ಸಾರಾಂಶ
ಚನ್ನಪಟ್ಟಣ: ರಾಜ್ಯ ಹಿಂದೆಂದು ಕಾಣದಂತ ಬರ ಕಂಡಿದ್ದು, ಈ ಹಿಂದೆ 214 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಇದೀಗ ಮತ್ತೆ 7 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಒಟ್ಟು 221 ತಾಲೂಕುಗಳು ಬರಪೀಡಿತವಾಗಿದ್ದು, ನಮ್ಮ ರಾಜ್ಯ ಶೇ.90ರಷ್ಟು ಬರ ಎದುರಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ತಾಲೂಕಿನ ಜಗದಾಪುರ ಗ್ರಾಮದಲ್ಲಿ ಬರಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯೂ ಸಹ ಬರದಿಂದ ತತ್ತರಿಸಿದ್ದು, ಜಿಲ್ಲೆಯ ಸುಮಾರು 42 ಸಾವಿರ ಹೆಕ್ಟೇರ್ (1 ಲಕ್ಷ ಎಕರೆ) ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಇದರ ಜತೆಗೆ ತೋಟಗಾರಿಕೆ ಬೆಳೆಗಳು ಸಹ ಹಾನಿಯಾಗಿದೆ ಎಂದು ತಿಳಿಸಿದರು.ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಿದ್ದರೆ, ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಹಾಕಿ ರೈತರಿಗೆ ಸಣ್ಣಮಟ್ಟಿನ ಸಹಾಯ ಮಾಡುವ ಕೆಲಸ ಮಾಡಬಹುದಾಗಿತ್ತು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಕರ್ತವ್ಯ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಿಕ್ಕಾಟದಿಂದ ರಾಜ್ಯದ ರೈತರಿಗೆ ಸಮಸ್ಯೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ತಿಕ್ಕಾಟದ ಪ್ರಶ್ನೆಯೇ ಇಲ್ಲ. ಕರ್ನಾಟಕ ಈ ದೇಶದ ಒಂದು ರಾಜ್ಯ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಬರಗಾಲಕ್ಕೆ ಸಂಬಂಧಿಸಿದಂತೆ ಒಂದು ಗೈಡ್‌ಲೈನ್ಸ್ ಇದ್ದು, ಬರಪೀಡಿತ ರಾಜ್ಯ ಎಂದು ಘೋಷಣೆ ಮಾಡಿದ ಮೇಲೆ ಅದಂತೆ ನಡೆದುಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದರು.ಪರಿಹಾರಕ್ಕೆ ವಿಳಂಬವೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿಳಂಬ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೀತ್ ಶಾ ಅವರನ್ನು ಕೇಳಬೇಕು. ಚುನಾವಣೆ ಸಂದರ್ಭದಲ್ಲಿ ಇವರಿಬ್ಬರು ರಾಜ್ಯಕ್ಕೆ ಸುಮಾರು 20ಸಾರಿ ಬಂದಿದ್ದರು. ಆದರೆ, ಈಗ ಕೇಂದ್ರ ಕೃಷಿ ಸಚಿವರು ನಮ್ಮ ಸಮಸ್ಯೆ ಹೇಳಿಕೊಳ್ಳಲು ಭೇಟಿಗೆ ಸಮಯವನ್ನೇ ನೀಡುತ್ತಿಲ್ಲ. ಬರಿ ಅಧಿಕಾರಿಗಳನ್ನು ಭೇಟಿ ಮಾಡಿಕೊಂಡು ಬರಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿಯಿಂದ ರಾಜ್ಯದಿಂದ 25 ಸಂಸದರು ಆಯ್ಕೆಯಾಗಿದ್ದಾರೆ. ಈ ಬಾರಿ ಬರಗಾಲದ ಸಂದರ್ಭದಲ್ಲಿ ಮಾತ್ರವಲ್ಲ, ಹೋದ ವರ್ಷ ಅತಿವೃಷ್ಟಿ ಸಂದರ್ಭದಲ್ಲಿ, ಈ ಹಿಂದೆ ಕೊರೋನಾ ಸಂದರ್ಭದಲ್ಲಿ ಸಹ ಇವ್ಯಾರು ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ನೆಲ, ಜಲ, ಭಾಷೆ, ಕಾರ್ಮಿಕರು ರೈತರ ವಿಚಾರದಲ್ಲಿ ಇವರ್‍ಯಾರು ಮಾತನಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇದೇ ವೇಳೆ ತಾಲೂಕಿನ ಜೆ.ಬ್ಯಾಡರಹಳ್ಳಿ, ವಡ್ಡರಹಳ್ಳಿಯಲ್ಲಿ ಸಹ ಜಿಲ್ಲಾ ಉಸ್ತುವಾರಿ ಸಚಿವರು ಬರಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ರವಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಕಾಂಗ್ರೆಸ್ ಮುಖಂಡರಾದ ಶಿವಮಾದು, ಪಿ.ಡಿ.ರಾಜು ಇತರರು ಇದ್ದರು.