ಕಡೂರು ಪಟ್ಟಣದಲ್ಲಿ ಜೆಡಿಎಸ್ ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ರೈತರ ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿ ಕುರಿತು ಚರ್ಚಿಸುವ ಬದಲು ಶಾಸಕನನ್ನು ಟೀಕಿಸುವುದಕ್ಕೇ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ಎಸ್. ಆನಂದ್ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಕಡೂರು
ಕಡೂರು ಪಟ್ಟಣದಲ್ಲಿ ಜೆಡಿಎಸ್ ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ರೈತರ ಸಮಸ್ಯೆಗಳ ಪರಿಹಾರ ಹಾಗೂ ಅಭಿವೃದ್ಧಿ ಕುರಿತು ಚರ್ಚಿಸುವ ಬದಲು ಶಾಸಕನನ್ನು ಟೀಕಿಸುವುದಕ್ಕೇ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ಎಸ್. ಆನಂದ್ ಆರೋಪಿಸಿದರು.ಪಟ್ಟಣದ ಜನಸೇವಕರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಬೆಳೆಯುತ್ತಿರುವ ನಿಖಿಲ್ ಕುಮಾರಸ್ವಾಮಿ ಅವರು ಮೊದಲು ಕಡೂರು ಜೆಡಿಎಸ್‌ನಲ್ಲಿರುವ ಆಂತರಿಕ ಭಿನ್ನಮತವನ್ನು ಸರಿಪಡಿಸಿಕೊಳ್ಳಲಿ ಎಂದು ಹೇಳಿದರು.
ವೇದಿಕೆಯಲ್ಲಿ ತಮ್ಮನ್ನು ಟೀಕಿಸಿದರೆ ಅಥವಾ ಕುರುಬ ಸಮುದಾಯದವರನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಿದರೆ ತಾವು ದುರ್ಬಲರಾಗುತ್ತೇವೆ ಎಂದು ಭಾವಿಸಿದ್ದರೆ ಅದು ಅವರ ತಪ್ಪು ಕಲ್ಪನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗಳಿಗಾಗಿ ಕಳೆದ ಮೂರು ವರ್ಷಗಳಲ್ಲಿ ತಾವು ಕೈಗೊಂಡಿರುವ ಪ್ರಯತ್ನಗಳು ಜನರಿಗೆ ತಿಳಿದಿವೆ. ರೈತರು ಮತ್ತು ಜನರ ಬದುಕು ಸುಧಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಕಾರ್ಯನಿರ್ವಹಿಸುತ್ತಿದೆ ಎಂದರು.ಎಮ್ಮೆದೊಡ್ಡಿ ರೈತರ ಸಮಸ್ಯೆಗೆ ಯಾರು ಸ್ಪಂದಿಸಿದ್ದಾರೆ?
ಜೆಡಿಎಸ್ ಸಮಾವೇಶದಲ್ಲಿ ಎಮ್ಮೆದೊಡ್ಡಿ ಭಾಗದ ರೈತರ ಸಮಸ್ಯೆ ಪರಿಹಾರದಲ್ಲಿ ಶಾಸಕರ ಪಾತ್ರದ ಕುರಿತು ಟೀಕೆ ಮಾಡಲಾಗಿದೆ. ಆದರೆ, ನಿಖಿಲ್ ಕುಮಾರಸ್ವಾಮಿ ಅವರ ಅಜ್ಜ ಮತ್ತು ಸಹೋದರ 15 ವರ್ಷಗಳ ಕಾಲ ಸಂಸದರಾಗಿದ್ದಾಗ ಈ ಸಮಸ್ಯೆ ಪರಿಹಾರಕ್ಕೆ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು 10 ವರ್ಷಗಳಿಂದ ಪರಿಷತ್ ಸದಸ್ಯರಾಗಿದ್ದಾರೆ. ಅವರ ತಂದೆ ಹಾಗೂ ಸಹೋದರ ನಾಲ್ಕು ಅವಧಿಗೆ ಶಾಸಕರಾಗಿ ಎಮ್ಮೆದೊಡ್ಡಿ ಭಾಗವನ್ನು ಪ್ರತಿನಿಧಿಸಿದ್ದಾರೆ. ಆದರೂ ಅಲ್ಲಿನ ರೈತರ ಸಮಸ್ಯೆ ಪರಿಹಾರಕ್ಕೆ ಅವರ ಕೊಡುಗೆ ಏನು ಎಂದು ಆನಂದ್ ಪ್ರಶ್ನಿಸಿದರು.
