ಸಾರಾಂಶ
ಪ್ರವಾಸಿಗರ ಅನುಕೂಲಕ್ಕಾಗಿ ಮೂಲ ಸೌಕರ್ಯದ ಜತೆಗೆ ಈ ಭಾಗದಲ್ಲಿ ಹೋಟೆಲ್ ಉದ್ಯಮ ಬೆಳೆಯಲು ಸರ್ಕಾರ ಪೂರಕ ವಾತಾವರಣ ನಿರ್ಮಾಣ ಮಾಡಬೇಕಿದೆ.
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಆದರೆ, ಅದಕ್ಕೆ ತಕ್ಕಂತೆ ದೇಶ- ವಿದೇಶಿ ಪ್ರವಾಸಿಗರಿಗೆ ಮೂಲ ಸೌಕರ್ಯ ದೊರೆಯದಾಗಿದೆ. ಹಾಗಾಗಿ ಹಂಪಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದೆಯೇ? ಎಂಬುದು ನಿರೀಕ್ಷೆಯಾಗಿದೆ.ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ದೇಶ- ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಮೂಲ ಸೌಕರ್ಯದ ಜತೆಗೆ ಈ ಭಾಗದಲ್ಲಿ ಹೋಟೆಲ್ ಉದ್ಯಮ ಬೆಳೆಯಲು ಸರ್ಕಾರ ಪೂರಕ ವಾತಾವರಣ ನಿರ್ಮಾಣ ಮಾಡಬೇಕಿದೆ. ಹೋಟೆಲ್ ಉದ್ಯಮಿಗಳ ಜತೆಗೆ ಸಭೆ ನಡೆಸಿ; ಕಾರ್ಪೋರೇಟ್ ವಲಯದ ರೆಸಾರ್ಟ್‌ಗಳು, ಹೋಟೆಲ್‌ಗಳು ಹಂಪಿ ಪ್ರದೇಶದಲ್ಲಿ ಸ್ಥಾಪನೆ ಮಾಡಲು ಸರ್ಕಾರ ಆಸ್ಥೆ ವಹಿಸಬೇಕಿದೆ.
ನಿಯಮ ಸಡಿಲಿಕೆ ಆಗಲಿ: ಹಂಪಿ ಭಾಗದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಕಾರ ಪೂರಕವಾಗಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ- 2002ಅನ್ನು ತಿದ್ದುಪಡಿ ಮಾಡಬೇಕಿದೆ. ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಕಾಯ್ದೆಯಲ್ಲಿ ಸಡಿಲಿಕೆ ತಂದರೆ, ಪ್ರವಾಸೋದ್ಯಮದಿಂದ ಜನರಿಗೂ ಉದ್ಯೋಗ ದೊರೆಯಲಿದೆ. ಈ ಭಾಗದಲ್ಲಿ ರೆಸಾರ್ಟ್, ಹೋಟೆಲ್‌ಗಳು ಕೂಡ ನಿರ್ಮಾಣ ಮಾಡುವ ವಾತಾವರಣ ಸೃಷ್ಟಿಯಾಗಬೇಕಿದೆ.ಹಂಪಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಿಯಮ ಜಾರಿ ಇರುವುದರಿಂದ ಈ ಭಾಗದಲ್ಲಿ ಹೋಟೆಲ್‌ಗಳ ನಿರ್ಮಾಣಕ್ಕೂ ತೊಂದರೆಯಾಗುತ್ತಿದೆ. ಹಂಪಿ ಸ್ಮಾರಕಗಳ ಬಳಿ ಜಾರಿ ಮಾಡುವ ನಿಯಮವನ್ನು ಸುತ್ತಮುತ್ತಲ ಪ್ರದೇಶಕ್ಕೂ ಅನ್ವಯ ಮಾಡಲಾಗಿದೆ. ಈ ಬಗ್ಗೆ ಪ್ರಾಧಿಕಾರದ ಕಾಯ್ದೆ ಬಗ್ಗೆ ಚರ್ಚೆ ನಡೆದು ನಿಯಮದಲ್ಲಿ ಸಡಿಲಿಕೆ ತಂದರೆ ಮಾತ್ರ ಈ ಭಾಗದಲ್ಲಿ ಪ್ರವಾಸೋದ್ಯಮ ಬೆಳೆಯಲು ಉತ್ತೇಜನ ದೊರೆಯಲಿದೆ ಎಂಬುದು ಹೋಟೆಲ್ ಉದ್ಯಮಿಗಳ ಅಭಿಮತವಾಗಿದೆ.
