ಸಾರಾಂಶ
ಶಿರಹಟ್ಟಿ: ಎರಡು ವರ್ಷ ಕಳೆದರೂ ಸರ್ಕಾರದ ಅಭಿವೃದ್ಧಿ ಕೆಲಸಗಳು ಮುಗಿದಿಲ್ಲ. ಸಾಕಷ್ಟು ಕೆಲಸ ಕಾರ್ಯ ಬಾಕಿ ಇವೆ. ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಕೂಡ ನೆಲಕಚ್ಚಿದೆ. ಇದಕ್ಕೆ ಅಧಿಕಾರಿಗಳಲ್ಲಿನ ಅಶಿಸ್ತು, ಕರ್ತವ್ಯ ಲೋಪ,ನಿಷ್ಕಾಳಜಿಯೇ ಕಾರಣ.ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಸೂಚನೆ ನೀಡಿದರು.
ಮಂಗಳವಾರ ತಾಪಂ ಸಭಾ ಭವನದಲ್ಲಿ ಕರೆಯಲಾಗಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖಾವಾರು ಚರ್ಚೆ ನಡೆಸಿ ಅಧಿಕಾರಿಗಳ ವರ್ತನೆ ಪ್ರಶ್ನಿಸಿ ಮಾತನಾಡಿದರು. ಮೀಸಲು ಮತಕ್ಷೇತ್ರದಲ್ಲಿ ಅಧಿಕಾರಿಗಳ ನಡೆಯಿಂದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಕೈಗೆತ್ತಿಕೊಂಡಿರುವ ಕೆಲಸ ಕಾರ್ಯಗಳು ಅವಧಿಯೊಳಗೆ ಮುಗಿಯುತ್ತಿಲ್ಲ. ಇದಕ್ಕೆಲ್ಲ ಅಧಿಕಾರಿಗಳ ಅಶಿಸ್ತು ಕಾರಣ. ಇವರ ಮೇಲೆ ಮುಲಾಜಿಲ್ಲದೇ ಕ್ರಿಮಿನಲ್ ಕೇಸ್ ದಾಖಲಿಸುವಂತೆ ತಾಪಂ ಇಒ ರಾಮಣ್ಣ ದೊಡ್ಡಮನಿ ಅವರಿಗೆ ಠರಾವ್ ಪುಸ್ತಕದಲ್ಲಿ ಬರೆಸುವಂತೆ ಸೂಚನೆ ನೀಡಿದರು.ತೋಟಗಾರಿಕೆ ಇಲಾಖೆ, ಅಬಕಾರಿ, ಪೊಲೀಸ್, ಕೆಆರ್‌ಐಡಿಎಲ್ ಸೇರಿದಂತೆ ಸಭೆಗೆ ಖುದ್ದಾಗಿ ಹಾಜರಾಗದೇ ಅಪೂರ್ಣ ಮಾಹಿತಿಯೊಂದಿಗೆ ಸಹಾಯಕರನ್ನು ಸಭೆಗೆ ಕಳುಹಿಸಿದ್ದಕ್ಕೆ ಗರಂ ಆದ ಶಾಸಕರು ಒಂದು ವಾರ ಮುಂಚಿತವಾಗಿಯೇ ಸಭೆ ನಡೆಸುವ ಬಗ್ಗೆ ಲಿಖಿತ ಪತ್ರ ಕಳುಹಿಸಿ ಸಹಿ ಪಡೆದರೂ ಪ್ರತಿಯೊಂದು ಸಭೆಗೂ ಸೂಕ್ತ ಕಾರಣ ತಿಳಿಸದೇ ಅಧಿಕಾರಿಗಳು ಗೈರ ಉಳಿಯುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಕ್ರಿಮಿನಲ್ ಕೇಸ್ ದಾಖಲಿಸಿ: ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಜೆಜೆಎಂ ಯೋಜನೆ ಶಿರಹಟ್ಟಿ ತಾಲೂಕಿನಲ್ಲಿ ಸಂಪೂರ್ಣ ವಿಫಲವಾಗಿದ್ದು, ಕೋಟಿಗಟ್ಟಲೆ ಬಿಲ್ ಪಡೆದು ಗುತ್ತಿಗೆದಾರರು ಪಾರಾಗಿದ್ದಾರೆ. ಬಹುತೇಕ ಗ್ರಾಮಗಳಲ್ಲಿ ಪೈಪ್ ಲೈನ್ ಜೋಡಣೆಗೆ ತೆಗೆದಿರುವ ತಗ್ಗು ಗುಂಡಿ ಸಹ ಮುಚ್ಚಿಲ್ಲ. ಜನತೆಗೆ ಬಹು ಉಪಯುಕ್ತ ಯೋಜನೆ ಇದಾಗಿದ್ದು, ಅಧಿಕಾರಿಗಳ ಮತ್ತು ಗುತ್ತಿಗೆದಾರರ ಹೊಂದಾಣಿಕೆಯಿಂದ ಯೋಜನೆ ಸಂಪೂರ್ಣ ಹಾಳಾಗಿದೆ ಎಂದರು.ಕಾಮಗಾರಿ ಪೂರ್ಣ ಮುಗಿಯುವ ಮೊದಲೇ ಗ್ರಾಪಂ ಪಿಡಿಒಗಳು ಗುತ್ತಿಗೆದಾರರಿಂದ ಹಣ ಪಡೆದು ಹಸ್ತಾಂತರ ಮಾಡಿದ್ದಾರೆ. ಇದು ನಮ್ಮೆಲ್ಲರ ಗಮನಕ್ಕೆ ಬಂದಿದೆ. ಪಂಚಾಯತಿವಾರು ಸಂಪೂರ್ಣ ವಿವರವಾದ ಮಾಹಿತಿ ಪಡೆದುಕೊಳ್ಳಬೇಕು. ನಂತರ ಗುತ್ತಿಗೆದಾರರನ್ನು ಕರೆಸಿ. ಬರದೇ ಇದ್ದರೆ ಕಪ್ಪುಪಟ್ಟಿಗೆ ಸೇರಿಸಿ ಕ್ರಿಮಿನಲ್ ಕೇಸ್ ದಾಖಲಿಸುವ ಕುರಿತು ನೊಟೀಸ್ ನೀಡಿ ಎಂದು ನಗರ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಪಾಟೀಲಗೆ ಸೂಚನೆ ನೀಡಿದರು.
