ಸಾರಾಂಶ
ಬೊಮ್ಮನಾಳ ಸುತ್ತಮುತ್ತ ಪ್ರದೇಶದಲ್ಲಿ ಬೆಳೆ ವಿಮಾ ಪರಿಹಾರವನ್ನು ರೈತರ ಹೆಸರಿನಲ್ಲಿ ಬೇರೊಬ್ಬರು ಪಡೆದುಕೊಂಡಿರುವುದನ್ನು ಕಂಡು ಅಧಿಕಾರಿಗಳೇ ಬೆರಗಾಗಿದ್ದಾರೆ. ರೈತರು ಬೆಳೆದಿರುವುದೇ ಒಂದು ಬೆಳೆಯಾದರೂ ಖದೀಮರು ಮತ್ತೊಂದು ಬೆಳೆಯ ವಿಮಾ ಕಂತು ಪಾವತಿಸಿ ಪರಿಹಾರವನ್ನು ತಮ್ಮ ಖಾತೆಗೆ ಬರುವಂತೆ ಮಾಡಿಕೊಂಡಿದ್ದನ್ನು ಕೇಳಿ ಅಧಿಕಾರಿಗಳು ದಂಗಾಗಿದ್ದಾರೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ:ಬೆಳೆ ವಿಮಾ ಅಕ್ರಮಗಳ ಕುರಿತು ''''ಕನ್ನಡಪ್ರಭ'''' ಸರಣಿ ವರದಿ ಪ್ರಕಟಿಸುತ್ತಿದ್ದಂತೆ ಕೃಷಿ ಇಲಾಖೆಯ ಅಧಿಕಾರಿಗಳ ದಂಡೇ ಹನುಮನಾಳ ಹೋಬಳಿ ವ್ಯಾಪ್ತಿಯ ಬೊಮ್ಮನಾಳ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ, ಪರಿಶೀಲಿಸಿದೆ.
ಬೊಮ್ಮನಾಳ ಸುತ್ತಮುತ್ತ ಪ್ರದೇಶದಲ್ಲಿ ಬೆಳೆ ವಿಮಾ ಪರಿಹಾರವನ್ನು ರೈತರ ಹೆಸರಿನಲ್ಲಿ ಬೇರೊಬ್ಬರು ಪಡೆದುಕೊಂಡಿರುವುದನ್ನು ಕಂಡು ಅಧಿಕಾರಿಗಳೇ ಬೆರಗಾಗಿದ್ದಾರೆ. ರೈತರು ಬೆಳೆದಿರುವುದೇ ಒಂದು ಬೆಳೆಯಾದರೂ ಖದೀಮರು ಮತ್ತೊಂದು ಬೆಳೆಯ ವಿಮಾ ಕಂತು ಪಾವತಿಸಿ ಪರಿಹಾರವನ್ನು ತಮ್ಮ ಖಾತೆಗೆ ಬರುವಂತೆ ಮಾಡಿಕೊಂಡಿದ್ದನ್ನು ಕೇಳಿ ಅಧಿಕಾರಿಗಳು ದಂಗಾಗಿದ್ದಾರೆ. ಕುಷ್ಟಗಿ ತಾಲೂಕು ಕೃಷಿ ಇಲಾಖೆ ಎಡಿಎ ನಾಗರಾಜ ಕಾತರಕಿ ನೇತೃತ್ವದಲ್ಲಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಬೊಮ್ಮನಾಳ ಗ್ರಾಮಕ್ಕೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ.ಅಕ್ರಮದ ಕುರಿತು ಮಾಹಿತಿ ಸಂಗ್ರಹಿಸಿ, ಸರ್ಕಾರಕ್ಕೆ ಮತ್ತು ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆದಿರುವ ಹಿರಿಯ ವಕೀಲ ರವಿರಾಜ ಕುಲಕರ್ಣಿ ಅವರ ಮನೆಗೆ ಹೋಗಿ ಅವರಿಂದಲೂ ಅನೇಕ ಮಾಹಿತಿ ಸಂಗ್ರಹಿಸಿದ್ದಾರೆ. ಇದಾದ ಮೇಲೆ ಅಧಿಕಾರಿಗಳ ತಂಡ ಸುತ್ತಮುತ್ತಲ ಪ್ರದೇಶದಲ್ಲಿ ಬೆಳೆ ವಿಮಾ ಪರಿಹಾರ ಪಡೆದಿರುವ ಸರ್ವೇ ನಂಬರ್‌ಗಳ ಭೂಮಿಗೂ ಭೇಟಿ ನೀಡಿದೆ. ಬೆಳೆ ವಿಮಾ ಪರಿಹಾರ ಮಂಜೂರಾಗಿರುವ ಭೂಮಿಯ ರೈತರನ್ನು ಸಹ ಮಾತನಾಡಿಸಿ, ಮಾಹಿತಿ ಸಂಗ್ರಹಿಸಿದ್ದಾರೆ.
ರೈತರು ನಮಗೆ ಮಾಹಿತಿಯೇ ಇಲ್ಲ ಎಂದಿರುವುದು ಮತ್ತು ನಮ್ಮ ಹೊಲಕ್ಕೆ ಬೇರೊಬ್ಬರು ಬೆಳೆ ವಿಮಾ ಪರಿಹಾರ ಪಡೆದಿರುವ ಕುರಿತು ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮೇಲಧಿಕಾರಿಗಳೇ ಸಾಥ್
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಕೇವಲ ಕೊಪ್ಪಳ ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ಗೋಲ್‌ಮಾಲ್ ನಡೆದಿದೆ. ಇದರ ಹಿಂದೆ ದೊಡ್ಡ ಕುಳಗಳು ಇರುವುದರಿಂದ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಗೋಲ್‌ಮಾಲ್‌ನಲ್ಲಿ ಕೆಳದ ಹಂತದ ಅಧಿಕಾರಿಗಳು ಇರುವುದಿಲ್ಲ. ಮೇಲಧಿಕಾರಿಗಳ ಮಟ್ಟದಲ್ಲಿಯೇ ನಡೆಯುತ್ತಿರುವುದರಿಂದ ಪಹಣಿ ಮಾಲೀಕನಿಗೂ, ವಿಮಾ ಪರಿಹಾರ ಪಡೆದವನ ಹೆಸರು ತಾಳೆಯಾಗದಿದ್ದರೂ ಪರಿಹಾರ ಪಾವತಿಯಾಗುವಂತೆ ಆಗುತ್ತಿರುವುದೇ ಅಕ್ರಮದ ಮೂಲವಾಗಿದೆ ಎಂದು ಹೆಸರು ಹೇಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಬೆಳೆ ವಿಮಾ ಪರಿಹಾರದ ಗೋಲ್‌ಮಾಲ್ ಕುರಿತು ಸಮಗ್ರ ಮಾಹಿತಿಯನ್ನು ಕೃಷಿ ಇಲಾಖೆಯ ಅಧಿಕಾರಿಗಳ ಪಡೆದುಕೊಂಡಿದ್ದಾರೆ. ಅವರು ಕ್ರಮಕೈಗೊಳ್ಳದಿದ್ದರೆ ಕಾನೂನು ಹೋರಾಟ ಮಾಡುತ್ತೇನೆ.ರವಿರಾಜ ಕುಲಕರ್ಣಿ, ವಕೀಲ