ಹಂಪಿಯಲ್ಲಿ ಬಸ್ ತಂಗುದಾಣ, ಆಟೋ ಚಾಲಕರಿಗೆ ತಂಗುದಾಣ, ಕಾರು ಪಾರ್ಕಿಂಗ್, ಯಾತ್ರಿ ನಿವಾಸ ನಿರ್ಮಾಣ, ಶೌಚಾಲಯ ನಿರ್ಮಾಣ ಸೇರಿದಂತೆ ಸಣ್ಣಪುಟ್ಟ ವಿಷಯಕ್ಕೂ ಹಂಪಿಯಲ್ಲಿ ನಿಯಮಗಳನ್ನು ಹೇರಲಾಗುತ್ತಿದೆ. ಪ್ರಾಧಿಕಾರಕ್ಕೆ ಕೇಳಿದರೆ, ಭಾರತೀಯ ಪುರಾತತ್ವ ಇಲಾಖೆ ಕಡೆಗೆ ಬೊಟ್ಟು ಮಾಡುತ್ತದೆ. ಒಬ್ಬರ ಮೇಲೆ ಒಬ್ಬರು ಹಾಕಿ ಜಾರಿಕೊಳ್ಳುತ್ತಿದ್ದಾರೆ. ಆದರೆ, ಇದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ಭಾರೀ ಹಿನ್ನಡೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಭಾರೀ ಪ್ರಮಾಣದ ಅನುದಾನ ದೊರೆತರೂ ನಿಯಮಗಳ ನಿರ್ಬಂಧದಿಂದ ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಬಜೆಟ್ ಅಧಿವೇಶನದಲ್ಲೇ ಹಂಪಿ ಕುರಿತು ವಿಸ್ತೃತ ಚರ್ಚೆ ನಡೆಸಿ, ಈ ಭಾಗದಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾದ ಹೋಟೆಲ್, ರೆಸಾರ್ಟ್‌ಗಳ ಸ್ಥಾಪನೆ ಕುರಿತು ಚರ್ಚೆ ನಡೆಸಿ ಪ್ರವಾಸೋದ್ಯಮದಲ್ಲಿ ಬಂಡವಾಳ ಹರಿದು ಬರಲು ಕ್ರಮವಹಿಸಬೇಕು. ಜತೆಗೆ ಪ್ರವಾಸೋದ್ಯಮದಿಂದ ಈ ಭಾಗದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿ ಆಗಲಿ ಎಂಬುದು ಜನರ ಆಶಯವಾಗಿದೆ.ಕನ್ನಡ ವಿವಿಗೂ ಅನುದಾನ ದೊರೆಯಲಿ
ಹಂಪಿ ಕನ್ನಡ ವಿವಿಗೂ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ನೀಡಬೇಕಿದೆ. ಕನ್ನಡ ವಿವಿ ಜೆಸ್ಕಾಂಗೆ ₹1.05 ಕೋಟಿ ಬಿಲ್ ಬಾಕಿ ಇದೆ. ಇನ್ನು ವಿವಿ ಬಳಿ ಅಭಿವೃದ್ಧಿ ಕೈಗೊಳ್ಳಲು ಹಾಗೂ ಸಿಬ್ಬಂದಿ ವೇತನಕ್ಕೂ ಅನುದಾನ ಇಲ್ಲದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸುತ್ತಿರುವ ಕನ್ನಡ ವಿವಿಗೆ ಹತ್ತು ಕೋಟಿ ರು. ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿ ಎಂಬುದು ಕನ್ನಡ ಮನಸ್ಸುಗಳ ಆಶಯವೂ ಆಗಿದೆ.ತಿದ್ದುಪಡಿ ಮಾಡಿ: ಹಂಪಿಯಲ್ಲಿ ಅಭಿವೃದ್ಧಿ ಕೈಗೊಳ್ಳಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅನುದಾನದ ಕೊರತೆ ಇಲ್ಲ. ಆದರೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ- 2002ಅನ್ನು ತಿದ್ದುಪಡಿ ತರಬೇಕಿದೆ. ಅಧಿವೇಶನದಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ನಿಯಮದಲ್ಲಿ ಸಡಿಲಿಕೆ ಮಾಡಬೇಕು. ಹಂಪಿ ಸ್ಮಾರಕಗಳ ಸಂರಕ್ಷಣೆಗೆ ಒತ್ತು ನೀಡುವುದರ ಜತೆಗೆ ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ರಾಜ್ಯ ಸರ್ಕಾರ ನಡೆದುಕೊಂಡರೆ ಖಂಡಿತ ಹಂಪಿ ಭಾಗದಲ್ಲಿ ಪ್ರವಾಸೋದ್ಯಮ ಬೆಳೆಯಲಿದೆ ಎಂದು ಮಾಜಿ ಸಚಿವ ಆನಂದ ಸಿಂಗ್ ಆಗ್ರಹಿಸಿದರು.