ಗುಣಮಟ್ಟದ ಸೇವೆ ನೀಡದ ಬಿಎಸ್ಎನ್ಎಲ್ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ದಾವೆ: ಕೋಟ

| Published : Nov 22 2024, 01:15 AM IST

ಸಾರಾಂಶ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಬಿಎಸ್‌ಎನ್ಎಲ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗ್ರಾಹಕರಿಗೆ ಬಿಎಸ್‌ಎನ್ಎಲ್‌ ಸೇವೆಗಳು ಸಿಗುತ್ತಿಲ್ಲ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಉಡುಪಿ ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್ 191 ಟವರ್‌ಗಳಿದ್ದು, ಅವುಗಳಲ್ಲಿ ಬಹಳಷ್ಟು ಟವರ್‌ಗಳು ಇನ್ನೂ 3ಜಿ ವ್ಯವಸ್ಥೆಯಲ್ಲಿಯೇ ಕಾರ್ಯಾಚರಿಸುತ್ತಿವೆ. ಇದರಿಂದ ಗ್ರಾಹಕರಿಗೆ ಪೂರ್ಣ ಸೇವೆಗಳು ಸಿಗುತ್ತಿಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಬಿ.ಎಸ್‌.ಎನ್‌.ಎಲ್‌. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅವರು ಬುಧವಾರ ರಜತಾದ್ರಿಯ ತಮ್ಮಕಚೇರಿಯಲ್ಲಿ ನಡೆದ ಬಿ.ಎಸ್.ಎನ್.ಎಲ್ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ಸುಮಾರು 60ಕ್ಕೂ ಅಧಿಕ ಟವರ್‌ಗಳಲ್ಲಿ ಬ್ಯಾಟರಿ ಸಮಸ್ಯೆ ಇದೆ. ಕೆಲವು ಕಡೆಗಳಲ್ಲಿ ಜನರೇಟರ್ ವ್ಯವಸ್ಥೆ ಇದ್ದರೂ ಕೂಡ ನಿರ್ವಹಣೆ ಸರಿಯಾಗಿಲ್ಲ. ವಹಿಸಿಕೊಂಡ ಗುತ್ತಿಗೆದಾರರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಅಧಿಕಾರಿಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.

ಬ್ಯಾಟರಿಗಳು ಬಂದಿವೆ, ಆದರೆ ಗುತ್ತಿಗೆದಾರರು ಅವುಗಳನ್ನು ಅಳವಡಿಸಿಲ್ಲ ಎಂಬ ಅಧಿಕಾರಿಗಳ ಉತ್ತರಕ್ಕೆ ಅಸಮಾಧಾನಗೊಂಡ ಸಂಸದರು, ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳುವಂತೆ ಸಂಸದರು ಸೂಚಿಸಿದರು.

ಸುಮಾರು 30ಕ್ಕೂ ಹೆಚ್ಚು ಹೊಸ ಟವರ್‌ಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅವುಗಳನ್ನು ಪರಿಶೀಲಿಸಿ ತಕ್ಷಣ ಅನುಮತಿ ನೀಡಿ. ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾಗಿರುವ ಬಿ.ಎಸ್.ಎನ್.ಎಲ್. ಖಾಸಗಿ ಕಂಪೆನಿಗಳಿಗೆ ಸಡ್ಡು ಹೊಡೆಯುವಂತೆ ಸೇವೆ ನೀಡಬೇಕು, ಪ್ರತಿಹಳ್ಳಿಗೂ ನೆಟ್‌ವರ್ಕ್ ಸಂಪರ್ಕ ನೀಡಬೇಕು, ಆಗ ಮಾತ್ರ ಜನರಿಗೆ ವಿಶ್ವಾಸ ಬರುವುದಕ್ಕೆ ಸಾಧ್ಯ ಎಂದವರು ಸಲಹೆ ಮಾಡಿದರು.

ಪೂರೈಕೆಯಾಗುತ್ತಿರುವ ಬ್ಯಾಟರಿ ಮತ್ತು ಸೋಲಾರ್ ಪ್ಯಾನೆಲ್‌ಗಳ ಗುಣಮಟ್ಟ ಕಳಪೆಯಾಗಿದೆ ಎಂದು ಅಧಿಕಾರಿಗಳು ಹೇಳಿದರು. ಇದಕ್ಕೆ ಸಂಬಂಧಿತ ಕೇಂದ್ರ ಸಚಿವರಿಗೆ ಪತ್ರ ಬರೆದು ಈ ಬಗ್ಗೆ ಗಮನಸೆಳೆಯುತ್ತೇನೆ ಎಂದು ಸಂಸದರು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಬಿ.ಎಸ್.ಎನ್.ಎಲ್. ಡಿಜಿಎಂ ನವೀನ್ ಗುಪ್ತ, ಎ.ಜಿಆರ್ ಎಂ. ಬಿಂಧು ಮುರಳೀಧರ್ ಮೊದಲಾದವರು ಇದ್ದರು.

20 ಗ್ರಾಮಗಳಲ್ಲಿ ಪೈಲಟ್ ಯೋಜನೆ: ಬಿ.ಎಸ್.ಎನ್.ಎಲ್ ಟವರ್ ನಿರ್ವಹಣೆಗೆ ಪ್ರಾಯೋಗಿಕ ಯೋಜನೆಯನ್ನು ಯೋಜಿಸಿರುವುದಾಗಿ ತಿಳಿಸಿದ ಸಂಸದರು, ಗ್ರಾ.ಪಂ ಮಟ್ಟದಲ್ಲಿ ನಿರ್ವಹಣೆಗೆ 20 ಗ್ರಾಮಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿ ನಿರ್ವಹಣೆ ಜವಾಬ್ದಾರಿಯನ್ನು ನಿರ್ವಾಹಕರಿಗೆ ನೀಡಲಾಗುವುದು. ಅದರ ಯಶಸ್ಸಿನ ನಂತರ ಇತರ ಗ್ರಾಮಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಆಲೋಚನೆ ಮಾಡಿರುವುದಾಗಿ ಅವರು ತಿಳಿಸಿದರು.