ಸಾರಾಂಶ
ಹಾನಗಲ್ಲ ತಾಲೂಕಿನಾದ್ಯಂತ ಬೆಳೆಹಾನಿ ಸಮೀಕ್ಷೆ ಭರದಿಂದ ಸಾಗಿದೆ. ತಾಲೂಕಿನ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ಆರಂಭ ಮಾಡಿದ್ದು, ಮೇಲ್ನೋಟಕ್ಕೆ ಶೇ. ೫೦ರಷ್ಟು ಬೆಳೆಹಾನಿಯಾದ ಲಕ್ಷಣಗಳಿವೆ.
ಹಾನಗಲ್ಲ: ತಾಲೂಕಿನಾದ್ಯಂತ ಬೆಳೆಹಾನಿ ಸಮೀಕ್ಷೆ ಭರದಿಂದ ಸಾಗಿದೆ.
ತಾಲೂಕಿನಲ್ಲಿ ಮೇ, ಜೂನ್, ಜುಲೈ ತಿಂಗಳಿನಲ್ಲಿ ಹೆಚ್ಚು ಮಳೆ ಬಿದ್ದಿದೆ. ಹೀಗಾಗಿ ಬಹುತೇಕ ಗೋವಿನ ಜೋಳದ ಇಳುವರಿ ಕುಸಿತವಾಗಿದೆ. ಹೆಚ್ಚು ಪಾಲು ಬೆಳೆ ಹಾನಿಯಾಗಿದೆ.ತಾಲೂಕಿನ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ಆರಂಭ ಮಾಡಿದ್ದು, ಮೇಲ್ನೋಟಕ್ಕೆ ಶೇ. ೫೦ರಷ್ಟು ಬೆಳೆಹಾನಿಯಾದ ಲಕ್ಷಣಗಳಿವೆ. ಜನವರಿಯಿಂದ ಸೆ. ೧೨ರ ವರೆಗೆ ವಾಡಿಕೆ ಮಳೆ ೮೦೧ ಮಿಮೀ ಆಗಬೇಕಾಗಿತ್ತು. ಆದರೆ ಬಿದ್ದ ಮಳೆ ೬೯೫ ಮಿಮೀ ಮಾತ್ರ. ಆದರೆ ಮೇ, ಜೂನ್, ಜುಲೈ ತಿಂಗಳಿನಲ್ಲಿ ನಿರಂತರ ಮಳೆ ಬಿದ್ದಿದ್ದರಿಂದ ಬೆಳೆ ಹಾನಿಯಾಗಿದೆ.
ಇಲ್ಲಿನ ಪ್ರಮುಖ ಬೆಳೆ ಬತ್ತವಾಗಿದ್ದರೂ ಕಳೆದ ಎರಡು ದಶಕಗಳಿಂದ ಮಳೆ ಏರಿಳಿತದ ಕಾರಣದಿಂದ ಹೆಚ್ಚು ಗೋವಿನ ಜೋಳ ಬೆಳೆಯಲು ರೈತರು ಮುಂದಾಗಿದ್ದಾರೆ. ಆದರೆ ಇಂತಹ ಅತಿವೃಷ್ಟಿಗೆ ಗೋವಿನ ಜೋಳ ಫಸಲು ಬರುವುದಿಲ್ಲ. ಹಾನಗಲ್ಲ ತಾಲೂಕಿನಲ್ಲಿ ೨೪,೧೯೨ ಹೆಕ್ಟೇರ್ ಗೋವಿನ ಜೋಳ ಬಿತ್ತನೆಯಾಗಿದೆ. ಬತ್ತ ೧೪,೩೫೦ ಹೆಕ್ಟೇರ್ ಬಿತ್ತನೆಯಾಗಿದೆ. ಉಳಿದಂತೆ ಸೋಯಾ ಅವರೆ, ಶೇಂಗಾ, ಹತ್ತಿ, ಕಬ್ಬು ಸೇರಿದಂತೆ ಒಟ್ಟು ೪೭,೭೬೫ ಹೆಕ್ಟೇರ್ ಭೂಮಿಯಲ್ಲಿನ ಕೃಷಿ ಪೈರು ಹಾಗೂ ತೋಟಗಾರಿಕೆ ಬೆಳೆಗಳ ಸಮೀಕ್ಷೆ ತಾಲೂಕು ಮಟ್ಟದಲ್ಲಿ ಪೂರ್ಣಗೊಂಡಿದೆ ಎನ್ನಲಾಗಿದೆ. ೫ ಸಾವಿರಕ್ಕೂ ಅಧಿಕ ರೈತರ ಗೋವಿನ ಜೋಳ, ಹತ್ತಿ, ಸೋಯಾಅವರೆ ನಷ್ಟವಾದ ವರದಿ ಇದೆ.