ನಾಟಿ ಮಾಡದೇ ರೈತ ನಿಂಗಪ್ಪಗೆ ಬೆಳೆಯ ಬಂಪರ್‌

| Published : Oct 18 2023, 01:00 AM IST

ನಾಟಿ ಮಾಡದೇ ರೈತ ನಿಂಗಪ್ಪಗೆ ಬೆಳೆಯ ಬಂಪರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕನಗೊಂಡನಹಳ್ಳಿ 4 ಎಕರೆಯಲ್ಲಿ ಬೆಳೆದ ಭತ್ತದ ಪೈರು । ಕಾಗೆ, ಗುಬ್ಬಿ ತಿಂದುಳಿದು, ಭೂಮಿ ಸೇರಿದ್ದ ಭತ್ತ ಈಗ ಅಚ್ಚರಿಯ ಬೆಳೆ

* ಕನಗೊಂಡನಹಳ್ಳಿ 4 ಎಕರೆಯಲ್ಲಿ ಬೆಳೆದ ಭತ್ತದ ಪೈರು । ಕಾಗೆ, ಗುಬ್ಬಿ ತಿಂದುಳಿದು, ಭೂಮಿ ಸೇರಿದ್ದ ಭತ್ತ ಈಗ ಅಚ್ಚರಿಯ ಬೆಳೆ

ನಾಗರಾಜ ಎಸ್.ಬಡದಾಳ್‌

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಜಲಾಶಯದಿಂದ ನೀರು ಕೊಡಲು ಸರ್ಕಾರ ಮೀನಾ-ಮೇಷ ಎಣಿಸುತ್ತಿದ್ದರೆ ಇಲ್ಲೊಬ್ಬ ವೃದ್ಧ ರೈತನಿಗೆ ಪ್ರಕೃತಿಯೇ ಭರ್ಜರಿ ಲಾಭ ತಂದು ಕೊಡುವ ಮೂಲಕ ಇಷ್ಟಪಟ್ಟು ಬೆಳೆಸಿದ್ದರೂ ಸಿಗದಷ್ಟು ಫಸಲು ನೀಡುವ ಮುನ್ಸೂಚನೆ ಕೊಡುವ ಮೂಲಕ ಅಚ್ಚರಿಗೆ ಕಾರಣವಾಗಿದೆ.

ತಾಲೂಕಿನ ಕನಗೊಂಡನಹಳ್ಳಿ ಗ್ರಾಮದ ಹಿರಿಯ ರೈತ ಸತ್ತೂರು ನಿಂಗಪ್ಪ(ಸತ್ತೂರು ನಿಂಗಜ್ಜ) ತಮ್ಮ 4 ಎಕರೆಯಲ್ಲಿ ಪ್ರಕೃತಿ ನೀಡಿದ ಬೆಳೆಯ ವರಕ್ಕೆ ತಮಗೆ ತಾವೇ ಹೆಮ್ಮೆಪಡುತ್ತಿದ್ದಾರೆ. ಸತ್ತೂರು ನಿಂಗಪ್ಪ ಕಳೆದ ಬಾರಿ ಭತ್ತ ಬೆಳೆದು ಫಸಲು ಕೈಗೆ ಬಂದ ನಂತರ ಭತ್ತ ಕಟಾವು ಮಾಡಿಸಿದ್ದರು. ಗದ್ದೆಯಲ್ಲಿ ಬಿದ್ದಿದ್ದ ಕಾಳು ಕಡಿಗಳನ್ನು ಕಾಗೆ, ಗುಬ್ಬಿಗಳು ಅಳಿದುಳಿದ ಭತ್ತವನ್ನು ತಿಂದ ನಂತರ ಸಾಕಷ್ಟು ಕಾಳು ಭೂಮಿ ಸೇರಿದ್ದವು. ಕವಾಟು ನಂತರ 3 ಸಲ ಕಲ್ಟಿವೇಟರ್‌ ಹೊಡೆಸಿ, ಒಮ್ಮೆ ಲೂಟರಿ ಮಾಡಿಸಿದ್ದ ಸುತ್ತೂರು ನಿಂಗಪ್ಪಜ್ಜ ಅಕಾಲಿಕ ಮಳೆಯಾದ್ದರಿಂದ, ಹದಡಿ ಕೆರೆಯಿಂದ ನೀರು ಗದ್ದೆಗೆ ಬಂದಿದ್ದರಿಂದ ಸಹಜವಾಗಿಯೇ ಭತ್ತದ ಸಸಿ ಬೆಳೆದಿದ್ದನ್ನು ಕಂಡು, ಸಾಹಸಕ್ಕೆ ಕೈಹಾಕಿದರು. ಹಿಂದಿನ ಹಂಗಾಮಿನಲ್ಲಿ ಬತ್ತ ಕವಾಟು ಮಾಡಿದ ನಂತರ ಹೊಲ ಉಳುಮೆ ಮಾಡಿದ್ದರು. ಆಗ ಮಳೆ ಬಂದಿದ್ದರಿಂದ ಉದುರಿದ್ದ ಭತ್ತದ ಕಾಳುಗಳು ಮೊಳಕೆಯೊಡೆದು, ಸಸಿಗಳು ಬೆಳೆದವು. ಹೀಗೆ ಬೆಳೆದ ಸಸಿಗಳನ್ನು ಕಟಾವು ಮಾಡಲು ಮನಸ್ಸಾಗದ ನಿಂಗಪ್ಪಜ್ಜ ಭತ್ತದ ಪೈರು ಹುಲುಸಾಗಿ ಬೆಳೆಯುವುದು ಗ್ರಹಿಸಿ, ಸಸಿಗಳಿಗೆ ಯೂರಿಯಾ ಗೊಬ್ಬರ, ಔಷಧ ಹಾಕಿದ್ದರು. ಕುರಿಗಳನ್ನು ಹೊಲಕ್ಕೆ ಕರೆಸಿ, ಸುಮಾರು 14 ಸಾವಿರ ಖರ್ಚು ಮಾಡಿ, ಕುರಿ ಗೊಬ್ಬರವನ್ನೂ ಬಿಟ್ಟಿದ್ದರು. ಪರಿಣಾಮ ಭತ್ತದ ಪೈರು ಹುಲುಸಾಗಿ ಬೆಳೆದಿದ್ದು ಕಂಡು ಕನಗೊಂಡನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಕುತೂಹಲದಿಂದ ನೋಡಲು ಬರುತ್ತಿದ್ದಾರೆ.

