ಆಡಳಿತ- ಪ್ರತಿಪಕ್ಷ ಸದಸ್ಯರೆಲ್ಲರಿಂದಲೂ ಬಜೆಟ್‌ಗೆ ಟೀಕೆ

| Published : Feb 22 2024, 01:49 AM IST

ಆಡಳಿತ- ಪ್ರತಿಪಕ್ಷ ಸದಸ್ಯರೆಲ್ಲರಿಂದಲೂ ಬಜೆಟ್‌ಗೆ ಟೀಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಲಿಕೆಯಲ್ಲಿ ಮಂಡಿಸಿದ ಬಜೆಟ್‌ನ ಮೇಲೆ ನಡೆದ ಚರ್ಚೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರೆಲ್ಲರೂ ಬಜೆಟ್ ಅನ್ನು ಟೀಕಿಸಿದರು.

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಬಜೆಟ್‌ ಅನ್ನು ಟೀಕಿಸಿರುವ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು, ಜನರಿಗೆ ಸುಳ್ಳು ಭರವಸೆ, ಬಜೆಟ್‌ ಮೊತ್ತ ಹೆಚ್ಚಿಸುವುದು ಎಷ್ಟು ಸರಿ ಎಂದು ಪರೋಕ್ಷವಾಗಿ ಮೇಯರ್‌, ಉಪಮೇಯರ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಾಲಿಕೆಯಲ್ಲಿ ಮಂಡಿಸಿದ ಬಜೆಟ್‌ನ ಮೇಲೆ ನಡೆದ ಚರ್ಚೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರೆಲ್ಲರೂ ಟೀಕಿಸಿದರು.

ಆಡಳಿತ ಪಕ್ಷದ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಆಗದ ಕೆಲಸಗಳನ್ನು ಬಜೆಟ್‌ ದಾಖಲೆಯಲ್ಲಿ ತೋರಿಸಿ ದೊಡ್ಡ ಬಜೆಟ್‌ ಎಂದು ಬೀಗುವುದರಲ್ಲಿ ಅರ್ಥವಿಲ್ಲ ಎಂದು ಟೀಕಿಸಿದರು.

ಆದಾಯ ಸಂಗ್ರಹದಷ್ಟೇ ಖರ್ಚುಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಪಾಲಿಕೆ ಹೊಸ ಸಭಾಭವನ ನಿರ್ಮಾಣಕ್ಕೆ ಸಂಬಂಧಿಸಿ ಟೆಂಡರ್‌ ಪ್ರಕ್ರಿಯೆ ಮುಗಿದು ತಾಂತ್ರಿಕ ಅನುಮೋದನೆಗೆ 3 ತಿಂಗಳಿಂದ ಡಿಸಿ ಕಚೇರಿ ಕಡತ ಕೊಳೆಯುತ್ತಿದೆ. ಈ ವರೆಗೆ ಏನಾಯಿತು ಎಂದು ಕೇಳುವವರಿಲ್ಲ. ಈ ಹಂತದಲ್ಲಿ ಈ ಬಜೆಟ್‌ನಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಕುಡಿಯುವ ನೀರಿನ ₹142 ಕೋಟಿ ಮೊತ್ತ, ಪಾಲಿಕೆಯ ನಿವೇಶನಗಳು ಹಾಗೂ ಆಸ್ತಿಗಳ ಲೀಸ್‌ ಭೂಮಿ ಮಾರಾಟದಿಂದ ₹128 ಕೋಟಿ, ಜಿಐಎಸ್‌ ಸರ್ವೇ ಮಾಡದೇ ₹250 ಕೋಟಿ ಆಸ್ತಿ ತೆರಿಗೆ ಸಂಗ್ರಹ, ಸರಿಯಾಗಿ ಬಿಲ್ಡಿಂಗ್‌ ಪರ್ಮಿಷನ್‌ ಕೊಡದೇ ₹50 ಕೋಟಿ, ಪಾಲಿಕೆ ವ್ಯಾಪ್ತಿ 200 ಚ.ಕಿಮೀ ದಿಂದ 400 ಚ.ಕಿಮೀ ಗೆ ಹೆಚ್ಚಿದ್ದರೂ ಅಧಿಕೃತಗೊಳಿಸದೇ ಆದಾಯ ಸಂಗ್ರಹ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಹಿಂದಿನ ಅನುಭವಗಳಿಂದ ಪಾಠ ಕಲಿತು ಬಜೆಟ್‌ ರೂಪಿಸುವುದು ಒಳ್ಳೆಯದು. ನೂನ್ಯತೆಗಳನ್ನು ಸರಿಪಡಿಸಿ ಬಜೆಟ್‌ಗೆ ಅನುಮೋದನೆ ನೀಡಬೇಕೆಂದು ಕಿವಿಮಾತು ಹೇಳಿದರು.

