ಕನ್ನಡಪ್ರಭ ವಾರ್ತೆ ಕೊಪ್ಪ
ಮಳೆಗಾಲದ ಆರಂಭಿಕ ಹಂತದಲ್ಲಿ ತಾಲೂಕಿನ ಕೆಲವೆಡೆ ಮಳೆ ಕಡಿಮೆ ಅನಿಸಿದರು ಮಳೆಯಿಂದ ಕೆಲ ವೊಮ್ಮೆ ಅತಿವೃಷ್ಟಿ ಕೆಲವೊಮ್ಮೆ ಅನಾವೃಷ್ಟಿ ಸೃಷ್ಟಿಯಾಗಬಹುದು. ಯಾವುದೇ ಸಮಯದಲ್ಲಿ ನಾವು ನಿರ್ಲಕ್ಷ್ಯ ವಹಿಸದೆ ಅಧಿಕಾರಿ, ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು ಯಾರಿಗೂ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಟಿ.ಡಿ. ರಾಜೇಗೌಡ ಸೂಚಿಸಿದರು.ಶೃಂಗೇರಿ ವಿಧಾನಸಭಾ ಕ್ಷೇತ್ರದ ಕೊಪ್ಪ ತಾಲೂಕು ಪಂಚಾಯಿತಿಯಲ್ಲಿ ಶುಕ್ರವಾರ ಶಾಸಕ ಟಿ.ಡಿ. ರಾಜೇಗೌಡರ ಅಧ್ಯಕ್ಷತೆಯಲ್ಲಿ ನಡೆದ ವಿಪತ್ತು ನಿರ್ವಹಣೆ ಸಭೆಯಲ್ಲಿ ಮಾತನಾಡಿ ಕಳೆದ ವರ್ಷದಂತೆ ಈ ಬಾರಿಯು ವಿಪತ್ತು ನಿರ್ವಹಣೆಗೆ ಸಿದ್ದವಾಗಿರಬೇಕು ಎಂದರು.
ಕಡತಗಳನ್ನು ಪರಿಶೀಲಿಸಿ ಎಲ್ಲಾ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ರಸ್ತೆಗಳ ಬದಿಯಲ್ಲಿ ಬೀಳುವ ಹಂತದಲ್ಲಿರುವ ಒಣಗಿದ ಮರಗಳಿದ್ದರೆ ತೆರವುಗೊಳಿಸುವಂತೆ, ಅಪಾಯಕಾರಿ ಸ್ಥಿತಿಯಲ್ಲಿರುವ ಆಂಗನವಾಡಿ ಕೇಂದ್ರಗಳಿದ್ದರೆ ಅಧಿಕಾರಿಗಳಿಗೆ ಮಾಹಿತಿ ನೀಡಿ ನಿರ್ಲಕ್ಷ್ಯ ವಹಿಸಿದಲ್ಲಿ ಲಿಖಿತ ದೂರುನೀಡಿ ಕ್ರಮಗೊಳ್ಳದೆ ಇರುವ ಅಧಿಕಾರಿ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಎಚ್ಚರಿಕೆ ನೀಡಿದರು.ಶೃಂಕೋನ ತಾಲೂಕು ಸಂಬಂದ ಧರ್ಮಸ್ಥಳದ ವಿಪತ್ತು ನಿರ್ವಹಣಾ ಘಟಕ ಸೇರಿದಂತೆ ತಾಲೂಕುಗಳಲ್ಲಿ ಇನ್ನೆಷ್ಟು ಸಂಘಟನೆಗಳಿವೆ ಎಂದು ತಿಳಿದುಕೊಂಡು ಸಂಪರ್ಕದಲ್ಲಿರುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಬಿಳಾಲುಕೊಪ್ಪ, ಕೊಗ್ರೆ, ಬಸರಿಕಟ್ಟೆ, ಭಾಗಗಳು ಹೆಚ್ಚು ಮಳೆ ಬಿಳುವ ಪ್ರದೇಶಗಳಾಗಿದ್ದು, ಈ ಭಾಗಗಳ ಮುಖ್ಯ ರಸ್ತೆಗಳ ಚರಂಡಿ ಮುಚ್ಚಿ ಹೋಗುವಂತೆ ಟಿಂಬರ್ ಹಾಕಿಟ್ಟಿದ್ದಾರೆ. ಮಳೆ ಬಂದರೆ ಚರಂಡಿ ನೀರು ಹರಿದು ಸೇರುವ ಜಾಗ ಬದಲಾಗಿ ಧರೆ, ರಸ್ತೆಗಳ ಕುಸಿತವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಟಿಂಬರ್ ಕಡಿಯುವವರಿಗೆ ಮಾಹಿತಿ ನೀಡಿ ಶೀಘ್ರದಲ್ಲೇ ತೆರವುಗೊಳಿಸುವಂತೆ ತಿಳಿಸಲು ಪಿ.ಡಬ್ಲ್ಯೂ.ಡಿ ಅಧಿಕಾರಿಗಳಿಗೆ ಸೂಚಿಸಿದರು.
ತಹಸೀಲ್ದಾರ್ ಲಿಖಿತ ಮೋಹನ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಸೇರಿದಂತೆ ಕೊಪ್ಪ ತಾಲೂಕಿನ ಅರಣ್ಯ, ಸಾಮಾಜಿಕ ಅರಣ್ಯ, ಕೃಷಿ, ತೋಟಗಾರಿಕೆ, ಅಗ್ನಿಶಾಮಕ, ಪೋಲಿಸ್, ಆರೋಗ್ಯ ಇಲಾಖೆ, ಪಶುಸಂಗೋಪನೆ, ಜಿಪಂ ಎಂಜಿನಿಯರಿಂಗ್, ಮೆಸ್ಕಾಂ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.