ಸಮರ್ಪಕವಾಗಿ ಬೆಳೆ ಸಮೀಕ್ಷೆ ಮಾಡಿಲ್ಲ: ಆರೋಪ

| Published : Sep 25 2025, 01:01 AM IST

ಸಾರಾಂಶ

ರೈತ ಸಮುದಾಯ ಮತ್ತೆ ಎಫ್ಐಡಿ ಪರಿಶೀಲಿಸಲು ಹೊಲದ ಉತಾರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಝೆರಾಕ್ಸ್ ಹಿಡಿದುಕೊಂಡು ಕೃಷಿ ಇಲಾಖೆ ಕಚೇರಿಯ ಕೊಠಡಿ ಎದುರಿಗೆ ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತಿದ್ದು ಕಂಡುಬಂದಿತು.

ನರಗುಂದ: ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ತಾಲೂಕಿನಲ್ಲಿ ಮುಂಗಾರು ಬೆಳೆ ಸಂಪೂರ್ಣ ಹಾನಿಯಾಗಿ ಸಮೀಕ್ಷೆ ಮುಗಿದಿದೆ. ಹಾನಿಯಾದ ರೈತರ ಹೆಸರು ಎಫ್ಐಡಿ ಸಂಖ್ಯೆ, ಸರ್ವೇ ನಂಬರ್ ಸಹಿತ ಆಯಾ ಗ್ರಾಪಂಯಲ್ಲಿ ಬೆಳೆಹಾನಿಯಾದ ರೈತರ ಹೆಸರನ್ನು ಪ್ರಕಟಿಸಲಾಗಿದೆ. ಆದರೆ ಕೆಲವು ಬೆಳೆಹಾನಿಯಾದ ರೈತರ ಹೆಸರೇ ಇಲ್ಲ. ಎಫ್ಐಡಿ ಇಲ್ಲ. ಇದರಿಂದ ತಮ್ಮ ಮಾಹಿತಿ ಇಲ್ಲದ ರೈತರು ಕಾರಣ ಕೇಳಲು ಕೃಷಿ ಇಲಾಖೆ ಕಚೇರಿಗೆ ಅಲೆದಾಡುತ್ತಿರುವುದು ಬುಧವಾರ ಕಂಡುಬಂದಿತು.

ಇದಕ್ಕಾಗಿ ಸಮೀಕ್ಷೆ ಮಾಡಿದ ಕೃಷಿ ಹಾಗೂ ಕಂದಾಯ ಇಲಾಖೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಮುದಾಯ ಮತ್ತೆ ಎಫ್ಐಡಿ ಪರಿಶೀಲಿಸಲು ಹೊಲದ ಉತಾರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಝೆರಾಕ್ಸ್ ಹಿಡಿದುಕೊಂಡು ಕೃಷಿ ಇಲಾಖೆ ಕಚೇರಿಯ ಕೊಠಡಿ ಎದುರಿಗೆ ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತಿದ್ದು ಕಂಡುಬಂದಿತು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ರೈತರು ನಮ್ಮ ಎಫ್ಐಡಿ ಇದೆ. ಬೆಳೆಹಾನಿಯೂ ಆಗಿದೆ. ಆದರೆ ನಮ್ಮ ಹೆಸರೇ ಇಲ್ಲ. ಇದರ ಬಗ್ಗೆ ಗ್ರಾಮ ಆಡಳಿತಾಧಿಕಾರಿ ಕೇಳಿದರೆ ಕೃಷಿ ಇಲಾಖೆಯವರನ್ನು ಕೇಳಿ ಎನ್ನುತ್ತಾರೆ. ಮೊದಲೇ ಸಂಪೂರ್ಣ ಬೆಳೆ ಹಾನಿಯಾಗಿದೆ. ಪರಿಹಾರ ಕೊಡುತ್ತಾರೋ ಬಿಡತಾರೋ ಗೊತ್ತಿಲ್ಲ ಎಂದು ರೈತರು ಸರ್ಕಾರದ ವಿರುದ್ಧ ಕಿಡಿಕಾರಿದರು.ಈ ಸಂದರ್ಭದಲ್ಲಿ ಸುರಕೋಡದ ಶಿವಾನಂದ ಸುಗ್ಗಿ, ಕಣಕಿಕೊಪ್ಪದ ಹೇಮರಡ್ಡಿ ಮೂಗನೂರ, ಸಿದ್ದಾಪುರದ ಬಸನಗೌಡ ಪಾಟೀಲ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದ ರೈತರು ಇದ್ದರು.ಕುಡಿಯುವ ನೀರಿಗಾಗಿ ಪುರಸಭೆಗೆ ಮುತ್ತಿಗೆ

ಲಕ್ಷ್ಮೇಶ್ವರ: ಪಟ್ಟಣದ 19ನೇ ವಾರ್ಡಿನಲ್ಲಿ ಕಳೆದ 20 ದಿನಗಳಿಂದ ಕುಡಿಯುವ ನೀರು ಬರದಿರುವ ಹಿನ್ನೆಲೆಯಲ್ಲಿ 19ನೇ ವಾರ್ಡಿನ ಮಹಿಳೆಯರು ಬುಧವಾರ ಪುರಸಭೆಗೆ ದೌಡಾಯಿಸಿ ಪುರಸಭೆಯ ಅಧಿಕಾರಿಗಳು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಚೆನ್ನಮ್ಮ ಪಾಟೀಲ ಮಾತನಾಡಿ, ಕಳೆದ 20 ದಿನಗಳಿಂದ ನಮ್ಮ ವಾರ್ಡಿನಲ್ಲಿ ಕುಡಿಯುವ ನೀರು ಬಂದಿಲ್ಲ. ಕುಡಿಯುವ ನೀರಿಗಾಗಿ ಪುರಸಭೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸಿಲ್ಲ. ಕಳೆದ 20 ದಿನಗಳಿಂದ ಕುಡಿಯುವ ನೀರು ಬರುತ್ತಿಲ್ಲ. ಮಳೆಗಾಲದಲ್ಲಿ 20 ದಿನಗಳಿಗೊಮ್ಮೆ ನೀರು ಬಂದರೆ ಹೇಗೆ? ಕುಡಿಯುವ ನೀರಿಗಾಗಿ ಅಧಿಕಾರಿಗಳಿಗೆ ಫೋನ್ ಮಾಡಿದರೆ, ಅಲ್ಲಿ ಪೈಪ್ ಒಡೆದಿದೆ, ಕರೆಂಟ್ ಇಲ್ಲ ಎನ್ನುವ ಸಬೂಬು ನೀಡುತ್ತಾರೆ. ಪುರಸಭೆಯ ಅಧಿಕಾರಿಗಳು ಕುಡಿಯುವ ನೀರು ಕೊಡಲಾಗದಿದ್ದರೆ ಮನೆಗೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪ್ರವೀಣ ಸಾಲಿ, ಹನುಮಂತಪ್ಪ ಕೊಪ್ಪದ, ಚನ್ನಪ್ಪ ಬಳಗಾನೂರ, ಕೊಟ್ರೇಶ್ ಗೌಡ ಪಾಟೀಲ, ಚೆನ್ನಮ್ಮ ಪಾಟೀಲ, ಈರಮ್ಮ ಜಗಲಿ, ನೀಲಮ್ಮ ಪಾಟೀಲ, ರೇಣುಕಾ ಪಾಟೀಲ ಸೇರಿದಂತೆ ಅನೇಕರು ಇದ್ದರು.