ಅಬ್ಬರಿಸಿದ ಮಗಿ ಮಳೆ ಹೊಡೆತಕ್ಕೆ ತತ್ತರಿಸಿದ ಬೆಳೆಗಳು

| Published : Aug 24 2024, 01:18 AM IST

ಅಬ್ಬರಿಸಿದ ಮಗಿ ಮಳೆ ಹೊಡೆತಕ್ಕೆ ತತ್ತರಿಸಿದ ಬೆಳೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಎರಡ್ಮೂರು ದಿನಗಳ ಹಿಂದೆ ಧಾರಾಕಾರ ಮಳೆ ಸುರಿದಿದ್ದು, ವರುಣನಾರ್ಭಟಕ್ಕೆ ರೈತರು ಬೆಚ್ಚಿಬಿದ್ದಿದ್ದಾರೆ. ಬೆವರು ಸುರಿಸಿ ಬೆಳೆದ ಬೆಳೆ ಕೈಗೆಟುಕುವ ಮೊದಲೇ ನೀರು ಪಾಲಾಗುತ್ತಿರುವುದು ಕಂಡು ಮರುಗುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಮಂಜು ಮುಸುಕಿನ ದೃಶ್ಯದಂತೆ ಅಬ್ಬರಿಸಿದ ಮಹಾ ಮಳೆಗೆ ಹೊಲ,ಗದ್ದೆಗಳು ಜಲಾವೃತವಾಗಿ ಬೆಳೆಸಾಲುಗಳು ತತ್ತರಿಸಿವೆ.

ತಾಲೂಕಿನಲ್ಲಿ ಕಳೆದ ಎರಡ್ಮೂರು ದಿನಗಳ ಹಿಂದೆ ಧಾರಾಕಾರ ಮಳೆ ಸುರಿದಿದ್ದು, ವರುಣನಾರ್ಭಟಕ್ಕೆ ರೈತರು ಬೆಚ್ಚಿಬಿದ್ದಿದ್ದಾರೆ. ಬೆವರು ಸುರಿಸಿ ಬೆಳೆದ ಬೆಳೆ ಕೈಗೆಟುಕುವ ಮೊದಲೇ ನೀರು ಪಾಲಾಗುತ್ತಿರುವುದು ಕಂಡು ಮರುಗುತ್ತಿದ್ದಾರೆ.

ಹಸಿರು ಹಸಿರಾಗಿದ್ದ ಮಣ್ಣೂರ ಹೊಸೂರ ಶೇಷಗಿರಿ ಶಿವಬಾಳನಗರ ರಾಮನಗರ ಉಪ್ಪಾರವಾಡಿ ದೇವಪ್ಪನಗರ ದಯಾನಂದನಗರ ಕುಡಗನೂರ ಭಾಗದ ಹೊಲಗಳಲ್ಲಿ ಎಲ್ಲಿ ನೋಡಿದರಲ್ಲಿ ನೀರಿನ ಹೊಳೆ ಹರಿಯುತ್ತಿದ್ದ ನೋಟ ಗೋಚರಿಸಿತು.

ಸುಮಾರು 200 ಎಕರೆಯಷ್ಟು ಪ್ರದೇಶದಲ್ಲಿ ಮಳೆ ನೀರು ನಿಂತು ಬೆಳೆ ಸಂಪೂರ್ಣ ಹಾಳಾಗಿದೆ. ಹೆಸರು, ತೊಗರಿ,ಉದ್ದು ಹತ್ತಿ, ಶೇಂಗಾ ಈರುಳ್ಳಿ ಬೆಳೆಗಳೆಲ್ಲವೂ ನೀರುಪಾಲಾದ ಸ್ಥಿತಿಗೆ ಮರುಗಿದರು. ಮಳೆಯನ್ನೇ ನಂಬಿ ಮುಂಗಾರು ಬಿತ್ತನೆ ಮಾಡಿದ್ದ ಕರಜಗಿ ವಲಯದ ರೈತರು, ಮಳೆ ಹೊಡೆತದಿಂದಾಗಿ ಬೆಳೆ ನಷ್ಟ ಅನುಭವಿಸುವ ಮೂಲಕ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ರೈತರು ಕೃಷಿ ಚಟುವಟಿಕೆ ಎದುರಿಸುತ್ತಿರುವ ಬಿಕ್ಕಟ್ಟುಗಳಿಂದ ತತ್ತರಿಸಿದ್ದಾರೆ. ಆರಂಭದಲ್ಲಿ ಮಳೆ ಕೊರತೆ ಕಾಣಿಸಿತು. ಈಗ ಮಳೆ ಹೆಚ್ಚಾಗಿದೆ. ಅತೀವೃಷ್ಟಿ ಮತ್ತು ಅನಾವೃಷ್ಟಿ ಎರಡಕ್ಕೂ ಸಿಲುಕಿ ಬೆಳೆ ಕೈಕೊಟ್ಟಿದೆ. ಉತ್ತಮ ಇಳುವರಿ ನಿರೀಕ್ಷೆ ಮೂಡಿಸಿದ್ದ ಹೆಸರು ಉದ್ದು ಹತ್ತಿ ತೊಗರಿ ಬಿತ್ತನೆ ಮಾಡಿದರೂ ಬೆಳೆ ಬದುಕುವ ಲಕ್ಷಣ ಕಾಣುತ್ತಿಲ್ಲ.ಈ ವರ್ಷ ಮತ್ತೆ ಬದುಕಿನ ಮೇಲೆ ಸಾಲದ ಹೊರೆ ಬಿದ್ದಿದೆ. ಸರ್ಕಾರದಿಂದ ಪರಿಹಾರ ಒದಗಿಸಿಕೊಡಬೇಕು ಎಂದು ತಾಲೂಕಿನ ರೈತರು ಮನವಿ ಮಾಡಿದ್ದಾರೆ.