಯಾಸ ಹಾಗೂ ಎ. ಕಮಲಾಕರ ವಿರಚಿತ ‘ಪ್ರೇಮಾಲಾಪ’ ಗಜಲ್ ಮತ್ತು ‘ಭಾವಸೆಲೆ’ ಕವನ ಸಂಕಲನಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎ. ಕೃಷ್ಣ ಸುರಪುರ ಅವರಂತಹ ಹಿರಿಯ ಸಾಹಿತಿಗಳ ಸಾಹಿತ್ಯಿಕ ಕೊಡುಗೆ ಯುವ ಬರಹಗಾರರಿಗೆ ಸದಾ ಪ್ರೇರಣೆಯಾಗಿದ್ದು, ಅವರ ಸಾಹಿತ್ಯ ಸೇವೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದು ಆಶಿಸಿದರು.ಸಾಹಿತಿ ಕನಕಪ್ಪ ವಾಗನಗೇರಿ ಮಾತನಾಡಿ, ಕವಿರತ್ನ ಎ. ಕೃಷ್ಣ ಸುರಪುರ ಅವರು ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಯನ್ನು ಆಧುನಿಕ ಕಾಲದಲ್ಲೂ ಜೀವಂತವಾಗಿರಿಸಿರುವ ಅಪರೂಪದ ಕವಿ. ಪಂಪ, ರನ್ನ, ಲಕ್ಷ್ಮೀಶ, ಕುಮಾರವ್ಯಾಸ, ರಾಘವಾಂಕ ಮೊದಲಾದ ಮಹಾಕವಿಗಳ ಕಾಲದಲ್ಲಿ ಪ್ರಸಿದ್ಧಿ ಚಂಪೂ ಸಾಹಿತ್ಯ, ಕಂದಪದ್ಯ, ಭಾಮಿನಿ, ವಾರ್ಧಕ ಷಟ್ಪದಿಗಳಲ್ಲಿ ಅದ್ಭುತ ಕೃತಿಗಳನ್ನು ರಚಿಸುವ ಮೂಲಕ ಇಡೀ ಕರ್ನಾಟಕವೇ ಸುರಪುರದತ್ತ ತಿರುಗಿ ನೋಡುವಂತೆ ಸಾಹಿತ್ಯ ಲೋಕದಲ್ಲಿ ಗಮನ ಸೆಳೆದಿದ್ದಾರೆ ಎಂದರು.
ಕಲ್ಯಾಣ ಕರ್ನಾಟಕದ ಸಗರನಾಡಿನ ಸೊಗಡನ್ನು ತಮ್ಮ ಕಾವ್ಯಗಳಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಿರುವುದು ಅವರ ಸಾಹಿತ್ಯದ ವಿಶೇಷತೆಯಾಗಿದೆ. ಸಗರನಾಡಿನ ನೆಲ,ಜಲ, ಸಂಸ್ಕೃತಿ, ಪರಂಪರೆ ಹಾಗೂ ವೈಭವನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿರುವ ಅವರ ಕೃತಿಗಳು ಈ ನಾಡಿನ ಹಿರಿಮೆಯನ್ನು ಸಾರುತ್ತವೆ. ಕರುಣ ಕಿರೀಟ ಎಂಬ ಕೃತಿಯು ಅವರ ಸಾಹಿತ್ಯಿಕ ಪ್ರತಿಭೆ ಹಾಗೂ ವಿದ್ವತ್ತಿಗೆ ಸಾಕ್ಷಿಯಾಗಿದೆ. ಎ.ಕೃಷ್ಣ ಅವರನ್ನು ಎಲೆಮೆರೆಯ ಕಾಯಿ ಅಲ್ಲ: ಎಲೆಮರೆಯ ಹಣ್ಣು ಸಂಪತ್ತಭರಿತ ಮಾಗಿದ ಹಣ್ಣಿನಂತಿದ್ದಾರೆ ಎಂದು ಹೇಳಿದರು.ಸಾಹಿತಿ ಎ. ಕಮಲಾಕರ ಅವರು ರಚಿಸಿರುವ ವಿರಚಿತ ಪ್ರೇಮಾಲಾಪ ಗಜಲ ಮತ್ತು ‘ಭಾವಸೆಲೆ’ ಕವನ ಸಂಕಲನಗಳನ್ನು ಕಲಬುರಗಿಯ ಖ್ಯಾತ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಹಾಗೂ ಗಣ್ಯರು ಲೋಕಾರ್ಪಣೆಗೊಳಿಸಿದರು.