ಧಾರವಾಡಕ್ಕೆ ಅನ್ಯಾಯ

ಬಜೆಟ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಮೇಯರ್‌ ಈರೇಶ ಅಂಚಟಗೇರಿ, ಬಜೆಟ್‌ನಲ್ಲಿ ಧಾರವಾಡವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕುಡಿಯುವ ನೀರಿನ ಬಗ್ಗೆ ಪ್ರಸ್ತಾಪ ಇಲ್ಲ. ಎಸ್ಸಿಎಸ್ಟಿ ಫಂಡ್‌ ಸರಿಯಾಗಿ ಹಂಚಿಕೆಯಾಗಿಲ್ಲ ಎಂದು ತಿಳಿಸಿದರು.

ಬೋಗಸ್‌ ಬಜೆಟ್‌

ಕಳೆದ ವರ್ಷದ ಬಜೆಟ್‌ನಲ್ಲಿ ತೋರಿಸಿದ ಯಾವೊಂದು ಕೆಲಸಗಳನ್ನು ಈಡೇರಿಸದ ಪಾಲಿಕೆ ಆಡಳಿತ, ಈ ವರ್ಷವೂ ಅಂಕಿ ಸಂಖ್ಯೆಗಳನ್ನು ಬದಲಾವಣೆಯೊಂದಿಗೆ ಅದೇ ಅಂಶ ಮುಂದಿಟ್ಟುಕೊಂಡು ಮಂಡಿಸಿರುವ ಬಜೆಟ್‌ ಬೋಗಸ್‌ ಬಜೆಟ್‌ ಎಂದು ಪ್ರತಿಪಕ್ಷ ಕಾಂಗ್ರೆಸ್‌ ಪ್ರತಿಕ್ರಿಯಿಸಿದೆ.

ವಿರೋಧ ಪಕ್ಷದ ಸದಸ್ಯ ಇಮ್ರಾನ್‌ ಯಲಿಗಾರ, ಕಳೆದ ವರ್ಷ ಬಜೆಟ್‌ನಲ್ಲಿ ಎಷ್ಟು ಹಣ ಖರ್ಚು ಮಾಡಲಾಗಿದೆ, ಯಾವೆಲ್ಲ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಎಷ್ಟು ಉಳಿತಾಯವಾಗಿದೆ, ಪಾಲಿಕೆ ಆರ್ಥಿಕ ಸ್ಥಿತಿಗತಿ ಏನೆಂಬುದನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಹೊಲಿಗೆ ಯಂತ್ರ ಕೊಡುವುದಾಗಿ ಹೇಳಲಾಗಿತ್ತು. ಇವತ್ತಿನವರೆಗೂ ಒಂದು ಕೊಟ್ಟಿಲ್ಲ. ಇದೇ ರೀತಿ ಹಲವಾರು ಸಂಗತಿಗಳಿವೆ. ಬಜೆಟ್‌ ಕೇವಲ ಪುಸ್ತಕಕ್ಕೆ ಸೀಮಿತವಾಗುವಂತಿವೆ ಎಂದು ಜರಿದರು.

₹70 ಲಕ್ಷ ಇದ್ದ ವಾರ್ಡ್‌ ಫಂಡ್‌ನ್ನು ₹90 ಲಕ್ಷಕ್ಕೆ ಹೆಚ್ಚಿಸಿದ್ದನ್ನು ಪಕ್ಷ ಭೇದ ಮರೆತು ಸ್ವಾಗತಿಸಿದ ಸದಸ್ಯರು ₹1 ಕೋಟಿ ಕೊಡಬೇಕೆಂದು ಬೇಡಿಕೆ ಮಂಡಿಸಿದರು.

ಅವಕಾಶ ಇದೆಯೇ..?

