ಕುಷ್ಟಗಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ತಾಲೂಕಿನ ಚಳಗೇರ ಸಮೀಪದ ರೈತರ ಜಮೀನುಗಳಿಗೆ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ, ಶಾಸಕ ದೊಡ್ಡನಗೌಡ ಪಾಟೀಲ, ಜಂಟಿ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ತಹಸೀಲ್ದಾರರು ಹಾಗೂ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿತು.
ಕಳೆದ ಒಂದು ತಿಂಗಳಿನಿಂದ ಸಮರ್ಪಕ ಮಳೆಯಾಗದ ಪರಿಣಾಮ ರೈತರು ಬಿತ್ತನೆ ಮಾಡಿದ್ದ ತೊಗರಿ, ಸೂರ್ಯಕಾಂತಿ, ಹೆಸರು, ಮೆಕ್ಕೆಜೋಳ ಹಾಗೂ ಸಜ್ಜೆ ಬೆಳೆಗಳು ಸಂಪೂರ್ಣವಾಗಿ ಒಣಗುವ ಹಂತ ತಲುಪಿವೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿರುವುದನ್ನು ವೀಕ್ಷಿಸಿ ರೈತರ ಸಮಸ್ಯೆ ಆಲಿಸಿದರು.ಪರಿಶೀಲನೆ ವೇಳೆ ರೈತರು ತಮ್ಮ ಜಮೀನುಗಳಲ್ಲಿ ಒಣಗುತ್ತಿರುವ ಬೆಳೆ ತೋರಿಸಿ, ಬಿತ್ತನೆ, ಬೀಜ, ಗೊಬ್ಬರ ಹಾಗೂ ಕೃಷಿ ಕಾರ್ಯಗಳಿಗೆ ಮಾಡಿದ ವೆಚ್ಚವೂ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು. ಸತತ ಮಳೆ ಕೊರತೆಯಿಂದ ಬೆಳೆ ಉಳಿಸಿಕೊಳ್ಳುವ ಎಲ್ಲ ನಿರೀಕ್ಷೆ ಕಮರಿದ್ದು, ಸರ್ಕಾರ ತಕ್ಷಣ ಬೆಳೆ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಮನವಿ ಮಾಡಿದರು.
ಬೆಳೆಗಳ ಸ್ಥಿತಿಗತಿ ವೀಕ್ಷಿಸಿದ ಜಿಲ್ಲಾಧಿಕಾರಿಗಳು, ನೈಜ ಮಾಹಿತಿ ಆಧರಿಸಿ ಸಮಗ್ರ ವರದಿ ಸಿದ್ಧಪಡಿಸುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಬೆಳೆ ಹಾನಿಯ ವಿವರ ಸರ್ಕಾರಕ್ಕೆ ಸಲ್ಲಿಸಿ, ರೈತರಿಗೆ ಪರಿಹಾರ, ಬೆಳೆ ವಿಮೆ ಹಾಗೂ ಅಗತ್ಯ ನೆರವು ದೊರಕಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಸಮಸ್ಯೆ ಸರ್ಕಾರದ ಗಮನಕ್ಕೆ ತಂದು ಅಗತ್ಯ ನೆರವು ದೊರಕಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪರಿಶೀಲನೆ ವೇಳೆ ಜಂಟಿ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ತಹಸೀಲ್ದಾರರು, ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಸ್ಥಳೀಯ ರೈತರು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.