ಖ್ಯಾತ ಅನುವಾದಕ ಬೋಡೆ ರಿಯಾಜ್ ಅಹ್ಮದ ಅವರು, ಪ್ರೇಮಾಲಾಪ ಗಜಲ್ ಸಂಕಲನದ ಕುರಿತು ಹಾಗೂ ಉಪನ್ಯಾಸಕ ಶರಣಗೌಡ ಪಾಟೀಲ ಜೈನಾಪುರ ಭಾವಸೆಲೆ ಕವನ ಸಂಕಲನದ ಕುರಿತು ಕೃತಿ ಪರಿಚಯ ಮಾಡಿದರು.ಬೋಡೆ ರಿಯಾಜ್ ಅಹ್ಮದ್ ಮಾತನಾಡಿ, ಗಜಲ್ ಸಾಹಿತ್ಯವು ತನ್ನದೇ ಆದ ವಿಶಿಷ್ಟ ರಚನಾ ಶೈಲಿ ಮತ್ತು ಭಾವಾಭಿವ್ಯಕ್ತಿಯನ್ನು ಹೊಂದಿದೆ. ಉರ್ದು ಭಾಷೆಯಲ್ಲಿ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಗಜಲ್ ಪ್ರಕಾರವು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿಯೂ ತನ್ನದೇ ಆದ ಸ್ಥಾನಮಾನವನ್ನು ಪಡೆದುಕೊಂಡಿದೆ. ಪ್ರೇಮದ ಅಭಿವ್ಯಕ್ತಿ, ಭಾವನೆಗಳ ವಿನಿಮಯ ಗಜಲ್ನ ಪ್ರಮುಖ ವೈಶಿಷ್ಟಗಳಾಗಿವೆ. ಎ.ಕಮಲಾಕರ ಅವರ ಕಾವ್ಯ ರಚನೆಗಳಲ್ಲಿ ಪ್ರೇಮದ ಅನುಭವಗಳು, ಭಾವನೆಗಳ ವಿವಿಧ ಆಯಾಮಗಳು ಸುಂದವಾಗಿ ಅಭಿವ್ಯಕ್ತಗೊಂಡಿವೆ. ಈ ಕೃತಿಯಲ್ಲಿ ಒಟ್ಟು ೬೦ ಗಜಲಗಲ್ಲಿ, ೫೯ ಗಜಲ್ಗಳು ಐದು ಶೇರ್ಗಳನ್ನು ಮತ್ತು ಒಂದು ಗಜಲ್ ಮಾತ್ರ ಆರು ಶೇರಗಳನ್ನು ಹೊಂದಿದೆ ಎಂದು ತಿಳಿಸಿದರು.
