ಸಾರಾಂಶ
ಕನ್ನಡ ಪ್ರಭವಾರ್ತೆ ಮಾಲೂರು
ನನ್ನ ಅಧಿಕಾರದ ಅವಧಿಯಲ್ಲಿ ಮಾಲೂರು ಪುರಸಭೆ ಅಭಿವೃದ್ಧಿಗಾಗಿ 227 ಕೋಟಿ ರು.ಗಳ ಅನುದಾನ ತಂದಿದ್ದು,ಒಂದು ವರ್ಷದೊಳಗೆ ಎಲ್ಲ ಕಾಮಗಾರಿ ಪೂರ್ಣಗೊಂಡು ಟೀಕೆಕಾರರ ಬಾಯಿ ಮುಚ್ಚಲಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ಇಲ್ಲಿನ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೆ ಏರಲು ಕಾರಣರಾದ ಶಾಸಕ ಕೆ.ವೈ.ನಂಜೇಗೌಡ ಅವರನ್ನು ಪುರಸಭೆ ವತಿಯಿಂದ ನೀಡಲಾದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ, ವಿರೋಧ ಪಕ್ಷದವರ ಟೀಕೆ ಆರೋಗ್ಯಕರವಾಗಿರಬೇಕು.ಅದು ಎಲ್ಲೆ ಮೀರಿ ಮಾತನಾಡಿದಾಗ ನಾನು ಅವರ ರೀತಿಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದರು.ರಾಜಕಾರಣದಲ್ಲಿ ಇದುವರೆಗೂ ಸೋಲೆ ಕಾಣದ ನನಗೆ ಜನತೆಯ ನಂಬಿಕೆ, ವಿಶ್ವಾಸವೇ ನನ್ನ ಧ್ಯರ್ಯವಾಗಿದ್ದು, ವಿರೋಧ ಪಕ್ಷದವರ ಹೊಟ್ಟೆಉರಿಯ ಟೀಕೆಗಳಿಗೆ ಉತ್ತರ ನೀಡುವುದಿಲ್ಲ. ನಮ್ಮದೆ ಸರ್ಕಾರ ಇರುವುದರಿಂದ ಇನ್ನೂ ಮೂರು ವರ್ಷವು ಸಾಕಷ್ಟು ಅನುದಾನ ತಂದು ಮಾಲೂರನ್ನು ಮಾದರಿ ಮಾಡುವುದಾಗಿ ಹೇಳಿದರು.
ಅನುದಾನ ಹರಿದು ಬರಲಿದೆಪಟ್ಟಣದ ಜನಸಂಖ್ಯೆ ಲಕ್ಷ ದಾಟಿ ದಶಕಗಳೇ ಕಳೆದಿದ್ದರೂ ಇದನ್ನು ನಗರ ಸಭೆ ಮಾಡಲು ಹಿಂದಿನ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ಪಟ್ಟಣ ನಗರ ಸಭೆಯ ಸೌಲಭ್ಯ ಪಡೆಯಲು ವಿಫಲವಾಗಿತ್ತು. ಪುರಸಭೆ ಯು ನಗರಸಭೆಯಾಗಿ ಮೇಲ್ದರ್ಜೆ ಹೊಂದಿದ್ದ ನಂತರ ಹಾಲಿ ಇರುವ 97 ಸಿಬ್ಬಂದಿ ಅಧಿಕಾರಿಗಳ ಸಂಖ್ಯೆ 236 ಕ್ಕೆ ಹೆಚ್ಚಲಿದೆ. 142 ಹುದ್ದೆಗಳು ಹೆಚ್ಚುವರಿಯಾಗಿ ಸೃಷ್ಠಿಯಾಗಲಿದೆ. ನಗರಸಭೆಯಾದ ನಂತರ ಕೇಂದ್ರ ಹಾಗೂ ರಾಜ್ಯ. ಸರ್ಕಾರದ ಅನುದಾನ ಹೆಚ್ಚಾಗಿ ಬರಲಿದ್ದು ,ನಗರ ಸಭೆ ಸದಸ್ಯರ ಅಭಿವೃದ್ಧಿ ದೃಷ್ಠಿಯಿಂದ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು. ಪಟ್ಟಣದ ಅಭಿವೃದ್ಧಿಗಾಗಿ ತಂದಿರುವ 227 ಕೋಟಿ ರು.ಗಳ ಜತೆಯಲ್ಲಿ ಕೈಗಾರಿಕಾ ಕಾರ್ ಡಾರ್ ಯೋಜನೆಯಡಿ ಬಿಡುಗಡೆಯಾಗಿರುವ 3200 ಕೋಟಿ ಯಲ್ಲಿ ಶೇ.60 ರಷ್ಟು ಕಾಮಗಾರಿ ತಾಲೂಕಿನಲ್ಲಿ ನಡೆಯಲಿದ್ದು, ಅದರಲ್ಲಿ ಪಟ್ಟಣದಲ್ಲಿ ಮೇಲ್ಸೇತುವೆ ,ನಾಲ್ಕು ಪಥದ ರಸ್ತೆ ಹಾಗೂ ಮಾಲೂರು-ಹೊಸಕೋಟೆವರೆಗೆ ನಾಲ್ಕು ಪಥದ ಸಿಮೆಂಟ್ ರಸ್ತೆ ನಿರ್ಮಾಣ ವಾಗಲಿದೆ ಎಂದರು.
