ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದಲ್ಲಿ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದ ಫೈನಲ್ ಪಂದ್ಯಾಟದಲ್ಲಿ ಪರ್ಲಕೋಟಿ ತಂಡ ಚೆರಿಯಮನೆ ತಂಡದ ವಿರುದ್ಧ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.ಫೈನಲ್ ಪಂದ್ಯಾವಳಿಗೆ ಶಾಸಕ ಎ.ಎಸ್ ಪೊನ್ನಣ್ಣ ಹಾಗೂ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚ್ಚಯ್ಯ ಮೈದಾನದಲ್ಲಿ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಗೌಡ ಯುವ ವೇದಿಕೆ ಈ ಒಂದು ಕ್ರಿಕೆಟ್ ಪಂದ್ಯಾವಳಿಯನ್ನು ಹಲವು ವರ್ಷದಿಂದ ಹಬ್ಬದ ರೀತಿಯಲ್ಲಿ ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿಯೂ ಕೂಟ ಬಹಳ ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿದ್ದಾರೆ ಎಂದರು.
ಈ ಬಾರಿ ಕ್ರೀಡೆಯ ಜೊತೆಗೆ ಮಿಸ್ಟ್ ಗೌಡ, ಮಿಸ್ ಗೌಡತಿ ಎನ್ನುವ ವಿನೂತನ ಕಾರ್ಯಕ್ರಮ ಕೂಡ ಮಾಡಿರುವುದು ಬಹಳ ಸಂತೋಷ. ಕ್ರೀಡಾ ಕ್ರೇತ್ರಕ್ಕೆ ಕೊಡಗಿನ ಕ್ರೀಡಾ ಪಟುಗಳ ಕೊಡುಗೆ ಬಹಳ ಅಪಾರ, ಗ್ರಾಮೀಣ ಪ್ರತಿಭೆಗಳನ್ನು ಹೊರ ತರಲು ಇದೊಂದು ಉತ್ತಮ ಅವಕಾಶ. ಜೊತೆಗೆ ವಿವಿಧ ಕ್ರೀಡಾಕೂಟದಲ್ಲಿ ಕುಟುಂಬಗಳನ್ನ ಒಗ್ಗೂಡಿಸಲು ಇದೊಂದು ಉತ್ತಮ ವೇದಿಕೆ ಕೂಡ ಹೌದು ಎಂದರು.ಕ್ರೀಡಾಕೂಟಕ್ಕೆ ಸಹಕಾರ: ಕುಟುಂಬಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಬೇಕು. ಕ್ರೀಡಾ ಕೂಟಕ್ಕೆ ನಮ್ಮ ಸಹಕಾರ ಕೂಡ ಇರಲಿದೆ. ಸರ್ಕಾರದ ಮಟ್ಟದಿಂದಲ್ಲೂ ಸಹಕಾರ ತರಲು ನಾವು ಕೂಡ ಪಯತ್ನ ಪಡುತ್ತಿದೇವೆ. ಕ್ರೀಡಾಕೂಟ ಉತ್ತಮವಾಗಿ ಮೂಡಿ ಬಂದಿದೆ ಮುಂದಿನ ದಿನದಲ್ಲಿ ಮತ್ತಷ್ಟು ಯಶಸ್ವಿಯಾಗಿ ಕಾರ್ಯಕ್ರಮ ಮಾಡಲೆಂದು ಹಾರೈಸಿದರು.
ಅರುಣ್ ಮಾಚ್ಚಯ್ಯ ಮಾತನಾಡಿ ಕೊಡಗು ಗೌಡ ಯುವ ವೇದಿಕೆಯ ವತಿಯಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅದ್ದೂರಿ ಜಂಬರ ನಡೆಯುತ್ತಿದೆ. ಕೊಡಗಿನಲ್ಲಿ ಒಂದು ಬೇಸರದ ವಿಚಾರವೆಂದರೆ ಕೊಡಗಿನ ಕ್ರೀಡೆ ಕ್ರೀಡಾ ಅಸೋಸಿಯೇಷನ್ ನ ಅಡಿಯಲ್ಲಿ ನೋಂದಣಿ ಆದಲ್ಲಿ ಹೆಚ್ಚಿನ ಅನುದಾನ ತರಲು ಸಾಧ್ಯ. ಕೊಡಗಿನಲ್ಲಿ ಹಲವಾರು ಆಟೋಟಗಳು ಒಂದೇ ಒಂದು ಕ್ರೀಡೆ ನೋಂದಣಿ ಆಗಿಲ್ಲ. ಮುಂದಿನ ದಿನದಲ್ಲಿ ನೋಂದಣಿ ಮಾಡುವ ಕೆಲಸ ಆದಷ್ಟು ಬೇಗ ಮಾಡಿ ಕರ್ನಾಟಕ ಕ್ರೀಡಾ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತರಬೇಕು ಎಂದರು.