ರಾಜ್ಯಾದ್ಯಂತ 24ರಂದು ಕ್ರೈಂ, ಥ್ರಿಲ್ಲರ್ ‘ಎವಿಡೆನ್ಸ್‌’ ಚಿತ್ರ ಬಿಡುಗಡೆ

| Published : May 22 2024, 12:56 AM IST

ರಾಜ್ಯಾದ್ಯಂತ 24ರಂದು ಕ್ರೈಂ, ಥ್ರಿಲ್ಲರ್ ‘ಎವಿಡೆನ್ಸ್‌’ ಚಿತ್ರ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಇಂಟರಾಗೇಶನ್ ರೂಮ್‌ನಲ್ಲಿ ಸಾಕ್ಷ್ಯಧಾರಗಳ ಸುತ್ತ ನಡೆಯುವ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಜೊತೆಗೊಂದು ಪ್ರೇಮಕಥೆ ಇಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎರಡು ಸಾಹಸ ದೃಶ್ಯಗಳಿವೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದಲ್ಲಿ ಮೂರು ದಶಕಗಳ ಕಾಲ ಪತ್ರಕರ್ತರಾಗಿ, ವಿತರಕರಾಗಿ ಸೇವೆ ಸಲ್ಲಿಸಿದ ದಿ.ಪುರುಷೋತ್ತಮ್‌ರವರ ಪುತ್ರ ಸಿ. ಪಿ. ಪ್ರವೀಣ್‌ರವರ ಚೊಚ್ಚಲ ನಿರ್ದೇಶನದ ಕನ್ನಡ ಚಲನಚಿತ್ರ ಎವಿಡೆನ್ಸ್ ಮೇ.೨೪ ರಂದು ರಾಜಾದ್ಯಂತ ಬಿಡುಗಡೆಯಾಗಲಿದೆ. ಕ್ರೈಮ್, ಥ್ರಿಲ್ಲರ್ ನೊಂದಿಗೆ ಸಾಗುವ ತ್ರಿಕೋನ ಪ್ರೇಮಕಥೆ ಹೊಂದಿರುವುದಾಗಿ ಚಿತ್ರದ ನಿರ್ದೇಶಕ ಸಿ. ಪಿ. ಪ್ರವೀಣ್ ತಿಳಿಸಿದ್ದಾರೆ.

ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರಕಥೆ ಬರೆದು, ನಿರ್ದೇಶಿಸಿರುವ ನನ್ನ ಮೊದಲ ಚಿತ್ರ ಇದೇ ಶುಕ್ರವಾರ ರಾಜ್ಯದ ೪೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬೆಂಗಳೂರಿನ ಕೆ. ಜಿ. ರಸ್ತೆಯ ಪ್ರಮುಖ ಚಿತ್ರಮಂದಿರ ಸೇರಿ, ಮೈಸೂರು, ಹಾಸನ, ಚಿಕ್ಕಮಗಳೂರು, ರಾಮನಗರ ಹಾಗೂ ನಮ್ಮೂರಿನ ಧನಲಕ್ಷ್ಮೀ ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ. ಇಂಟರಾಗೇಶನ್ ರೂಮ್‌ನಲ್ಲಿ ಸಾಕ್ಷ್ಯಧಾರಗಳ ಸುತ್ತ ನಡೆಯುವ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಜೊತೆಗೊಂದು ಪ್ರೇಮಕಥೆ ಇಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎರಡು ಸಾಹಸ ದೃಶ್ಯಗಳಿವೆ. ಚಿಕ್ಕಮಗಳೂರು, ಮಂಗಳೂರು, ರಾಮನಗರ, ನೆಲಮಂಗಲ, ಕಂಠೀರವ ಸ್ಟುಡೀಯೋಗಳಲ್ಲಿ ಸೆಟ್ ನಿರ್ಮಾಣ ಮಾಡಿ ಚಿತ್ರೀಕರಣ ಮಾಡಲಾಗಿದೆ. ಚಿತ್ರವು ತುಂಬ ಚೆನ್ನಾಗಿ ಮೂಡಿಬಂದಿದ್ದು, ಜನ ಸಿನಿಮಾವನ್ನು ಚಿತ್ರ ಮಂದಿರಕ್ಕೇ ಬಂದು ನೋಡಿ, ನಮ್ಮನ್ನು ಪ್ರೋತ್ಸಾಹಿಸಬೇಕು ಎಂದ ಅವರು, ಬೆಂಗಳೂರಿನಲ್ಲಿ ಸಿಗುವ ಓಪನಿಂಗ್, ನಮ್ಮೂರಿನ ಚಿತ್ರಮಂದಿರದಲ್ಲಿಯೂ ಸಿಗಲಿ ಎಂಬುದು ನನ್ನ ಆಶಯ, ಇದಕ್ಕಾಗಿ ಪಟ್ಟಣದ ಜನತೆ ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕೆಂದರು.

