ಸಾರಾಂಶ
ಲಕ್ಷ್ಮೇಶ್ವರ: ಸಾಂಪ್ರದಾಯಿಕ ಸಗಣಿ ಗೊಬ್ಬರಗಳ ಜತೆ ಟ್ರೈಕೋಡರ್ಮಾ ಎಂಬ ಲಘು ಪೋಶಕಾಂಶಗಳನ್ನು ಹೊಲದಲ್ಲಿ ಹರಡುವ ಮೂಲಕ ನಿಮ್ಮ ಬೆಳೆಗಳಿಗೆ ಬರುವ ವಿವಿಧ ರೋಗ ತಡಗಟ್ಟಲು ಸಾಧ್ಯ ಎಂದು ಗದಗ ಜಿಲ್ಲಾ ಕೃಷಿ ನಿರ್ದೇಶಕಿ ತಾರಾಮಣಿ ಹೇಳಿದರು.
ಸಮೀಪದ ಗೊಜನೂರ ಗ್ರಾಮದಲ್ಲಿ ಶುಕ್ರವಾರ ನಡೆದ ಸುರಕ್ಷಿತ ಕೀಟನಾಶಕಗಳ ಬಳಕೆ ಹಾಗೂ ರೈತರಿಗೆ ಡ್ರೋಣ ಮೂಲಕ ಕ್ರಿಮಿನಾಶಕಗಳ ಬಳಕೆ ಕುರಿತ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ರೈತರು ತಾವು ಬೀಜ ಬಿತ್ತುವ ಮೊದಲು ಬೀಜೋಪಚಾರ ಮಾಡುವ ಮೂಲಕ ಕೊಳೆ ರೋಗ, ಸಸಿ ರೋಗ ನಿರೋಧಕ ಶಕ್ತಿ ವರ್ಧಿಸುವುದು, ಜೈವಿಕ ಶೀಲೀಂಧ್ರಗಳ ಬೆಳವಣಿಗೆಗೆ ಟ್ರೈಕೋಡರ್ಮಾ ಉಪಯೋಗಿಸಿ ಬಿತ್ತನೆ ಮಾಡುವುದು ಅಗತ್ಯವಾಗಿದೆ. ರೈತರು ತಾವು ಬಿತ್ತದ ಬೆಳೆಗಳಿಗೆ ಬೆಳೆ ವಿಮೆ ಮಾಡಿಸುವ ಮೂಲಕ ಅತಿವೃಷ್ಟಿ ಹಾಗೂ ಅನಾವೃಷ್ಟಿಗಳಿಂದ ಆಗುವ ಹಾನಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಸಿಗುವ ಪ್ರಾಮಾಣಿಕರಿಸಿ ಬಿತ್ತನೆ ಬೀಜ ಬಿತ್ತುವ ಮೂಲಕ ಉತ್ತಮ ಇಳುವರಿ ಪಡೆಯಲು ಸಾಧ್ಯ. ರೈತರು ಕೃಷಿ ಯಂತ್ರೋಪಕರಣಗಳಿಗಾಗಿ ಮೊದಲು ನೋಂದಾಯಿಸಿಕೊಳ್ಳುವ ಮೂಲಕ ಯಂತ್ರಗಳ ಉಪಯೋಗ ಪಡೆದುಕೊಳ್ಳಬೇಕು, ತುಂತುರು ನೀರಾವರಿ ಘಟಕಗಳಿಗೆ ಸರ್ಕಾರ ಸಹಾಯಧನ ನೀಡುತ್ತಿದ್ದು, ನೀರಾವರಿ ಮಾಡುವ ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಗದಗ ಜಿಲ್ಲಾ ಕೃಷಿ ಉಪನಿರ್ದೇಶಕಿ ಸ್ಪೂರ್ತಿ ಮಾತನಾಡಿ, ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸುವ ಮೂಲಕ ಅಕಾಲಿಕ ಹಾನಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.ಈ ವೇಳೆ ಶಿರಹಟ್ಟಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ ರೇವಣೆಪ್ಪ ಮನಗೂಳಿ, ಲಕ್ಷ್ಮೇಶ್ವರ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ ನರಸಮ್ಮನವರ, ಗೊಜನೂರ ಗ್ರಾಪಂ ಅಧ್ಯಕ್ಷೆ ನೀಲವ್ವ ಮಾದಾರ, ಎಸ್.ಬಿ. ಸೊರಟೂರ, ಯಲ್ಲಪ್ಪಗೌಡ ಪಾಟೀಲ, ಈರಣ್ಣ ಅಣ್ಣಿಗೇರಿ, ಬಸವರಾಜ ಶಿಗ್ಲಿ, ಅನಿತಾ ಕುರ್ತಕೋಟಿ, ಟಾಕಕಪ್ಪ ಸಾತಪುತೆ, ಚನ್ನಪ್ಪ ಷಣ್ಮುಖಿ, ಯಲ್ಲಪ್ಪ ಮೋಡಿ, ಮಹಾಂತಯ್ಯ ಪ್ರಭಯ್ಯನವರಮಠ, ಕಲ್ಲನಗೌಡ ಪಾಟೀಲ, ಶಿವರಾಜಗೌಡ ಪಾಟೀಲ, ಪಿ.ಕೆ. ಹೊನ್ನಪ್ಪನವರ, ಹನಮಂತ ಬರದ್ವಾಡ, ಪರಪ್ಪ ಸಂಶಿ, ಶಂಭುಲಿಂಗಪ್ಪ ಪಾಟೀಲ, ಶಂಕ್ರಪ್ಪ ಸೊರಟೂರ, ಸಂತೋಷ ಮಾಡಳ್ಳಿ, ಶಿವಪುತ್ರಪ್ಪ ತಾರಿಕೊಪ್ಪ, ಶಿವಾನಂದ ಲಿಂಗಶೆಟ್ಟಿ, ಅಂದಾನಗೌಡ ಪಾಟೀಲ ಇದ್ದರು.