ಸಾರಾಂಶ
- ದೊಣೆಹಳ್ಳಿ-ಉದ್ದಗಟ್ಟ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ದೇವೇಂದ್ರಪ್ಪ
- - - ಕನ್ನಡಪ್ರಭ ವಾರ್ತೆ ಜಗಳೂರುಗ್ಯಾರಂಟಿ ಯೋಜನೆಗಳ ಮಧ್ಯೆಯೂ ತಾಲೂಕಿಗೆ ನೂರಾರು ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೂ, ವಿರೋಧ ಪಕ್ಷದ ಮುಖಂಡರು ಟೀಕೆಗಳನ್ನು ಮಾಡುತ್ತಿದ್ದಾರೆ. ಇಂಥ ಟೀಕೆಗಳನ್ನು ನಾನು ದೃಷ್ಟಿಬೊಟ್ಟಿನಂತೆ ಸ್ವೀಕರಿಸುತ್ತೇನೆ. ಪಾರದರ್ಶಕ ಟೀಕೆಗಳನ್ನು ಮನಸಾರೆ ಒಪ್ಪಿಕೊಳ್ಳುತ್ತೇನೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ತಾಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ಗುರುವಾರ ಪಿಡ್ಲ್ಯೂಡಿ ಮತ್ತು ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ದೊಣೆಹಳ್ಳಿಯಿಂದ ಉದ್ದಗಟ್ಟ ಗ್ರಾಮದವರೆಗೆ ₹6 ಕೋಟಿ ವೆಚ್ಚದ 6.650 ಕಿಮೀ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
2025ನೇ ಸಾಲಿನ ಅ.2ರ ಮಹಾತ್ಮ ಗಾಂಧಿ ಜಯಂತ್ಯುತ್ಸವಕ್ಕೆ ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲೂಕಿಗೆ ನೀರು ಹರಿಯುವ ಭರವಸೆಯನ್ನು ಎಂಜಿನಿಯರ್‌ಗಳು ನೀಡಿದ್ದಾರೆ. ಈಗಾಗಲೇ ಕಾಮಗಾರಿ ಭರದಿಂದ ಸಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಥಳ ಪರಿಶೀಲನೆಗೆ ಹೊರಟ್ಟಿದ್ದೇವೆ. ಚಿತ್ರದುರ್ಗ ಸಮೀಪದಲ್ಲಿ ಕಾಮಗಾರಿ ಶರವೇಗದಲ್ಲಿ ಸಾಗುತ್ತಿದೆ. ಬರದ ನಾಡಾದ ಜಗಳೂರು ತಾಲೂಕಿನಲ್ಲಿ ರೂಪಿತವಾದ ಯೋಜನೆಯಂತೆ ನೀರು ಹರಿಯಲಿದೆ ಎಂದು ತಿಳಿಸಿದರು.ಸಾಮಾಜಿಕ ಚಿಂತಕ ಹಾಗೂ ಹಿರಿಯ ಪತ್ರಕರ್ತ ದೊಣೆಹಳ್ಳಿ ಗುರುಮೂರ್ತಿ ಮಾತನಾಡಿ, ದೊಣೆಹಳ್ಳಿ ಗ್ರಾಮವು ಹೈದರಾಬಾದ್- ಕರ್ನಾಟಕ ಪ್ರದೇಶಗಳ ಸಂಪರ್ಕಿಸುವ ಕೇಂದ್ರ ಭಾಗವಾಗಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ಇದರಿಂದ ದಿನೇದಿನೇ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ, ಇಲ್ಲಿ ಔಟ್ ಪೊಲೀಸ್ ಠಾಣೆ ಅಗತ್ಯವಿದೆ. ಜೊತೆಗೆ ಹೈಮಾಸ್ಟ್ ದೀಪಗಳ ಅಳವಡಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರ ದೀಪಕ್ ಪಟೇಲ್ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಪಿಡ್ಲ್ಯೂಡಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್, ಎಂಜಿನಿಯರ್ ಪುರುಷೋತ್ತಮ ರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಸೌರಭ್ , ಗ್ರಾಪಂ ಅಧ್ಯಕ್ಷರಾದ ಶ್ವೇತಾ ತಿಪ್ಪೇಸ್ವಾಮಿ, ತಾಲೂಕು ಸರ್ಕಾರಿ ನೌಕರರ ಸಂಘ ಅಧ್ಯಕ್ಷ ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಪಿಡಿಒ ಕೊಟ್ರೇಶ್ ಇತರರಿದ್ದರು.- - - -28ಜೆ.ಎಲ್.ಆರ್.1:
ಜಗಳೂರು ತಾಲೂಕಿನ ದೊಣೆಹಳ್ಳಿಯಲ್ಲಿ ₹6 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಿ.ದೇವೇಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು.