ಸಾರಾಂಶ
ಧಾರವಾಡ:
ಅಕ್ಟೋಬರ್ ತಿಂಗಳಲ್ಲಿ ಸುರಿದ ಅಕಾಲಿಕ, ನಿರಂತರ, ದಟ್ಟ ಮಳೆಯಿಂದಾಗಿ ಆಗಿರುವ ಬೆಳೆ ಹಾನಿಯ ಸಮೀಕ್ಷೆಯಲ್ಲಿ ಅನರ್ಹರು ಸೇರ್ಪಡೆ ಆಗದಂತೆ ಅಧಿಕಾರಿ, ಸಿಬ್ಬಂದಿ ಎಚ್ಚರಿಕೆ ವಹಿಸಬೇಕು. ಜತೆಗೆ ಅರ್ಹ ಯಾವ ಒಬ್ಬ ರೈತರ ಜಮೀನುಗಳು ಬೆಳೆ ಹಾನಿ ಸಮೀಕ್ಷೆಯಿಂದ ಹೊರಗುಳಿಯದಂತೆ ಕಾಳಜಿವಹಿಸಲು ಜಿಲ್ಲಾಧಿಕಾರಿ ದಿವ್ಯಪ್ರಭು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಸಿಕ ಸಭೆಯನ್ನು ಸೋಮವಾರ ಜರುಗಿಸಿದ ಅವರು, ಬೆಳೆಹಾನಿ ಸಮೀಕ್ಷಾ ವರದಿಯನ್ನು ನ. 5ರಂದು ಆನ್‌ಲೈನ್ ಮೂಲಕ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಪ್ರಕಟಿತ ಸಮೀಕ್ಷಾ ವರದಿಯ ಪ್ರತಿಯನ್ನು ಆಯಾ ತಾಲೂಕಿನ ತಹಸೀಲ್ದಾರ್ ಕಚೇರಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ತೋಟಗಾರಿಕೆ ಇಲಾಖೆ ಕಚೇರಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಗ್ರಾಪಂ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಡಂಗುರ ಸಾರುವ ಮೂಲಕ ರೈತ ಕುಟುಂಬಗಳಿಗೆ ಬೆಳೆ ಹಾನಿ ಸಮೀಕ್ಷೆ ಕೈಗೊಂಡಿರುವ ಕುರಿತು ಮತ್ತು ಬೆಳೆ ಹಾನಿ ಆಗಿರುವ ರೈತರ ಹೆಸರು, ವಿವರ ಇರುವ ಬಗ್ಗೆ ಪರಿಶೀಲಿಸಿ, ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಮಾಹಿತಿ ನೀಡಬೇಕು ಎಂದರು.
ಗ್ರಾಪಂಗಳ ಸೂಚನಾ ಫಲಕದಲ್ಲಿ ಆಯಾ ಗ್ರಾಮಗಳ ಬೆಳೆ ಹಾನಿ ಸಮೀಕ್ಷಾ ವರದಿಯ ಪ್ರತಿಯನ್ನು ಪ್ರಚುರಪಡಿಸಲು ಅವರು ಅಧಿಕಾರಿಗಳಿಗೆ ಹೇಳಿದರು. ಬೆಳೆ ಹಾನಿ ಸಮೀಕ್ಷಾ ವರದಿಯಲ್ಲಿ ರೈತರ ಜಮೀನು, ಬೆಳೆ ವಿವರ ಬಿಟ್ಟು ಹೋಗಿದ್ದಲ್ಲಿ, ವಿವರ ಸರಿ ಇರದಿದ್ದಲ್ಲಿ ಅಥವಾ ಪ್ರಕಟಿತ ವರದಿಯಲ್ಲಿನ ಅಂಶಗಳ ಬಗ್ಗೆ ತಕರಾರುಗಳಿದ್ದಲ್ಲಿ ಸಂಬಂಧಿಸಿದ ರೈತರು ಸಮೀಕ್ಷಾ ವರದಿ ಪ್ರಕಟಿಸಿದ ಏಳು ದಿನಗಳೊಳಗೆ ತಮ್ಮ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಇದನ್ನು ಪರಿಶೀಲಿಸಿ, ಕೃಷಿ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್‌ರು ಕ್ರಮವಹಿಸಿ, ಅಂತಿಮ ಸಮೀಕ್ಷಾ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಸೂಚಿಸಿದರು.ಅ. 1ರಿಂದ ನ. 4ರ ವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 111.02 ಮೀಮೀ ಬದಲಿಗೆ 221.09 ಮೀಮೀ ಆಗಿದೆ. ಅಕ್ಟೋಬರ್‌ನಲ್ಲಿ ಮಳೆಯಿಂದಾಗಿ ಇಬ್ಬರು ಮಪ್ಪಟ್ಟಿದ್ದು ನಿಯಮಾನುಸಾರ ತಲಾ ₹ 5 ಲಕ್ಷ ಪರಿಹಾರ ವಿತರಿಸಲಾಗಿದೆ. ಆರು ಜಾನುವಾರು ಮೃತಪಟ್ಟಿದ್ದು, ₹ 2.22 ಲಕ್ಷ ಪರಿಹಾರ ಹಾಗೂ ಮೂರು ಸಣ್ಣ ಜಾನುವಾರುಗಳ ಜೀವ ಹಾನಿ ಆಗಿದ್ದು, ₹ 12 ಸಾವಿರ ಪರಿಹಾರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು, ನಿರಂತರ ಮಳೆಯಿಂದಾಗಿ ಅಕ್ಟೋಬರ್‌ನಲ್ಲಿ ವಿವಿಧ ತಾಲೂಕುಗಳು ಸೇರಿದಂತೆ ಮೂರು ಮನೆ ಪೂರ್ಣ ಹಾನಿ, 482 ಮನೆ ಭಾಗಶಃ ಹಾನಿಯಾಗಿದ್ದು ಈ ಪೈಕಿ 453 ಮನೆಗಳಿಗೆ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಮತ್ತು ಬಾಕಿ ಉಳಿದಿರುವ ಪ್ರಕರಣಗಳ ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ. ಮನೆಗಳಿಗೆ ನೀರು ನುಗ್ಗಿರುವ 264 ಪ್ರಕರಣಗಳಿಗೆ ₹ 12.18 ಲಕ್ಷ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮುಗನೂರಮಠ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.