ಸಾರಾಂಶ
ಬೆಂಗಳೂರಿನಲ್ಲಿ ಬೃಹತ್ ವಸತಿ ಸಮುಚ್ಚಯಗಳಲ್ಲಿನ ತ್ಯಾಜ್ಯ ನೀರು ಸಂಸ್ಕರಿಸಿ ಬಳಕೆಗೆ ನೀತಿ ಜಾರಿಗೆ ಮಾಡಲಾಗುತ್ತದೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಬೃಹತ್ ವಸತಿ ಸಮುಚ್ಚಯಗಳ ತ್ಯಾಜ್ಯ ನೀರನ್ನು ಸಂಸ್ಕರಿಸಿ ಪುನರ್ ಬಳಕೆಗಾಗಿ ಮಾರಾಟ ಮಾಡಲು ಅವಕಾಶ ಆಗುವಂತೆ ಮಾನದಂಡ ನಿಗದಿಪಡಿಸಲು ಸಿದ್ಧತೆ ನಡೆಸುತ್ತಿದ್ದು, ಈ ಬಗ್ಗೆ ಒಂದು ವಾರದ ಒಳಗಾಗಿ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.ವಿಧಾನಸೌಧದಲ್ಲಿ ಬುಧವಾರ ಕರ್ನಾಟಕ ಚೌಗುಭೂಮಿ ಪ್ರಾಧಿಕಾರದ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ತೀವ್ರ ನೀರಿನ ಅಭಾವ ಸೃಷ್ಟಿಯಾಗಿದೆ. ಜನಸಂಖ್ಯೆಗೆ ತಕ್ಕಂತೆ ನೀರು ಪೂರೈಕೆ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಮೂಲಗಳ ರಕ್ಷಣೆ ಮತ್ತು ನೀರಿನ ಮರುಬಳಕೆಗೆ ಆದ್ಯತೆ ನೀಡುವ ಅಗತ್ಯವಿದೆ. ಸೂಕ್ತ ರೀತಿಯಲ್ಲಿ ತ್ಯಾಜ್ಯ ನೀರು ಸಂಸ್ಕರಿಸಿ ಬಳಸಿದರೆ ನಿತ್ಯ 250 ರಿಂದ 300 ದಶಲಕ್ಷ ಲೀಟರ್ ನೀರು ಮರು ಬಳಕೆಗೆ ಲಭ್ಯವಾಗಲಿದೆ ಎಂದು ಹೇಳಿದರು.
ಈಗಾಗಲೇ ಬೆಂಗಳೂರು ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಸಂಸ್ಕರಣೆಯಾದ ನೀರನ್ನು ಉದ್ಯಾನ ಮತ್ತಿತರ ಬಳಕೆಗೆ ಕನಿಷ್ಠ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಆದರೆ ಇದು ತೀರಾ ಕಡಿಮೆಯಿದ್ದು, ವಸತಿ ಸಮುಚ್ಚಯಗಳಲ್ಲಿನ ತ್ಯಾಜ್ಯ ನೀರು ಸಂಸ್ಕರಿಸಿ ಬಳಕೆ ಮಾಡಲು ಆದ್ಯತೆ ನೀಡಬೇಕು. ವಸತಿ ಸಮುಚ್ಚಯಗಳಿಂದ ಸಂಸ್ಕರಿಸಿದ ನೀರು ಹೇಗೆ ಮಾರಾಟ ಮಾಡಬೇಕು ಎಂಬುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಮಾನದಂಡಗಳನ್ನು ನಿಗದಿ ಮಾಡಿ ಆದೇಶ ಹೊರಡಿಸುತ್ತೇವೆ ಎಂದು ಮಾಹಿತಿ ನೀಡಿದರು.ಕುಡಿಯಲು ಬಳಸುವಂತಿಲ್ಲಸಂಸ್ಕರಿಸಿದ ತ್ಯಾಜ್ಯ ನೀರನ್ನು ಯಾವುದೇ ಕಾರಣಕ್ಕೂ ಕುಡಿಯಲು, ಔಷಧ ಮತ್ತು ಆಹಾರ ತಯಾರಿಕೆಗೆ ಬಳಸದಂತೆ ನಿರ್ಬಂಧಿಸಲಾಗುವುದು. ಮಾರಾಟ ಮಾಡಲಾಗುವ ಮರುಬಳಕೆ ನೀರಿನ ಶುದ್ಧತೆಯ ಜವಾಬ್ದಾರಿ ಕಟ್ಟಡ ಸಮುಚ್ಚಯಗಳ ನಿವಾಸಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬೆಂಗಳೂರು ಜಲಮಂಡಳಿ ಸೇರಿದಂತೆ ಸಂಬಂಧಪಟ್ಟ ಸಂಸ್ಥೆಗಳ ಮೇಲೆ ಇರಲಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಬಹುಮಹಡಿ ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಜಲವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಆ ನೀರನ್ನು ಹತ್ತಿರದ ಕೆರೆಗಳಿಗೆ ಕೊಳವೆಯ ಮೂಲಕ ಹರಿಸಿದರೆ ಕೆರೆಗಳಲ್ಲಿ ನೀರೂ ಇರುತ್ತದೆ. ಜೊತೆಗೆ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ. ಈ ಬಗ್ಗೆ ಬಿಬಿಎಂಪಿ, ಬಿಡಿಎ, ನಗರಾಭಿವೃದ್ಧಿ ಇಲಾಖೆ, ಪರಿಸರ ಇಲಾಖೆಯ ಅಧಿಕಾರಿಗಳು ಮತ್ತು ಕಟ್ಟಡ ಸಮುಚ್ಚಯಗಳ ನಿವಾಸಿಗಳ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.