ಸಾರಾಂಶ
- 2023 ರಲ್ಲಿ ಆಗಿರುವ ಒಟ್ಟು ಪ್ರಕರಣಗಳು 6241 । 2024ರಲ್ಲಿ 5904 ಪ್ರಕರಣಗಳು ದಾಖಲು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ಕಳೆದ 2024 ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಒಂದು ವರ್ಷದಲ್ಲಿ ಒಟ್ಟು 5904 ಪ್ರಕರಣ ಗಳು ದಾಖಲಾಗಿವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿ ಜಿಲ್ಲೆಯಲ್ಲಿ 6241 ಪ್ರಕರಣಗಳು ದಾಖಲಾಗಿದ್ದರೆ, ಕಳೆದ ವರ್ಷ 5904 ಪ್ರಕರಣಗಳು ದಾಖಲಾಗಿವೆ ಎಂದರು.ಜಿಲ್ಲೆಯಲ್ಲಿ ಕಳೆದ ವರ್ಷ 775 ಅಸ್ವಾಭಾವಿಕ ಸಾವುಗಳು ಸಂಭವಿಸಿದ್ದು, 55 ವಂಚನೆ ಪ್ರಕರಣಗಳು ದಾಖಲಾಗಿವೆ. ಕೆ.ಪಿ. ಆಕ್ಟ್ ಅಡಿ 2023ರಲ್ಲಿ 8712 ಕೇಸುಗಳು ದಾಖಲಾಗಿದ್ದು, ಈ ವರ್ಷದಲ್ಲಿ 12365 ಪ್ರಕರಣಗಳು ದಾಖಲಾಗಿವೆ. ಕೆ.ಪಿ.ಆಕ್ಟ್ ನಲ್ಲಿ ಪ್ರಕರಣ ಹೆಚ್ಚು ಮಾಡುವುದು ಜನರಲ್ಲಿ ಕಾನೂನಿನ ಬಗ್ಗೆ ಅರಿವಾಗಲಿ ಎಂಬ ಕಾರಣಕ್ಕಾಗಿ ಎಂದ ಅವರು, ಅದೇ ರೀತಿ ಧೂಮಪಾನ ವಿರುದ್ಧದ ಕೇಸುಗಳ ಸಂಖ್ಯೆಯೂ ಕೂಡ ಹೆಚ್ಚಾಗಿದೆ. ಅಂದರೆ, 1852 ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಿದರು.
ಕಳೆದ ವರ್ಷ ಜಿಲ್ಲೆಯಲ್ಲಿ 28 ಕೊಲೆ, 51 ಕೊಲೆಗೆ ಯತ್ನ, 44 ದೊಂಬಿ ಹಾಗೂ 521 ಹಲ್ಲೆ ಪ್ರಕರಣಗಳು ನಡೆದಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಎಲ್ಲಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕೊಲೆ ಪ್ರಕರಣಗಳು ಸಂಭವಿಸಲು ಪ್ರಮುಖ ಕಾರಣ. ಅನೈತಿಕ ಸಂಬಂಧ, ಕುಟುಂಬ ಸದಸ್ಯರ ನಡುವಿನ ಕಲಹ, ಆಸ್ತಿ ವಿವಾದ, ಕ್ಷುಲ್ಲಕ ಕಾರಣ, ಹಳೆ ದ್ವೇಷ, ಮಾನಸಿಕ ಅಸ್ವಸ್ಥ ವ್ಯಕ್ತಿಯಿಂದ ಕೊಲೆಗಳು ಆಗಿವೆ ಎಂದು ತಿಳಿಸಿದರು.ಸ್ವತ್ತು ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ 4 ಡಕಾಯತಿ, 4 ಸುಲಿಗೆ, 5 ಸರ ಅಪಹರಣ, 22 ಹಗಲು ಕಳ್ಳತನ, 74 ರಾತ್ರಿ ಮನೆ ಕಳ್ಳತನ, 16 ಮನೆ ಕಳವು, 194 ಸಾಮಾನ್ಯ ಕಳವು ಪ್ರಕರಣಗಳೂರು ದಾಖಲಾಗಿವೆ. 2023ಕ್ಕೆ ಹೋಲಿಕೆ ಮಾಡಿದರೆ ಈ ಎಲ್ಲಾ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಮುಖವಾಗಿದೆ.
ಕಳವು ಪ್ರಕರಣಗಳು ಇಳಿಮುಖವಾಗಲು ಕಾರಣ, ರಾತ್ರಿ ವೇಳೆಯಲ್ಲಿ ಓಡಾಡುವವರ ಮೇಲೆ ನಿಗಾ ಇಡಲಾಗಿದ್ದು, ಸ್ಥಳದಲ್ಲೇ ಅವರ ಕೈ ಬೆರಳಚ್ಚು ಪಡೆದು, ಈ ಹಿಂದೆ ಕಳವು ಆಗಿರುವ ಪ್ರಕರಣಗಳಲ್ಲಿ ಪಡೆದಿರುವ ಬೆರಳುಗಳ ಗುರುತು ಒಂದಕ್ಕೊಂದು ಹೋಲಿಕೆಯಾದರೆ ಅಂತಹ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದ ಅವರು, 2023ರಲ್ಲಿ 8300 ವ್ಯಕ್ತಿಗಳನ್ನು ಈ ಮಾದರಿಯಲ್ಲಿ ಪರಿಶೀಲನೆ ನಡೆಸಿದಾಗ 107 ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗಿದೆ. ಈ ವರ್ಷದಲ್ಲಿ 26684 ಮಂದಿಯನ್ನು ಪರಿಶೀಲಿಸಲಾಗಿದ್ದು ಈ ಪೈಕಿ 426 ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ ಎಂದರು.2023ರಲ್ಲಿ ₹6.26 ಕೋಟಿ ಸ್ವತ್ತು ಕಳುವಾಗಿದ್ದು, ಈ ಪೈಕಿ ₹2.16 ಕೋಟಿಗಳ ಸ್ವತ್ತನ್ನು ವಶಕ್ಕೆ ಪಡೆದು, ಇವುಗಳಲ್ಲಿ ₹1.97 ಕೋಟಿ ಸ್ವತ್ತನ್ನು ಹಿಂದಿರುಗಿಸಲಾಗಿದೆ. 2024ರಲ್ಲಿ ₹4.18 ಕೋಟಿ ಸ್ವತ್ತುಗಳು ಕಳುವಾಗಿದ್ದು, ಈ ಪೈಕಿ 2.51 ಕೋಟಿ ಸ್ವತ್ತು ವಶಕ್ಕೆ ಪಡೆದು, ಸಂಬಂಧಪಟ್ಟ ಮಾಲೀಕರಿಗೆ ₹1.54 ಕೋಟಿಗಳ ಸ್ವತ್ತನ್ನು ನೀಡಲಾಗಿದೆ ಎಂದು ಹೇಳಿದರು.
ದಾವಣಗೆರೆ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಮೈಸೂರು ಮತ್ತು ಹಾಸನ ಜಿಲ್ಲೆಗಳಿಗೆ ಸಂಬಂಧಪಟ್ಟ 29 ವಿವಿಧ ಪ್ರಕರಣಗಳಲ್ಲಿ ₹29.53 ಲಕ್ಷ ಸ್ವತ್ತನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಹಸ್ತಾಂತರ ಮಾಡಿದ್ದಾರೆ ಎಂದರು.ವರದಕ್ಷಿಣೆ ಕಿರುಕುಳ:ಕಳೆದ ವರ್ಷ ಜಿಲ್ಲೆಯಲ್ಲಿ ಒಂದು ವರದಕ್ಷಿಣಿ ಸಾವು ಸಂಭವಿಸಿದ್ದು, 9 ಅತ್ಯಾಚಾರ, 6 ವರದಕ್ಷಿಣಿ ಕಿರುಕುಳ, 77 ಪತಿ ಮತ್ತು ಸಂಬಂಧಿಕರಿಂದ ಕಿರುಕುಳ, 152 ಪ್ರಕರಣಗಳು ಮಹಿಳೆಯ ಶೀಲಭಂಗ ಮಾಡುವ ಉದ್ದೇಶದಿಂದ ಅಪರಾಧಿಕ ಬಲ ಪ್ರಯೋಗ ಮಾಡುವ ಕೇಸುಗಳಾಗಿವೆ ಎಂದರು.
ಜಿಲ್ಲೆಯಲ್ಲಿ ಒಂದು ಕೊಲೆ, 69 ಅಪಹರಣ, 121 ಪೋಕ್ಸೋ, 2 ಬಾಲ್ಯ ವಿವಾಹ ತಡೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ, ಚಿಕ್ಕಮಗಳೂರು ಡಿವೈಎಸ್ಪಿ ಶೈಲೇಂದ್ರ, ತರೀಕೆರೆ ಡಿವೈಎಸ್ಪಿ ಹಾಲಮೂರ್ತಿರಾವ್ ಉಪಸ್ಥಿತರಿದ್ದರು.
2 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿ ಎಸ್ಪಿ ಡಾ. ವಿಕ್ರಂ ಅಮಟೆ ಮಾತನಾಡಿದರು. ಎಎಸ್‌ಪಿ ಕೃಷ್ಣಮೂರ್ತಿ, ಡಿವೈಎಸ್ಪಿಗಳಾದ ಶೈಲೇಂದ್ರ, ಹಾಲಮೂರ್ತಿರಾವ್ ಇದ್ದರು.