ಸಿನಿಮಾ ನಿರ್ದೇಶನದ ಜೊತೆಗೆ ಚಿತ್ರಕ್ಕಾಗಿ ಎರಡು ಹಾಡುಗಳನ್ನು ತಾವೇ ಬರೆದಿದ್ದು, ಉಪೇಂದ್ರ, ದಿನೇಶ್‌ಬಾಬುರವರಲ್ಲಿ ಕೆಲಸ ಕಲಿತ ನಾನು, ಅವರ ಛಾಯೆಯಲ್ಲಿಯೇ ಚಿತ್ರಕಥೆ ರಚಿಸಿದ್ದೇನೆ. ಇದುವರೆಗೂ ೧೦ ಸಿನಿಮಾಗಳಿಗೆ ಹಾಡು ಬರೆದಿದ್ದೇನೆ ಎಂದ ಅವರು, ಈ ಚಿತ್ರ ಶ್ರೀದೃತಿ ಪ್ರೊಡಕ್ಷನ್ ಲಾಂಛನದಲ್ಲಿ ಶ್ರೀನಿವಾಸಪ್ರಭು, ಕೆ.ಮಾದೇಶ್, ಸಿ.ಎಸ್.ನಟರಾಜ್, ನಿರ್ಮಾಣ ಮಾಡಿದ್ದು, ಅರವಿಂದ್ ಅಚ್ಚು, ಎಂ.ಎನ್.ರವೀಂದ್ರರಾವ್, ಸಿ. ಪಿ. ಪ್ರಶಾಂತ್, ಕೆ. ರಮೇಶ್, ಕಿಶೋರ್, ಬಾಬು ಮತ್ತು ನರಸಿಂಹಮೂರ್ತಿ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರದ ನಾಯಕನಾಗಿ ರೋಬೋ ಗಣೇಶ್, ಮತ್ತು ಮಾನಸ ಜೋಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ೫೦ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದಾರೆ ಎಂದರು.

ಪುರಸಭಾ ಮಾಜಿ ಸದಸ್ಯ ರಘು ಶಾಮಿಯಾನ ಮಾತನಾಡಿ, ಪಟ್ಟಣದ ನಮ್ಮ ಕೋಟೆ ಬಡಾವಣೆಯಲ್ಲಿ ಬೆಳೆದ ಹುಡುಗ ಪ್ರವೀಣ್, ಅವನ ಕಾರ್ಯಕ್ಕೆ ಬೆನ್ನುತಟ್ಟುವ ಕೆಲಸ ನಮ್ಮಿಂದಾಗಬೇಕು, ಸ್ಥಳೀಯರಾಗಿ ನಾವು ಅವರಿಗೆ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ, ನಮ್ಮ ಕೋಟೆಯಿಂದ ಚಲನಚಿತ್ರರಂಗಕ್ಕೆ ಹಿನ್ನೆಲೆ ಗಾಯಕಿಯಾಗಿ ಸಿ. ಎಸ್. ನಂದಿತಾ, ಹಾಸ್ಯ ಕಲಾವಿದ ಕೋಟೆ ನಾಗರಾಜುರನ್ನು ನೀಡಿದೆ ಹಿರಿಮೆ ಇದೆ, ಇದೀಗ ಪ್ರವೀಣ್‌ರ ಸರದಿಯಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕರಾದ ಪ್ರದೀಪ್, ಅರವಿಂದ್‌ಕುಮಾರ್, ಕೆ.ರಮೇಶ್, ಕಲಾವಿದರಾದ ಆರಾಧ್ಯ ಶಿವಕುಮಾರ್, ಪ್ರವೀಣ್ ಸಹೋದರ ಮುರಳೀಧರ್ ಇದ್ದರು.