ಬಹಿರಂಗ ಚರ್ಚೆಗೆ ಸಿದ್ಧ:ತಮ್ಮ ಮೂರು ವರ್ಷದ ಶಾಸಕತ್ವದ ಅವಧಿಯಲ್ಲಿ ಎಮ್ಮೆದೊಡ್ಡಿ ಭಾಗದ ರೈತರ ಸಮಸ್ಯೆಯನ್ನು ವಿಧಾನಮಂಡಲದಲ್ಲಿ ಪ್ರಬಲವಾಗಿ ಪ್ರಸ್ತಾಪಿಸಿದ್ದೇನೆ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇಗೆ ಕ್ರಮ ವಹಿಸುವುದು, ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವುದು ಹಾಗೂ ನಿವಾಸಿಗಳಿಗೆ ಭೂಮಿಯ ಹಕ್ಕು ಕೊಡಿಸುವ ಪ್ರಯತ್ನವನ್ನು ಮುಂದುವರಿಸಿದ್ದೇನೆ. ಈ ವಿಚಾರದಲ್ಲಿ ನಿಖಿಲ್ ಕುಮಾರಸ್ವಾಮಿ ಅಥವಾ ಭೋಜೇಗೌಡ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆಯುವ ಉದ್ದೇಶದಿಂದ ತಮ್ಮ ವಿರುದ್ಧ ಟೀಕೆ ಮಾಡುತ್ತಿದ್ದರೆ ಅದರಿಂದ ಪ್ರಯೋಜನವಿಲ್ಲ. ಸಮಾವೇಶದ ಆಯೋಜಕ ಚೇತನ್ ಕೆಂಪರಾಜು ಅವರ ಕುಟುಂಬದವರು ಕೂಡ ಅಧಿಕಾರದಲ್ಲಿದ್ದವರು. ಅವರ ಸಾಧನೆಗಳ ಬಗ್ಗೆಯೂ ಚರ್ಚೆಯಾಗಲಿ. ತಮ್ಮ ಅವಧಿಯಲ್ಲಿ ನೀರಾವರಿ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಮಂಜೂರಾದ ಅನುದಾನದ ಕುರಿತು ಮಾಜಿ ಶಾಸಕರು ಸೇರಿದಂತೆ ಯಾರೊಂದಿಗಾದರೂ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸೇವಾಪುರ ರಾಜಾನಾಯ್ಕ, ಮಂಜು ಮಚ್ಚೇರಿ, ಮಲ್ಲೇಶ್ವರ ವಸಂತ್, ಹಿರೇಗರ್ಜೆ ರವಿ, ಕಡೂರಹಳ್ಳಿ ನವೀನ್, ಶಿವೇಗೌಡ ಮತ್ತಿತರರು ಇದ್ದರು.
ಕೇಂದ್ರದಿಂದ ಅನುದಾನಕ್ಕೆ ಒತ್ತಾಯಿಸಲಿ: ನಿಖಿಲ್ ಅವರ ತಂದೆ ಎಚ್.ಡಿ. ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಸಂಕಷ್ಟದಲ್ಲಿರುವ ಗ್ರಾಮ ಪಂಚಾಯಿತಿಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ 2025-26ನೇ ಸಾಲಿನ 15ನೇ ಹಣಕಾಸು ಆಯೋಗದಡಿ ಎಷ್ಟು ಅನುದಾನ ಕೊಡಿಸಿದ್ದಾರೆ? ರಾಜ್ಯಕ್ಕೆ ಬರಬೇಕಿರುವ ತೆರಿಗೆ ಪಾಲಿನ ಹಣದ ಕುರಿತು ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಪ್ರಶ್ನಿಸಿದರು.ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡಿದ ಬಳಿಕವೂ ಅಗತ್ಯ ಅನುದಾನ ಬಿಡುಗಡೆಯಾಗಿಲ್ಲ. ಯೋಜನೆಯಡಿ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹಾಗೂ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ಕೇಂದ್ರದ ಅನುದಾನ ಪ್ರಮುಖವಾಗಿದೆ. ರೈತರ ಬಗ್ಗೆ ಕಾಳಜಿ ಇದ್ದರೆ ಈ ವಿಚಾರದಲ್ಲಿ ತಮ್ಮ ತಂದೆಯ ಮೂಲಕ ನಿಖಿಲ್ ಕುಮಾರಸ್ವಾಮಿ ಕೇಂದ್ರದ ಗಮನ ಸೆಳೆಯಲಿ ಎಂದು ಆಗ್ರಹಿಸಿದರು.
