ಸಾರಾಂಶ
ಕೊಪ್ಪಳ: ದೊಡ್ಡ ಪರದೆ ಮೇಲೆ ಪ್ರಸಾರವಾದ ವಿಶ್ವಕಪ್ ಫೈನಲ್ ಪಂದ್ಯ, ಇದನ್ನು ವೀಕ್ಷಿಸಲು ಸೇರಿದ ಸಾವಿರಾರು ಅಭಿಮಾನಿಗಳ ಸಂಭ್ರಮವೇ ಸಂಭ್ರಮ. ಇದು, ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಂಡುಬಂದ ದೃಶ್ಯ.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಇದೇ ಮೊದಲ ಬಾರಿಗೆ ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ವಿಶ್ವಕಪ್ ಪಂದ್ಯವನ್ನು ದೊಡ್ಡ ಪರದೆ ಮೇಲೆ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಿದೆ.ಆಸನ ವ್ಯವಸ್ಥೆ, ದೊಡ್ಡ ಪರದೆ ಮೇಲೆ ಪ್ರಸಾರ ಹಾಗೂ ಅತ್ಯುತ್ತಮ ಸೌಂಡ್ ಸಿಸ್ಟಮ್‌ನಲ್ಲಿ ಕೇಳಿ ಬರುತ್ತಿರುವ ಕನ್ನಡ ವೀಕ್ಷಕ ವಿವರಣೆ ವ್ಯವಸ್ಥೆ ಇದ್ದುದರಿಂದ ಮನೆಯಲ್ಲಿ ಟಿವಿ ನೋಡುವುದನ್ನು ಬಿಟ್ಟು, ಸಾವಿರಾರು ಅಭಿಮಾನಿಗಳು ಜಮಾಯಿಸಿ, ಸಂಭ್ರಮದಿಂದ ಕ್ರಿಕೆಟ್ ವೀಕ್ಷಣೆ ಮಾಡುತ್ತಿರುವುದು ಕಂಡು ಬಂದಿತು.
ಈ ಹಿಂದೆ ಯಾವಾಗಲು ಈ ರೀತಿಯ ವ್ಯವಸ್ಥೆ ಮಾಡಿರಲಿಲ್ಲ. ಈ ಬಾರಿ ಮಾಡಿರುವ ವ್ಯವಸ್ಥೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಕ್ರೀಡಾಂಗಣದಲ್ಲಿ ನೋಡಿದ ಅನುಭವವಾಗುತ್ತದೆ. ಇಂಥ ಕಲ್ಪನೆ ಮಾಡಿಕೊಂಡು, ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತಕ್ಕೆ ನಾನಾ ಧನ್ಯವಾದ ಹೇಳುತ್ತೇನೆ ಎನ್ನುತ್ತಾರೆ ಕ್ರಿಕೆಟ್ ಅಭಿಮಾನಿ ಅಜ್ಮೀರ್.ಮಧ್ಯಾಹ್ನ ಪಂದ್ಯ ಪ್ರಾರಂಭವಾದ ವೇಳೆಯಲ್ಲಿ ಅಷ್ಟಾಗಿ ಪ್ರೇಕ್ಷಕರು ಇರಲಿಲ್ಲ. ಆದರೆ, ಕಾಲಕ್ರಮೇಣ ಸುದ್ದಿ ಎಲ್ಲರಿಗೂ ತಲುಪುತ್ತಿದ್ದಂತೆ ಮನೆಯಿಂದ ಬರಲಾರಂಭಿಸಿದರು. ಸಂಜೆಯ ವೇಳೆಗೆ ದೊಡ್ಡ ಪ್ರಮಾಣದಲ್ಲಿಯೇ ಸೇರಿದರು.
ಮನೆಯಲ್ಲಿ ಕುಳಿತು ಕುಟುಂಬ ಸಮೇತ ನೋಡುವುದಕ್ಕಿಂತ ಇಲ್ಲಿ ಸ್ನೇಹಿತರ ಜತೆಗೂಡಿ ನೋಡುವುದೇ ಹಬ್ಬದಂತೆ ಆಗುತ್ತದೆ. ಭಾರತ ಗೆದ್ದೇ ಗೆಲ್ಲುತ್ತದೆ ಎನ್ನುವ ವಿಶ್ವಾಸ ಮತ್ತು ಹಾರೈಕೆಯೊಂದಿಗೆ ಕ್ರಿಕೆಟ್ ನೋಡುತ್ತಿದ್ದೇವೆ ಎನ್ನುತ್ತಾರೆ ವೀರೇಶ.ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ವಿಶ್ವಕಪ್ ಕ್ರಿಕೆಟ್ ವೀಕ್ಷಣೆಗೆ ಮಾಡಿರುವ ದೊಡ್ಡ ಪರದೆಯ ವ್ಯವಸ್ಥೆಗೆ ಜಿಲ್ಲಾಧಿಕಾರಿ ನಳಿನ್ ಅತುಲ್ ಚಾಲನೆ ನೀಡಿದರು. ಬಳಿಕ ಶುಭ ಹಾರೈಸಿದ ಅವರು, ಭಾರತ ಗೆಲ್ಲಲಿ ಎಂದರು.
ದೊಡ್ಡ ಪರದೆಯಲ್ಲಿ ವಿಶ್ವಕಪ್ ಫೈನಲ್ ವೀಕ್ಷಣೆಗೆ ವ್ಯವಸ್ಥೆ ಮಾಡುವ ಕಲ್ಪನೆಯನ್ನು ಮೊದಲು ಮಾಡಿದ್ದೇ ಕೊಪ್ಪಳದಲ್ಲಿ. ಈ ಕುರಿತು ತಯಾರಿ ಮಾಡಿಕೊಂಡು, ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ವ್ಯವಸ್ಥೆ ಮಾಡಿಕೊಳ್ಳಲಾಯಿತು. ಈ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಇಡೀ ರಾಜ್ಯಾದ್ಯಂತ ವ್ಯವಸ್ಥೆ ಮಾಡಿಕೊಳ್ಳುವಂತೆ ಆದೇಶವನ್ನೇ ಮಾಡಿತು.ದೊಡ್ಡ ಪರದೆಯ ಮೇಲೆ ವಿಶ್ವಕಪ್ ಫೈನಲ್ ವೀಕ್ಷಣೆಗೆ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಯನ್ನು ಕೇಳಿಕೊಂಡಾಗ ಅವರು ಸಮ್ಮತಿಸಿದರು. ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದು, ನಮ್ಮ ನಿರೀಕ್ಷೆ ಮೀರಿ ಅಭಿಮಾನಿಗಳು ವೀಕ್ಷಣೆ ಮಾಡುತ್ತಿರುವುದು ಖುಷಿಯಾಗಿದೆ ಎನ್ನುತ್ತಾರೆ ವಿಠ್ಠಲ್ ಜಾಬಗೌಡ್ರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ.ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಗಗೌಡ್ರ, ತಾಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ಕ್ರಿಕೆಟ್ ಕೋಚ್ ಫಿರೋಜ್ ಅಲಿ, ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ ಗೊಂಡಬಾಳ ಇದ್ದರು.