ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಆರ್.ಸಿ. ಗ್ರಾಮದ ಅಗಸಿಯ ಮುಂದೆ ಮೊಸಳೆ ಮರಿಯೊಂದಿಗೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಆಲಮಟ್ಟಿ:

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಆರ್.ಸಿ. ಗ್ರಾಮದ ಅಗಸಿಯ ಮುಂದೆ ಮೊಸಳೆ ಮರಿಯೊಂದಿಗೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಬೇನಾಳ-ಅಬ್ಬಿಹಾಳ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿ ತೆಗೆದಿದ್ದ ಮಣ್ಣಿನ ಕ್ವಾರಿಗಳಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರು ಸಂಗ್ರಹವಾಗುತ್ತದೆ. ಬೇಸಿಗೆಯಲ್ಲಿ ಹಿನ್ನೀರು ಇಳಿದರೂ ಕ್ವಾರಿಗಳಲ್ಲಿ ನೀರು ಉಳಿಯುವುದರಿಂದ ಮೊಸಳೆಗಳಿಗೆ ಇದು ಸೂಕ್ತ ವಾಸಸ್ಥಾನವಾಗಿದೆ. ಇಲ್ಲಿಯೇ ಮೊಸಳೆಗಳು ಮರಿಮಾಡಿದ್ದು, ಇದೀಗ ಗ್ರಾಮದತ್ತ ನುಗ್ಗುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈಗಾಗಲೇ ಕುರಿ, ಮೇಕೆ, ಜಾನುವಾರುಗಳು ಮೊಸಳೆ ದಾಳಿಗೆ ಬಲಿಯಾಗಿವೆ. ಕೆಲ ದಿನಗಳ ಹಿಂದೆ ದುರ್ಗಾದೇವಿಯ ಪಟ್ಟದ ಕೋಣದ ಮೇಲೆ ದಾಳಿ ನಡೆಸಿ ಬಾಲವನ್ನು ತಿಂದುಹಾಕಿದ ಘಟನೆಯೂ ನಡೆದಿದೆ. ಗ್ರಾಮದ ತ್ಯಾಜ್ಯ ನೀರು ಹರಿಯುವ ಅಗಸಿಯ ಮುಂದಿನ ಕೊರಕಲು ಗಿಡಗಂಟಿಗಳಿಂದ ಆವೃತವಾಗಿದ್ದು, ಮೊಸಳೆಗಳು ಅಲ್ಲಿ ವಾಸವಾಗಿವೆ. ಈ ಭಾಗದಲ್ಲಿ ಚಿಕ್ಕ ಮಕ್ಕಳು ಆಟವಾಡುವುದರಿಂದ ಅನಾಹುತದ ಭೀತಿ ಎದುರಾಗಿದೆ.

ಕೂಡಲೇ ಅರಣ್ಯ ಇಲಾಖೆ ಮೊಸಳೆಗಳನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಎಂದು ಮುಖಂಡರಾದ ಬಿ.ಎಚ್. ಗಣಿ, ಮಾಜಿ ಗ್ರಾಪಂ ಅಧ್ಯಕ್ಷ ರಮೇಶ ವಂದಾಲ, ಮಹಮ್ಮದ ಬೆದ್ರೇಕರ, ಮಾಜಿ ಸದಸ್ಯ ಚಂದ್ರಪ್ಪ ಮನಗೂಳಿ, ಮಲ್ಲಪ್ಪ ಕುಂಬಾರ ಮತ್ತಿತರರು ಆಗ್ರಹಿಸಿದ್ದಾರೆ.