ಸಾರಾಂಶ
ಇನ್ನು ಮುಂದೆ ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ಯಾವುದೇ ಸಂಘಟನೆ ಕಾರ್ಯ ಚಟುವಟಿಕೆ ನಡೆಸಿದರೆ ರಾಜ್ಯಾದ್ಯಂತ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರೊ.ಬಿ. ಕೃಷ್ಣಪ್ಪ ಅವರಿಂದ ಸ್ಥಾಪನೆಗೊಂಡು ನೋಂದಣಿಯಾಗಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.ನಂ. 47 / 74-75)ಯು ಅಧಿಕೃತ ಸಂಘಟನೆ ಎಂಬುದಾಗಿ ನ್ಯಾಯಾಲಯ ಆದೇಶ ನೀಡಿದೆ. ಇನ್ನು ಮುಂದೆ ದಲಿತ ಸಂಘರ್ಷ ಸಮಿತಿ ಹೆಸರಿನಲ್ಲಿ ಯಾವುದೇ ಸಂಘಟನೆ ಕಾರ್ಯ ಚಟುವಟಿಕೆ ನಡೆಸಿದರೆ ರಾಜ್ಯಾದ್ಯಂತ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಹೇಳಿದ್ದಾರೆ.ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಹೊಸ ಸಂಘಟನೆ ದಲಿತ ಸಂಘರ್ಷ ಸಮಿತಿ ಹೆಸರು ಬಳಕೆ ಮಾಡದಂತೆ ಕೋರ್ಟ್ ಆದೇಶ ನೀಡಿದೆ ಎಂದರು.
ನೋಂದಣಿ ತಡೆಗೆ ಕೋರ್ಟ್ ಮೊರೆ:ದಲಿತ ಸಂಘರ್ಷ ಸಮಿತಿ ಹೆಸರನ್ನು ಬಿಟ್ಟು ಬೇರೆ ಹೆಸರಿನೊಂದಿಗೆ ಸಂಘಟನೆ ಕಟ್ಟಿದರೆ ನಮ್ಮ ಅಭ್ಯಂತರವಿಲ್ಲ ಎಂದ ಗುರುಮೂರ್ತಿ, ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳ ನೋಂದಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ದಸಂಸ ಹೆಸರಿನಲ್ಲಿ ನೋಂದಣಿಯಾದ ಸಂಘಟನೆಗಳ ಪಟ್ಟಿ ಪಡೆಯಲಿದ್ದೇವೆ. ಅವೆಲ್ಲವನ್ನೂ ವಜಾಗೊಳಿಸಲು ಹಾಗೂ ದಸಂಸ ಹೆಸರಿನಲ್ಲಿ ಯಾರೂ ಹೊಸದಾಗಿ ನೋಂದಣಿ ಮಾಡಬಾರದೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದೇನೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ದ.ಕ. ಜಿಲ್ಲಾ ಉಸ್ತುವಾರಿ ಮಹಾಲಿಂಗ ಕೆ.ಕಡಬ, ಜಿಲ್ಲಾ ಸಂಚಾಲಕ ಕೃಷ್ಣಪ್ಪ ಸುಣ್ಣಾಜೆ ಕಡಬ, ಪದಾಧಿಕಾರಿಗಳಾದ ಅಣ್ಣು ಬೆಳ್ತಂಗಡಿ, ಬಾಬು ಎಲ್. ಮಂಗಳೂರು, ಮಹೇಶ್ ಪುತ್ತೂರು, ಸುಂದರ ನಿಡ್ಪಳ್ಳಿ, ಪುಟ್ಟಣ್ಣ ಬೆಳ್ತಂಗಡಿ, ಯಶೋಧಾ ಸುರತ್ಕಲ್, ಭಾಸ್ಕರ ಸುರತ್ಕಲ್ ಇದ್ದರು.