ತನ್ನ ಪಾಡಿಗೆ ತಾನೇ ಬೆಳೆದ ಬತ್ತದ ಪೈರಿಗೆ ಕುರಿ ಗೊಬ್ಬರ, ಯೂರಿಯಾ, ಔಷಧಿ ಸಿಂಪಡಿಸಿದ್ದ ಸುತ್ತೂರು ನಿಂಗಪ್ಪಜ್ಜ ಪ್ರತಿ ಎಕರೆಗೆ ಕೇವಲ 15 ಸಾವಿರದಂತೆ ಖರ್ಚು ಮಾಡಿದ್ದರಷ್ಟೇ. ತಮ್ಮ 4 ಎಕರೆ ಅದೃಷ್ಟದ ಭತ್ತದ ಪೈರಿಗೆ ನಿಂಗಪ್ಪಜ್ಜ ಖರ್ಚು ಮಾಡಿದ್ದು ಒಟ್ಟು 60 ಸಾವಿರ ರು. ಮಾತ್ರ. ಈಗ ಪ್ರತಿ ಎಕರೆಗೆ ಕನಿಷ್ಟ 40ರಿಂದ 42 ಚೀಲ ಭತ್ತ ಬರುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಇಂಬು ನೀಡುವಂತೆ ನಿಂಗಪ್ಪಜ್ಜನ ಗದ್ದೆಯಲ್ಲಿ ದಿನದಿನಕ್ಕೂ ಬೆಳೆಯುತ್ತಿರುವ ಭತ್ತದ ಪೈರು, ತೆನೆಗಳ ಗಾತ್ರವು ರೈತರ ಅಚ್ಚರಿಗೂ ಕಾರಣವಾಗಿದೆ.