ಶರಣಗೌಡ ಪಾಟೀಲ ಮಾತನಾಡಿ, ಭಾವಸೆಲೆ ಕವನಸಂಕಲನವು ಭಾವನೆಗಳ ಸೆಲೆಯಿಂದ ಅರಳಿದ ಕಾವ್ಯಕುಸುಮಗಳ ಸಂಕಲನವಾಗಿದೆ. ಓದುಗರು ಪುಸ್ತಕಗಳನ್ನು ಖರೀದಿಸುವ ಮೂಲಕ ಸಾಹಿತಿಗಳನ್ನು ಹಾಗೂ ಸಾಹಿತ್ಯ ಕ್ಷೇತ್ರವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.ಖ್ಯಾತ ಚಿತ್ರಕಲಾವಿದ, ಸಾಹಿತಿ ಉಮೇಶಬಾಬು ಎಂ. ಸಾಸಾಬಾಳ ಅವರು ಎ.ಕೃಷ್ಣ ಸುರಪುರ ಅವರ ಬದುಕು ಬರಹಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನಿಷ್ಠಿ ಕಡ್ಲಪ್ಪನವರ ವಿರಕ್ತಮಠದ ಪ್ರಭುಲಿಂಗ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು. ತಾಲೂಕು ಕ.ಸಾ.ಪ. ಅಧ್ಯಕ್ಷ ಶರಣಬಸಪ್ಪ ಯಾಳವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಅರವಿಂದಕುಮಾರ, ಕನ್ನಡಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದರಖಾನಿ, ಅರುಣ ಪ್ರಕಾಶನ ಪ್ರಕಾಶಕಿ ಬೋರಮ್ಮ ಎಸ್.ಯಾಳವಾರ, ಸಾಹಿತಿ ಎ.ಕಮಲಾಕರ ಸೇರಿದಂತೆ ಗಣ್ಯರು ಇದ್ದರು.ನಬಿಲಾಲ್ ಮಕಂದರ, ರಾಜಗೋಪಾಲ ವಿಭೂತಿ, ರಾಜಕುಮಾರ ದೊರೆ, ಪಿಎಸ್ಐ ಕೃಷ್ಣಾ ವಿ.ಸುಬೇದಾರ, ಮಹಾಂತೇಶ ದೇವರ ಗೋನಾಲ, ಗಂಗಾಧರ ರುಮಾಲ, ರಜಾಕ್ ಭಗವಾನ್, ಸಾಹೇಬರೆಡ್ಡಿ ಇಟಗಿ, ವೆಂಕಟೇಶ ಗೌಡ, ನಾಗರಾಜ ಜಮದ್ರಖಾನಿ, ಸಾಮ್ಯುವೆಲ್ ಮ್ಯಾಥ್ಯೂ, ರಾಘವೇಂದ್ರ ಭಕ್ರಿ, ಯಲ್ಲಪ್ಪ ಹುಲಕಲ್, ದೇಶಮುಖ, ಮಹೇಂದ್ರ ಅಂಗಡಿ ಪರಿಮಳ ಸೇರಿದಂತೆ ಸಾಹಿತಿಗಳು, ಶಿಕ್ಷಕರು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಶಿವಶರಣಯ್ಯಸ್ವಾಮಿ ಮತ್ತು ರಮೇಶ ಕುಲಕರ್ಣಿ ತಬಲಾ ಸಾಥ್ನೊಂದಿಗೆ ಪ್ರಾರ್ಥಿಸಿದರು. ಶ್ರೀಹರಿರಾವ್ ಆದವಾನಿ ನಾಡಗೀತೆ ಪ್ರಸ್ತುತಪಡಿಸಿದರು. ಶಿಕ್ಷಕ ಎಚ್.ವಾಯ್.ರಾಠೋಡ ಸ್ವಾಗತಿಸಿದರು. ದೇವು ಹೆಬ್ಬಾಳ ನಿರೂಪಿಸಿ, ವಂದಿಸಿದರು.----ಫೋಟೊ----
15ವೈಡಿಆರ್1ಸುರಪುರದ ಗರುಡಾದ್ರಿ ಕಲಾಮಂದಿರದಲ್ಲಿ ಭಾನುವಾರ ಸಾಹಿತಿ ಎ. ಕಮಲಾಕರ ಅವರು ರಚಿಸಿರುವ ವಿರಚಿತ ಪ್ರೇಮಾಲಾಪ ಗಜಲ ಮತ್ತು ಭಾವಸೆಲೆ ಕವನ ಸಂಕಲನಗಳನ್ನು ಕಲಬುರಗಿಯ ಖ್ಯಾತ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಹಾಗೂ ಗಣ್ಯರು ಲೋಕಾರ್ಪಣೆಗೊಳಿಸಿದರು.