ದೊಡ್ಡಕೆರೆ ಅಂಗಳ ನವೀಕರಣಪಟ್ಟಣ ದೊಡ್ಡಕೆರೆ ಅಂಗಳವನ್ನು ಹೆಚ್ಚುವರಿಯಾಗಿ 15 ಕೋಟಿ ಸೇರಿದಂತೆ 50 ಕೋಟಿ ರು.ಗಳಲ್ಲಿ ನವೀಕರಣಗೊಳ್ಳಲಿದ್ದು, ರಾಜ್ಯದಲ್ಲೇ ಮಾದರಿಯಾಗಲಿದೆ . ಕಳೆದ ನಾಲ್ಕುವರೆ ವರ್ಷದಿಂದ ಶಾಸಕನಾಗಿ ಪಟ್ಟಣದ ಅಭಿವೃದ್ಧಿಗಾಗಿ ನಾನು ತೆಗೆದುಕೊಂಡು ತೀರ್ಮಾನಕ್ಕೆ ಪಕ್ಷಾತೀತವಾಗಿ 27 ಸದಸ್ಯರ ಸಹಕಾರ ನೀಡಿರುವುದನ್ನು ಕೃತಜ್ಞತೆಯಿಂದ ಸ್ಮರಿಸುವುದಾಗಿ ತಿಳಿಸಿದರು.
ಶಾಸಕರು ಮುಂದೆ ಸಹ ಇದೇರೀತಿ ಸಹಕಾರ ನೀಡಿದರೆ ಗ್ರೇಡ್ 2 ಆಗಿರುವ ಮಾಲೂರು ನಗರ ಸಭೆಯನ್ನು ಗ್ರೇಡ್ ಒನ್ ಮಾಡುವುದಾಗಿ ತಿಳಿಸಿದರು.ಇಂದಿನ ಪುರಸಭೆ ಸದಸ್ಯರಿಗೆ ವಿಶೇಷ ಅನುಭವ ಸಿಗಲಿದ್ದು,ಪುರಸಭೆ ಸದಸ್ಯರಾದ ನೀವುಗಳು ರಾಜ್ಯ ಸರ್ಕಾರ ಗೆಜೆಟ್ ನೋಟಿಫೀಕೆಷನ್ ಆದ ನಂತರ ನಗರ ಸಭೆಯಾಗಲಿದ್ದೀರಿ ಎಂದರು.ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್,ಪ್ರಾಧಿಕಾರದ ಅಧ್ಯಕ್ಷ ನಯೀಂ ವುಲ್ಲಾ ಖಾನ್ ,ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ,ಉಪಾಧ್ಯಕ್ಷೆ ವಿಜಯಲಕ್ಷ್ಮಿ ಕೃಷ್ಣಪ್ಪ ,ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ,ಮಾಜಿ ಅಧ್ಯಕ್ಷೆ ಕೋಮಲ,ವೇಮನ,ಪರಮೇಶ್ ಗೌಡ ,ಶ್ರೀನಿವಾಸ್, ವೆಂಕಟೇಶ್, ಮುರಳಿ, ಇಂತಿಯಾಜ್, ಮಾರಿಕಾಂಬ ದೇವಾಲಯ ಸಮಿತಿ ಅಧ್ಯಕ್ಷ ಪಿ.ವೆಂಕಟೇಶ್ , ರವಿ, ಶೈಲಜಾಕೃಷ್ಣ ಮಾತನಾಡಿದರು.ಇದೇ ಸಂದರ್ಭದಲ್ಲಿ ಶಾಸಕ ಕೆ.ವೈ.ನಂಜೇಗೌಡ ಅವರನ್ನು ಅತ್ಮೀಯವಾಗಿ ಸನ್ಮಾನಿಸಲಾಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಲಕ್ಷ್ಮಿನಾರಾಯಣ್ ,ಲಿಂಗಾಪುರ ಕಿಟ್ಟಿ,ಸತೀಶ್ ಆಂಜಿನಪ್ಪ,ಎಂ.ಪಿ.ವಿ.ಮಂಜು,ಬುಲೆಟ್ ವೆಂಕಟೇಶ್ ,ಶಬ್ಬೀರ್ ಇದ್ದರು.