ಬೆಳೆ ಹಾನಿ: ವಿಶೇಷ ಪ್ಯಾಕೇಜ್‌ ಆಗ್ರಹಿಸಿ ಧರಣಿ

| Published : May 19 2024, 01:55 AM IST

ಸಾರಾಂಶ

ಮಳೆಗೆ ಹಾನಿಯಾದ ಜಿಲ್ಲೆಯ ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಹೆದ್ದಾರಿ ತಡೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮಳೆಗೆ ಹಾನಿಯಾದ ಜಿಲ್ಲೆಯ ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಹೆದ್ದಾರಿ ತಡೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದ ಹೆದ್ದಾರಿಯ ಬಳಿ ಜಮಾಯಿಸಿದ ಕಬ್ಬು ಬೆಳೆಗಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಹೆದ್ದಾರಿಯಲ್ಲಿ ಕೆಲ ಕಾಲ ರಸ್ತೆತಡೆ ನಡೆಸಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಮಾತನಾಡಿ, ಮೈಸೂರು,ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮಳೆ, ಗಾಳಿಗೆ ೨ ಸಾವಿರ ಹೆಕ್ಟೇರ್‌ ಬಾಳೆ ನಾಶವಾಗಿದ್ದು, ರೈತರ ಸಮಸ್ಯೆ ಆಲಿಸಿಲ್ಲ ಎಂದು ಆರೋಪಿಸಿದರು.

ಲೋಕಸಭೆ ಚುನಾವಣೆ ನೀತಿ ಸಂಹಿತೆ ನೆಪಯೊಡ್ಡಿ ರೈತರ ಬೆಳೆ ನಷ್ಟ ಅಂದಾಜು ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಜನಪ್ರತಿನಿಧಿಗಳು ಕೂಡ ರೈತರ ಪರವಾಗಿ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ವಿಫಲ: ಮಳೆ, ಬಿರುಗಾಳಿಗೆ ಹಾನಿಯಾದ ನೊಂದ ರೈತರಿಗೆ ಜಿಲ್ಲಾಡಳಿತ ವಿಶೇಷ ಪ್ಯಾಕೇಜ್‌ ಘೋಷಿಸಲು ಸರ್ಕಾರದ ಹಂತದಲ್ಲಿ ವಿಫಲವಾಗಿದೆ. ರೈತರು ಜಾಗೃತರಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ತಯಾರಿಸಿ ವಿಶೇಷ ಪ್ಯಾಕೇಜ್‌ ವರದಿ ಸಲ್ಲಿಬೇಕು. ಪ್ರತಿ ಎಕರೆಗೆ ಒಂದು ಲಕ್ಷ ಬೆಳೆ ನಷ್ಟ ತುಂಬಿಕೊಡಬೇಕು ಎಂದರು.

ಬರಗಾಲ ಎದುರಾದ ಕಾರಣ ಬರ ಪರಿಹಾರವನ್ನು ನೀಡಬೇಕು.ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಬೇಕು.ಹೊಸ ಕೃಷಿ ಪಂಪ್‌ ಸೆಟ್‌ಗಳಿಗೆ ಅಕ್ರಮ ಸಕ್ರಮ ಯೋಜನೆ ಮರು ಜಾರಿಗೊಳಿಸಬೇಕು.ಪ್ರತಿ ಲೀಟರ್‌ ಹಾಲಿಗೆ ೧೦ ರು.ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನಾಗರಾಜು,ಬಿ.ರವಿ, ಕೆ.ಎಂ.ರಾಜಣ್ಣ, ಹರೀಶ್‌ ಕುಮಾರ್ ಸೇರಿದಂತೆ ನೂರಾರು ಮಂದಿ ಇದ್ದರು.