ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಭಾನುವಾರ ಪತ್ರಕರ್ತರಿಗೆ ಆಯೋಜಿಸಿದ್ದ ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್-4ರಲ್ಲಿ ಮೀಡಿಯಾ ಚಾಲೆಂಜರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಫೈನಲ್ ಪಂದ್ಯಾಟದಲ್ಲಿ ಟಾಸ್ ಸೋತ ಮೀಡಿಯಾ ಚಾಲೆಂಜರ್ಸ್ ತಂಡ ನಿಗದಿತ 6 ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 81 ರನ್ ಕಲೆ ಹಾಕಿತು. ತಂಡದ ಪರ ವಿನೋದ್ 39, ಹೇಮಂತ್ 31 ರನ್ ಕಲೆ ಹಾಕಿದರು. ಗುರಿ ಬೆನ್ನಟ್ಟಿದ ಮೀಡಿಯಾ ಹಿಟ್ಸ್‌ ತಂಡ 4 ವಿಕೆಟ್ ಕಳೆದುಕೊಂಡು 54 ರನ್‌ ಗಳಿಸಿ ಸೋಲನುಭವಿಸಿತು.ಇದಕ್ಕೂ ಮೊದಲು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮೀಡಿಯಾ ಚಾಲೆಂಜರ್ಸ್ ತಂಡವನ್ನು ಮೀಡಿಯಾ ಹಿಟ್ಸ್‌ ತಂಡ 10 ವಿಕೆಟ್‌ಗಳಿಂದ ಮಣಿಸಿತು. ನಂತರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಸೋತ ಕೂರ್ಗ್ ಡ್ಯೂ ಡ್ರಾಪ್ಸ್ ಕುಶಾಲನಗರ ತಂಡ ನಿಗದಿತ ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 44 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಮೀಡಿಯಾ ಸೂಪರ್ ಕಿಂಗ್ಸ್ ತಂಡ 5.2 ಓವರ್‌ನಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತ ಮೀಡಿಯಾ ಚಾಲೆಂಜರ್ಸ್ ತಂಡ ನಿಗದಿತ ಓವರ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 100 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ತಂಡದ ಪರ ಹೇಮಂತ್ 21 ಎಸೆತಗಳಲ್ಲಿ 10 ಸಿಕ್ಸರ್, 1 ಬೌಂಡರಿ ನೆರವಿನೊಂದಿಗೆ 67 ರನ್ ಬಾರಿಸಿದರು. ಗುರಿ ಬೆನ್ನಟ್ಟಿದ ಮೀಡಿಯಾ ಸೂಪರ್ ಕಿಂಗ್ಸ್ ತಂಡ 1 ವಿಕೆಟ್ ಕಳೆದುಕೊಂಡು 84 ರನ್ ದಾಖಲಿಸಿತು. ತಂಡದ ಪರ ಇಸ್ಮಾಯಿಲ್ ಕಂಡಕೆರೆ 20 ಎಸೆತದಲ್ಲಿ 51 ರನ್ ಹಾಗೂ ಲೋಹಿತ್ 27 ರನ್ ಕಲೆ ಹಾಕಿದರು. ಇದಕ್ಕೂ ಮೊದಲು ಲೀಗ್ ಹಂತದಲ್ಲಿ 6 ತಂಡಗಳು ಅಂಕ ಪಟ್ಟಿಗಾಗಿ ಸೆಣಸಾಟ ನಡೆಯಿತು.

ಸಮಾರೋಪ ಸಮಾರಂಭ:

ಫೈನಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ಕೆ. ರಾಜು ಅವರನ್ನು ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ದಿನನಿತ್ಯ ವೃತ್ತಿಯ ಜಂಜಾಟದಲ್ಲಿರುವ ಪತ್ರಕರ್ತರಿಗೂ ಮನೋರಂಜನೆ ಅಗತ್ಯ ಎಂದು ಸಮಾಜ ಸೇವಕ ಕೆ.ಎಂ.ಬಿ. ಗಣೇಶ್ ಹೇಳಿದರು.


ನಗರದ ಪತ್ರಿಕಾಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್-4ನ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜ ಸೇವಕ, ಉದ್ಯಮಿ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎನ್. ನಂದ ಕುಮಾರ್ ಮಾತನಾಡಿ, ಸದಾ ವೃತ್ತಿಯಲ್ಲಿ ಮುಳುಗಿರುವ ಪತ್ರಕರ್ತರಿಗೆ ಬದಲಾವಣೆ ಅಗತ್ಯ. ಇಂದು ಎಲ್ಲ ಸಂಘ ಸಂಸ್ಥೆಗಳು, ಸಮುದಾಯ ಬಾಂಧವರು ಕ್ರೀಡಾಕೂಟ ಆಯೋಜನೆ ಮಾಡುತ್ತಿದ್ದಾರೆ ಎಂದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್. ಸವಿತಾ ರೈ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾ ಸಂಚಾಲಕ ಸಂತೋಷ್ ರೈ, ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮಂಜು ಸುವರ್ಣ, ಪ್ರಧಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ತೀರ್ಪುಗಾರರಾದ ರಮೇಶ್, ಮಂಜುನಾಥ್, ಸಚಿನ್ ಇದ್ದರು. ಕೊಡಗು ಪ್ರೆಸ್ ಕ್ಲಬ್ ಸದಸ್ಯ ಚೆನ್ನ ನಾಯಕ್ ಪ್ರಾರ್ಥಿಸಿದರೆ, ಹಿರಿಯ ಉಪಾಧ್ಯಕ್ಷ ನವಿನ್ ಡಿಸೋಜ ಸ್ವಾಗತಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಜೆ. ರಾಕೇಶ್ ಕಾರ್ಯಕ್ರಮ ನಿರೂಪಿಸಿದರು.