ಸಾರಾಂಶ
ಯಲ್ಲಾಪುರ: ದೇಶ ಸುಭಿಕ್ಷವಾಗಿರಬೇಕೆಂದರೆ ದೇಶ ಕಾಯುವ ಸೈನಿಕ, ಅನ್ನ ನೀಡುವ ಕೃಷಿಕ, ಕಾರ್ಮಿಕ ಚೆನ್ನಾಗಿರಬೇಕು. ಉದ್ಯಮಗಳಿಂದ ವಸ್ತು ಉತ್ಪಾದಿಸಿ ಹಣಗಳಿಸಬಹುದು. ಆದರೆ ಹಣದಿಂದ ಬೆಳೆ ಖರೀದಿಸಬಹುದು. ಬೆಳೆ ಉತ್ಪಾದಿಸಲು ಸಾಧ್ಯವಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಅವರು ಶನಿವಾರ ಪಟ್ಟಣದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆವರಣದಲ್ಲಿ ಹಾಲು ಕರೆಯುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ, ರೈತ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.ಕೃಷಿಕ ಮತ್ತು ಜಾನುವಾರು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಹೈನುಗಾರಿಕೆಯಿಂದ ಹಾಲಿನ ಜೊತೆಗೆ ಗೊಬ್ಬರ ಕೂಡ ಲಾಭದಾಯಕವಾಗಿದೆ. ಘಟ್ಟದ ಮೇಲಿನ ಮೂರು ತಾಲೂಕುಗಳಲ್ಲಿ ಹಾಲು ಉತ್ಪಾದನೆ ಹೆಚ್ಚಿದ್ದು, ಯಲ್ಲಾಪುರ ತಾಲೂಕು ಮೂರನೇ ಸ್ಥಾನದಲ್ಲಿದೆ ಎಂದರು.
ರೈತರು ಹೆಚ್ಚು ಹಾಲು ಉತ್ಪಾದನೆಯನ್ನು ಮಾಡಿದರೆ ಪ್ರತ್ಯೇಕ ಹಾಲು ಒಕ್ಕೂಟ ಸಿಗುವ ಮೂಲಕ ರೈತರಿಗೆ ಅನುಕೂಲವಾಗಲಿದೆ. ಹಲವು ಒತ್ತಡದ ನಡುವೆಯೂ ₹3 ಕೋಟಿ ವೆಚ್ಚದ ಜಿಲ್ಲೆಗೆ ಬಂದ ಸುಸಜ್ಜಿತ ಪಾಲಿಕ್ಲಿನಿಕ್ ಯಲ್ಲಾಪುರದಲ್ಲಿ ನಿರ್ಮಿಸಲಾಗಿದ್ದು, ಚೆನ್ನಾಗಿ ಕಾರ‍್ಯ ನಿರ್ವಹಿಸುತ್ತಿದೆ. ಇದೀಗ ಎಕ್ಸ್‌ರೇ ಮಷಿನ್ ಕೂಡ ಬಂದಿದೆ. ಇದು ರೈತರಿಗೆ ಉಪಯೋಗ ಆಗಲಿದೆ ಎಂದರು.ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ಉಮೇಶ ಕೊಂಡಿ ಮಾತನಾಡಿ, ಇಲಾಖೆಯ ಯೋಜನೆಗಳ ಕುರಿತು ಪಾಲಿ ಕ್ಲಿನಿಕ್ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಖಾರೇವಾಡದಲ್ಲಿ ನಡೆದ ಜಾನುವಾರು ಪ್ರದರ್ಶನದಲ್ಲಿ ಪ್ರಶಸ್ತಿ ಪಡೆದ ರೈತರನ್ನು ಸನ್ಮಾನಿಸಲಾಯಿತು. ಸೇವಾ ನಿವೃತ್ತಿ ಹೊಂದಿದ ಸಿಬ್ಬಂದಿ ಉದಯ ಶೆಡಗೇರಿ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ ಅಂಗಡಿ, ಪ್ರಮುಖರಾದ ವಿಜಯ ಮಿರಾಶಿ, ಡಾ. ರವಿ ಭಟ್ಟ ಬರಗದ್ದೆ ವೇದಿಕೆಯಲ್ಲಿದ್ದರು. ರೇಷ್ಮಾ, ರೇಖಾ ಪ್ರಾರ್ಥಿಸಿದರು. ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಸುಬ್ರಾಯ ಭಟ್ಟ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು, ಶಿಕ್ಷಕ ಚಂದ್ರಹಾಸ ನಾಯ್ಕ ನಿರೂಪಿಸಿದರು.