ಬೆಳೆ ಹಾನಿ: ಸಂಕಷ್ಟದಲ್ಲಿ ಅನ್ನದಾತ

| Published : Jul 21 2025, 01:30 AM IST

ಸಾರಾಂಶ

ನದಿ ತೀರದಲ್ಲಿರುವ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಬೆಳೆಗಳೆಲ್ಲವೂ ನೀರು ಪಾಲಾಗಿವೆ. ರೈತ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಬೆಳಗಾವಿ ತಾಲೂಕಿನ ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದೆ. ನದಿ ತೀರದಲ್ಲಿರುವ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಬೆಳೆಗಳೆಲ್ಲವೂ ನೀರು ಪಾಲಾಗಿವೆ. ರೈತ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಪಶ್ಚಿಮ ಘಟ್ಟ ಪ್ರದೇಶ ಹಾಗೂ ಜಿಲ್ಲೆಯಲ್ಲಿ ಸುರಿಯಿತ್ತಿರುವ ಭಾರೀ ಮಳೆಯಿಂದಾಗಿ ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿದೆ. ಇದರಿಂದಾಗಿ ನದಿ ತೀರದ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ನದಿ ತೀರದಲ್ಲಿರುವ ಅಪಾರ ಪ್ರಮಾಣದ ಜಮೀನಿನಲ್ಲಿದ್ದ ಬೆಳೆಗಳು ನೀರಿನಲ್ಲಿ ನಿಂತು ಹಾನಿಗೀಡಾಗಿವೆ. ಹೊಲ ಗದ್ದೆಗಳಲ್ಲಿ ಎಲ್ಲಿ ನೋಡಿದ್ದಲ್ಲಿ ನೀರೇ ನೀರು ಕಾಣುತ್ತದೆ. ಬೆಳೆಗಳೆಲ್ಲವೂ ಜಲಾವೃತಗೊಂಡಿವೆ.

ಬೆಳಗಾವಿ ತಾಲೂಕಿನ ಕಂಗ್ರಾಳಿ ಗ್ರಾಮದ ಸುತ್ತಮುತ್ತಲಿನ ಭಾಗಗಳಲ್ಲಿ ಬೆಳೆದ ಬೆಳೆಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ. ಅವಧಿಗೂ ಮೊದಲೇ ಮಳೆ ಆಗಿದ್ದರಿಂದ ಬಿತ್ತನೆ ಮಾಡಿದ್ದ ರೈತರು ತಮ್ಮ ಬೆಳೆ ಕೈಹಿಡಿಯುತ್ತದೆ ಎಂದು ನಂಬಿದ್ದರು. ಆದರೆ ಸಾಲ ಮಾಡಿ ಬಿತ್ತಿದೆ ಬೆಳೆ ಬಾರದೇ ಕೈಕೊಟ್ಟಿದೆ. ಇದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರು ಸಂಕಷ್ಟ ಎದುರಿಸುವಂತಾಗಿದೆ.

ಕಬ್ಬು, ಗೋವಿನ ಜೋಳ, ಜೋಳ, ಮೆಣಸಿನಕಾಯಿ, ಇಂದ್ರಾಣಿ ಭತ್ತ, ಬೆಳಗಾವಿ ಬಾಸುಮತಿ ಭತ್ತ ಮತ್ತಿತರ ಬೆಳೆಗಳನ್ನುಬೆಳೆಯಲಾಗಿದೆ. ಈ ಎಲ್ಲ ಬೆಳೆಗಳು ನೀರಿನಲ್ಲಿ ಜಲಾವೃತಗೊಂಡು ಸಂಪೂರ್ಣವಾಗಿ ಹಾನಿಗೀಡಾಗಿವೆ. ಸಾವಿರಾರು ರುಪಾಯಿ ಖರ್ಚು ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಇದರಿಂದಾಗಿ ನಿರಾಸೆ ಮೂಡುವಂತಾಗಿದೆ. ಈ ವರ್ಷವೂ ರೈತರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಬೆಳೆಗಳು ಹಾನಿಗೀಡಾಗಿದ್ದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಬೆಳೆ ಹಾನಿಗೀಡಾದ ರೈತರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರಧನ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ಅದರಂತೆ ಬಳ್ಳಾರಿ ನಾಲಾ ಕೂಡ ಬೆಳಗಾವಿ ತಾಲೂಕಿನಲ್ಲಿ ಹರಿಯುತ್ತದೆ. ಈ ನಾಲಾ ಇಕ್ಕಟ್ಟಾಗಿರುವುದರಿಂದ ನಾಲಾ ಪಕ್ಕದಲ್ಲಿರುವ ಹೊಲಗದ್ದೆಗಳಿಗೆ ನೀರು ನುಗ್ಗಿದ್ದರಿಂದ ಬೆಳೆಗಳು ಹಾನಿಗೀಡಾಗಿವೆ. ಬಳ್ಳಾರಿ ನಾಲಾ ಹೂಳು ತುಂಬಿದೆ. ಬೆಳಗಾವಿಯಲ್ಲಿ ಮಳೆ ಆದರೆ, ಬಳ್ಳಾರಿ ನಾಲಾ ತುಂಬಿ ಹರಿಯುತ್ತದೆ. ಮೊದಲೇ ಈ ನಾಲಾ ಇಕ್ಕಟ್ಟಾಗಿದೆ. ಹಾಗಾಗಿ, ನಿರಾಯಾಸವಾಗಿ ಹೊಲಗದ್ದೆಗಳಿಗೆ ನೀರು ನುಗ್ಗುತ್ತದೆ. ರೈತರುಬೆಳೆದ ಬೆಳೆಗಳೆಲ್ಲವೂ ನೀರು ಪಾಲಾಗಿವೆ. ಇನ್ನೇನೂ ಫಸಲು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ಬೆಳೆಗಳೆಲ್ಲವೂ ಜಲಾವೃತಗೊಂಡು ಸಂಪೂರ್ಣವಾಗಿ ಹಾನಿಗೀಡಾಗಿವೆ. ಇದು ರೈತರನ್ನು ಮತ್ತಷ್ಟು ಜರ್ಜರಿತರನ್ನಾಗಿಸಿದೆ.

ಮಾರ್ಕಂಡೇಯ ನದಿ ತೀರದಲ್ಲಿರುವ ಹೊಲಗದ್ದೆಗಳಿಗೆ ನೀರು ನುಗ್ಗಿ, ಬೆಳೆಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ. ಬೆಳೆಹಾನಿಗೀಡಾದ ರೈತರಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಧನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಅಪ್ಪಾಸಾಹೇಬ ದೇಸಾಯಿ ತಿಳಿಸಿದರು.