ಪಟ್ಟಣದ ಮೇಗೇರಿ ಓಣಿಯಲ್ಲಿರುವ ಸಿ.ಸಿ.ನೂರಶೆಟ್ಟರ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಚಂಪಾ ಪಾಟೀಲ ವಿದ್ಯಾರ್ಥಿಗಳ ಓದಿನ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವ ಆರೋಗಳು ಕೇಳಿ ಬರುತ್ತಿವೆ. ಅಲ್ಲದೇ ಶಾಲೆಯಲ್ಲಿ ಹಣದ ಅವ್ಯವಹಾರ ಕೂಡ ಮಾಡಿರುವ ಆರೋಪ ಇವರ ಮೇಲಿದೆ ಎಂಬುದು ತನಿಖೆಯಿಂದ ಕಂಡು ಬಂದಿದೆ. ಫಲಿತಾಂಶ ಹೆಚ್ಚಳ ಮತ್ತು ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇವರ ವರ್ಗಾವಣೆಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.ತಾಲೂಕಿನ ಕಡಕೋಳ ಗ್ರಾಮದ ಕೆಪಿಎಸ್‌ಸಿ ಶಾಲೆಯಲ್ಲಿ ₹ ೫ ಲಕ್ಷ ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮುಂದಾಗಿ ೨ವರ್ಷ ಕಳೆದಿದೆ.ಕಾಮಗಾರಿ ಮುಗಿಸದೇ ಗುತ್ತಿಗೆದಾರರು ಬಿಲ್ ಪಡೆದುಕೊಂಡು ಹೋಗಿದ್ದಾರೆ.ಹೀಗಾದರೆ ಸರ್ಕಾರದ ಯೋಜನೆಗಳು ಶ್ರೀಸಾಮಾನ್ಯರಿಗೆ ತಲುಪುವುದು ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಗುತ್ತಿಗೆದಾರರು ಎಲ್ಲಿಯವರು ಕಾಮಗಾರಿ ಪರಿಶೀಲನೆ ಮಾಡದೇ ಅಧಿಕಾರಿಗಳು ಹೇಗೆ ಬಿಲ್ ನೀಡಿದ್ದಿರೀ ಎಂದು ಸಭೆಗೆ ಸಮಗ್ರ ಮಾಹಿತಿ ನೀಡುವಂತೆ ಒತ್ತಾಯಿಸಿದರು.
ಪಪಂಯಿಂದ ಹಂಚಿಕೆ ಮಾಡಬೇಕಿದ್ದ ೧೧೭ಆಶ್ರಯ ಪ್ಲಾಟ್‌ಗಳ ಫಲಾನುಭವಿಗಳ ಆಯ್ಕೆ ಪಟ್ಟಿ ಪೂರ್ಣಗೊಂಡಿದೆ. ತುರ್ತು ನೊಟೀಸ್ ಬೋರ್ಡ್‌ಗೆ ಅಂಟಿಸಬೇಕು. ಯಾರಿಂದಲಾದರೂ ತಕರಾರು ಬಂದರೆ ಅವರಿಂದ ಎಲ್ಲ ದಾಖಲೆ ಪಡೆದುಕೊಂಡು ಪರಿಶೀಲನೆ ನಡೆಸಿ ವರದಿ ನೀಡುವಂತೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು. ಕಂದಾಯ ನಿರೀಕ್ಷಕರ ನೇತೃತ್ವದಲ್ಲಿ ಜಂಟಿ ಸಮಿತಿ ಮಾಡಿ ಪರಿಶೀಲನೆ ನಡೆಸಿ ವರದಿ ಒಪ್ಪಿಸುವುದಾಗಿ ತಿಳಿಸಿದರು.ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಎನ್.ಕೆ.ನಿರ್ಮಲಾ, ತಹಸೀಲ್ದಾರ್ ಅನಿಲ ಬಡಿಗೇರ, ತಾಪಂ ಇಒ ರಾಮಣ್ಣ ದೊಡ್ಡಮನಿ, ವೀರಯ್ಯ ಮಠಪತಿ ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳು ಇದ್ದರು.