ಸುತ್ತೂರು ನಿಂಗಪ್ಪಜ್ಜನ ಗದ್ದೆಯಲ್ಲಿ ಹೆಚ್ಚು ಹಣ ಖರ್ಚು ಮಾಡಿಸದೇ ಭತ್ತದ ಕಾಳು ಕಟ್ಟಿರುವ ವಿಚಾರ ತಿಳಿದ ಹದಡಿ ಗ್ರಾಮದ ಜಿಪಂ ಮಾಜಿ ಸದಸ್ಯ ಹದಡಿ ಜಿ.ಸಿ.ನಿಂಗಪ್ಪ, ಬಿಜೆಪಿ ರೈತ ಮೋರ್ಚಾ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಸೇರಿ ಅನೇಕರು ನಿಂಗಪ್ಪಜ್ಜನ ಗದ್ದೆಗೆ ಭೇಟಿ ನೀಡಿ, ಭತ್ತದ ಪೈರು ಕಂಡು ಮೂಕವಿಸ್ಮಿತರಾಗಿದ್ದಾರೆ. ಸುತ್ತೂರು ನಿಂಗಪ್ಪಜ್ಜನ ಅನುಭವದ ಕೃಷಿ ಕಾಯಕಕ್ಕೆ ಕೃಷಿ ಇಲಾಖೆಯೂ ಅಚ್ಚರಿಪಡುವ ಸಾಧನೆ ಮಾಡಿದ್ದಾರೆ. ಕಾಗೆ, ಗುಬ್ಬಿ ತಿಂದು, ನೆಲಕ್ಕೆ ಸೇರಿದ್ದ ಭತ್ತದಲ್ಲಿ ಬೆಳೆದ ಪೈರು ಇದು. ಮಳೆ ಬಂದು, ಕೆರೆ ನೀರು ತಲುಪಿದ್ದರಿಂದ ಸಸಿ ಬೆಳೆದವು. ಯೂರಿಯಾ, 26 26 ಔಷಧ ಹಾಕಿದ್ದೆ. ಒಂದೇ ಒಂದು ಕೆಜಿ ಗಟ್ಟಿ ಗೊಬ್ಬರ ಹಾಕಿಲ್ಲ. ಎಕರೆಗೆ 40-42 ಚೀಲದಂತೆ ಒಟ್ಟು 170-180 ಚೀಲ ಭತ್ತ ಬರುವ ವಿಶ್ವಾಸವಿದೆ. 4 ಎಕರೆಗೆ ಒಟ್ಟು 60 ಸಾವಿರ ಖರ್ಚು ಮಾಡಿದ್ದೇನೆ. ಕುರಿಯವನು ಕುರಿ ಮೇಯಿಸಿದ್ದಕ್ಕೆ 17500 ರು.ಗೆ ಒಂದು ಕಡಿಮೆ ಇಲ್ಲದಂತೆ ನೀಡಿದ್ದೇನೆ.

ಸತ್ತೂರು ನಿಂಗಪ್ಪಜ್ಜ ಹಿರಿಯ ರೈತ, ಕನಗೊಂಡನಹಳ್ಳಿ ಭತ್ತ ನಾಟಿ ಮಾಡದಿದ್ದರೂ ಬಂಪರ್ ಫಸಲು ತೆಗೆಯುತ್ತಿರುವ ಕನಗೊಂಡನಹಳ್ಳಿ ಗ್ರಾಮದ ಸತ್ತೂರು ನಿಂಗಜ್ಜನಿಗೆ ರಾಜ್ಯ ಸರ್ಕಾರ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಬೇಕು. ಕಳೆದ ಹಂಗಾಮಿನ ಭತ್ತದ ಬೆಳೆ ಕಟಾವು ಮಾಡಿದ ನಂತರ, ಉದುರಿದ ಭತ್ತದಲ್ಲಿ ಸಸಿ ಬೆಳೆದು, ಪೈರು ಕೈಗೆ ಬರುತ್ತಿರುವುದು ಸಾಮಾನ್ಯ ಸಾಧನೆಯಲ್ಲ. ಹೆಚ್ಚು ಖರ್ಚಿಲ್ಲದೇ, ಔಷಧಿ, ಗೊಬ್ಬರಕ್ಕೆ ಖರ್ಚು ಮಾಡದೇ, ಬಂಪರ್ ಬೆಳೆ ತೆಗೆಯುತ್ತಿರುವ ನಿಂಗಪ್ಪಜ್ಜ ನಮ್ಮೆಲ್ಲರಿಗೂ ಪ್ರೇರಣೆ.

ಹದಡಿ ಜಿ.ಸಿ.ನಿಂಗಪ್ಪ, ಜಿಪಂ ಮಾಜಿ ಸದಸ್ಯ.

.................................

ಸತ್ತೂರು ನಿಂಗಪ್ಪಜ್ಜ ಭತ್ತ ನಾಟಿ ಮಾಡದೇ, ಬಂಪರ್ ಬೆಳೆ ತೆಗೆಯುತ್ತಿದ್ದಾರೆ. ನಿಂಗಪ್ಪಜ್ಜ ಕೃಷಿ ಅನುಭವ, ವಯಸ್ಸು ಇಂತಹದ್ದೊಂದು ಅಚ್ಚರಿಯ ಸಾಧನೆಗೆ ಕಾರಣ‍ವಾಗಿದೆ. ಹಿರಿಯ ರೈತನ ಜಾಣ್ಮೆ, ಕೃಷಿ ಅನುಭವ ಯುವ ರೈತರಿಗೂ ಪ್ರೇರಣೆ. ಬೆಳೆಯನ್ನು ನೋಡುವುದೇ ಕಣ್ಣಿಗೆ ಆನಂದವಾಗುತ್ತದೆ.

ಬಿ.ಎಂ.ಸತೀಶ ಕೊಳೇನಹಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ

...............