ಮಠ, ಮಂದಿರಗಳಿಗೆ ಪಾಲಿಕೆ ಅನುದಾನ ಕೊಡಲು ಅವಕಾಶ ಇದೆಯೇ ಎಂಬುದನ್ನು ಪರಿಶೀಲಸುವಂತೆ ಸದಸ್ಯರು ಸಲಹೆ ಮಾಡಿದರು. ಅವಕಾಶ ಇದ್ದರೆ ಮಠ, ಮಂದಿರಗಳಂತೆ, ಮಸೀದಿ, ದರ್ಗಾ, ಚರ್ಚ್‌, ಗುರುದ್ವಾರ ಹೀಗೆ ಎಲ್ಲ ಧರ್ಮದವರಿಗೂ ಅನುದಾನ ಕೊಡಬೇಕೆಂದು ತಿಳಿಸಿದರು. ಸಿದ್ದಾರೂಢಮಠ, ಉಣಕಲ್ಲ ಸಿದ್ದಪ್ಪಜ್ಜನ ಮಠ, ಶಿವಾನಂದ ಮಠಗಳ ಅಭಿವೃದ್ದಿಗೆ 1 ಕೋಟಿ ಬಜೆಟ್‌ನಲ್ಲಿ ತೆಗೆದಿರಿಸಲಾಗಿದೆ.

ಹೇಳುವೊಂದು ಮಾಡುವುದು ಇನ್ನೊಂದು!

ಎಐಎಂಐಎಂನ ಸದಸ್ಯ ನಜೀರ ಅಹ್ಮದ ಹೊನ್ಯಾಳ, ಬಜೆಟ್‌ನಲ್ಲಿ ಬಸವಣ್ಣವರ, ಇವನಾರವ ಇವನಾರವ ಎಂಬ ವಚನವನ್ನು ಪ್ರಸ್ತಾಪಿಸಲಾಗಿದೆ. ಆದರೆ, ಕೇವಲ ಮಠಗಳಿಗೆ ಮಾತ್ರ ಅನುದಾನ ಕೊಡಲಾಗಿದೆ. ಮಸೀದಿ, ದರ್ಗಾ, ಗುರುದ್ವಾರ ಸೇರಿ ಅನ್ಯಧರ್ಮದ ಮಂದಿರಗಳಿಗೆ ನಯಾ ಪೈಸೆ ಕೊಟ್ಟಿಲ್ಲ. ಇದು ಆಡಳಿತ ಪಕ್ಷದವರ ಮನಸ್ಥಿತಿ. ಕೊಡುವುದಿದ್ದರೆ ಎಲ್ಲರಿಗೂ ಕೊಡಿ, ಸುಮ್ಮನೆ ಹೇಳುವುದೊಂದು ಮಾಡುವುದು ಒಂದು ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.

ಫೆನ್ಸಿಂಗ್‌ ಮಾಡಿರಿ

ಉದ್ಯಾನಗಳ ಅಭಿವೃದ್ಧಿ, ನಿರ್ವಹಣೆಗೆ ₹5 ಕೋಟಿ ಮೀಸಲಿರಿಸಿದ್ದು ಸ್ವಾಗತಾರ್ಹ. ಆದರೆ, ಪಾಲಿಕೆ ವ್ಯಾಪ್ತಿಯ 524 ಉದ್ಯಾನಗಳಲ್ಲಿ ಶೇ 25ರಷ್ಟು ಉದ್ಯಾನಗಳನ್ನು ಅತಿಕ್ರಮಿಸಿ ಮನೆ, ವಾಣಿಜ್ಯ ಮಳಿಗೆ ನಿರ್ಮಿಸಲಾಗುತ್ತಿದೆ. ಹಾಗಾಗಿ ಎಲ್ಲಾ ಉದ್ಯಾನಗಳಿಗೆ ಮೊದಲು ಚಕಬಂದಿ (ಫೆನ್ಸಿಂಗ್‌) ಮಾಡಬೇಕು. ಇಲ್ಲದಿದ್ದರೆ ಪಾಲಿಕೆ ಆಸ್ತಿ ಪರರ ಪಾಲಾಗಲಿದೆ ಎಂದು ಕಾಂಗ್ರೆಸ್‌ನ ಸೆಂಥಿಲಕುಮಾರ ಸಲಹೆ ಮಾಡಿದರು.ಯಾವ ಮೇಯರ್‌ ಹೀಗೆ ಮಾಡಿರಲಿಲ್ಲ..!

ಪಾಲಿಕೆ ಬಜೆಟ್‌ಗೆ ಸಂಬಂಧಿಸಿ 4-5 ದಿನಗಳ ಮುಂಚೆಯೇ ಪಾಲಿಕೆ ಸದಸ್ಯರಿಗೆ ಬಜೆಟ್‌ ಪುಸ್ತಕ ಕೊಡಲಾಗುತ್ತದೆ. ಅವುಗಳನ್ನು ಓದಿ ತಿಳಿದುಕೊಂಡು ಅದರ ಮೇಲೆ ಚರ್ಚೆ ಮಾಡಲು ಅನುಕೂಲವಾಗುತ್ತದೆ. ಆದರೆ, ಬಜೆಟ್‌ ಮಂಡನೆ ದಿನವೇ ಬಜೆಟ್‌ ಕಾಪಿ ಕೊಟ್ಟರೆ ಹೇಗೆ. ಇಲ್ಲೇನು ಬಜೆಟ್‌ ಭಾಷಣ ಕೇಳೋಕೆ ಬರಬೇಕಾ..? ಈ ರೀತಿ ಯಾವ ಮೇಯರ್‌ ಕೂಡ ಮಾಡಿಲ್ಲ ಎಂದು ಪಾಲಿಕೆ ಆಡಳಿತ ಪಕ್ಷದ ಸದಸ್ಯರೇ ಮೇಯರ್‌ ವೀಣಾ ಬರದ್ವಾಡ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಪಕ್ಷ ಸದಸ್ಯರೂ ದನಿಗೂಡಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಎದ್ದು ನಿಂತ ವೀರಣ್ಣ ಸವಡಿ, 16-17 ಬಜೆಟ್‌ಗಳಲ್ಲಿ ಭಾಗವಹಿಸಿದ್ದೇನೆ. ಒಂದು ವಾರ ಇಲ್ಲವೇ ನಾಲ್ಕಾರು ದಿನ ಮುನ್ನವೇ ಬಜೆಟ್‌ ಕಾಪಿ ಕಳಿಸಲಾಗುತ್ತಿತ್ತು. ಅದನ್ನು ತಿಳದುಕೊಂಡು ಚರ್ಚೆ ಮಾಡಲಾಗುತ್ತಿತ್ತು. ಆದರೆ, ಈ ಸಲ ನೀವು ಬಜೆಟ್‌ ಮಂಡನೆ ದಿನವೇ ಪುಸ್ತಕ ಕೊಡುವ ಮೂಲಕ ಕೆಟ್ಟಹೊಸ ಸಂಪ್ರದಾಯ ಹುಟ್ಟುಹಾಕಿದ್ದೀರಿ ಎಂದರು. ಇದಕ್ಕೆ ಮಾಜಿ ಮೇಯರ್‌ ಆದ ಈರೇಶ ಅಂಚಟಗೇರಿ, ರಾಧಾಬಾಯಿ ಸಫಾರೆ ಸೇರಿದಂತೆ ಹಲವು ಸದಸ್ಯರು ಧ್ವನಿಗೂಡಿಸಿದರು.

ಸಿಎಂ ಶಾಸಕರ ಹೆಸರೇ ಇಲ್ಲ

ಬಜೆಟ್‌ ಕೊನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಹೆಸರು ಮಾತ್ರ ಇತ್ತು. ಬಳಿಕ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಮಹೇಶ ಟೆಂಗಿನಕಾಯಿ ಹೆಸರು ಸೇರಿಸಲಾಯಿತು. ಗುಂಡೂರ ಓದುವಾಗ ಜೋಶಿ, ಬೆಲ್ಲದ, ಟೆಂಗಿನಕಾಯಿ ಹೆಸರು ಪ್ರಸ್ತಾಪಿಸಿದರು. ಆಗ ಪ್ರತಿಪಕ್ಷದ ಸದಸ್ಯರು, ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಕೂಡ ಏಕಿಲ್ಲ ಎಂದು ಪ್ರಸ್ತಾಪಿಸಿದರು. ಜತೆಗೆ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ಆಯ್ಕೆಯಾದ ಸದಸ್ಯರ ಹೆಸರು ಕೂಡ ಪ್ರಸ್ತಾಪಿಸಿಲ್ಲವೇಕೆ ಎಂದು ಪ್ರಶ್ನಿಸಿದರು. ಜತೆಗೆ ಹಣಕಾಸು ಸ್ಥಾಯಿ ಸಮಿತಿಯಲ್ಲಿ ಇರುವ ತಮ್ಮ ಪಕ್ಷದ ಸದಸ್ಯ ನವಲೂರ ಅವರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಕಡೆಯಿಂದ ನೀವು ಹಾಜರಾಗಿದ್ದೀರಿ ಅಲ್ವಾ ನೀವೇಕೆ ಗಮನಿಸಲಿಲ್ಲ ಎಂದು ಕವಿತಾ ಕಬ್ಬೇರ್‌, ದೊರಾಜ್‌ ಮಣಿಕುಂಟ್ಲಾ, ಸುವರ್ಣ ಕಲ್ಲಕುಂಟ್ಲಾ ಸೇರಿದಂತೆ ಹಲವರು ತಮ್ಮ ಪಕ್ಷದ ಸದಸ್ಯನನ್ನು ತರಾಟೆಗೆ ತೆಗೆದುಕೊಂಡರು.