ಸಾರಾಂಶ
ಎಸ್.ಜಿ. ತೆಗ್ಗಿನಮನಿ
ನರಗುಂದ: ತಾಲೂಕಿನಲ್ಲಿ ಮೂರ್ನಾಲ್ಕು ವಾರದಿಂದ ಮಳೆ ಕೈಕೊಟ್ಟಿದ್ದು, ಮುಂಗಾರಿಗೆ ಬಿತ್ತನೆಯಾಗಿದ್ದ ಹೆಸರು ಕಾಳು, ಗೋವಿನಜೋಳ, ಬಿ.ಟಿ. ಹತ್ತಿ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿವೆ.ಪ್ರಸಕ್ತ ವರ್ಷ ಕೃತಿಕಾ ಹಾಗೂ ಮೃಗಶಿರಾ ಮಳೆ ಉತ್ತಮವಾಗಿದ್ದರಿಂದ ತಾಲೂಕಿನ ರೈತರು ಹೆಸರು, ಗೋವಿನ ಜೋಳ, ಬಿ.ಟಿ.ಹತ್ತಿ, ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಪೈರು ನೆಲ ಬಿಟ್ಟು ಮೇಲೇಳುತ್ತಿರುವಾಗಲೇ ವರುಣದೇವ ಮೋಡದಿಂದಲೇ ಮರೆಯಾಗಿದ್ದು, ಉತ್ತಮ ಮಳೆ ಸುರಿಯುತ್ತದೆ ಎಂಬ ಬಲವಾದ ನಂಬಿಕೆಯಿಂದ ಬೀಜ ಹಾಕಿರುವ ರೈತರು ಮುಗಿಲು ಕಡೆ ಮುಖ ಮಾಡಿದ್ದಾರೆ.
ತಾಲೂಕಿನಲ್ಲಿ ಜೂನ್ ತಿಂಗಳಲ್ಲಿ ವಾಡಿಕೆ ಮಳೆ 89 ಮಿಲಿ ಮೀಟರ್ ಇದ್ದು, ವಾಡಿಕೆಗಿಂತ ಹೆಚ್ಚು 97 ಮಿಲಿ ಮೀಟರ್ ಮಳೆ ಸುರಿದಿದೆ. ಆದರೆ ಈ ಮಳೆ ಜೂನ್ 11ರಂದು ಒಂದೇ ದಿನ ಸುರಿದಿದೆ. ನಂತರ ಮಳೆಯಾಗದ್ದರಿಂದ ತೇವಾಂಶದ ಕೊರತೆ ಉಂಟಾಗಿದೆ.ಹೆಚ್ಚು ಹೆಸರು ಬಿತ್ತನೆ: ತಾಲೂಕಿನಲ್ಲಿ ವ್ಯಾಪಕವಾಗಿ ಹೆಸರು ಬಿತ್ತನೆ ಆಗಿದ್ದು, ನಿರೀಕ್ಷೆಯಂತೆ ಬೆಳೆಯುತ್ತಿದೆ. ತಾಲೂಕಿನಲ್ಲಿ ನೀರಾವರಿಗೆ ಒಳಪಡುವ ಜಮೀನುಗಳಲ್ಲಿ ಸಹ ಹೆಸರು ಬಿತ್ತನೆ ಮಾಡಲಾಗಿದೆ. ಇದು ರೈತನಿಗೆ ವರದಾನವಾಗಬಹುದು ಎಂಬ ಮಹದಾಸೆ ಇದೆ. ಈ ಭಾಗದ ರೈತ ಸಮುದಾಯ ನೆಚ್ಚಿಕೊಂಡ ಮಲಪ್ರಭಾ ಜಲಾಶಯ ನಿರೀಕ್ಷಿತ ಮಟ್ಟದಲ್ಲಿ ಭರ್ತಿಯಾಗುತ್ತಿಲ್ಲ. ರೈತ ಸಾಲದ ಬಲೆಯಲ್ಲಿ ಸಿಲುಕಿ ನರಳುತ್ತಿದ್ದಾನೆ.
ಕಳೆದೊಂದು ತಿಂಗಳದಿಂದ ಹಗಲು ರಾತ್ರಿ ಒಣ ಹವೆ ಇದ್ದು, ಮುಂಗಾರಿ ಹಂಗಾಮಿನಲ್ಲೇ ಮಳೆ ಬಾರದಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ.ಬಿತ್ತನೆ ವಿವರ: ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಹೆಸರು 16700 ಹೆಕ್ಟೇರ್, ಗೋವಿನ ಜೋಳ 13000 ಹೆ, ಬಿ.ಟಿ. ಹತ್ತಿ 4680 ಹೆ, ತೊಗರಿ 250 ಹೆ, ಸೂರ್ಯಕಾಂತಿ 240 ಹೆ ಸೇರಿ ಒಟ್ಟು 34870 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಬೇಕಾದ ಉತ್ತಮ ಮಳೆಯಾಗಿದ್ದರಿಂದ ಪ್ರತಿ 1 ಎಕರೆಗೆ 20 ಸಾವಿರ ರು. ಖರ್ಚು ಮಾಡಿ ಬಿತ್ತನೆ ಮಾಡಿದ್ದೇವೆ. ಆದರೆ ಸದ್ಯ ಮಳೆರಾಯ ಕೈ ಕೊಟ್ಟಿದ್ದರಿಂದ ನಮ್ಮನು ಆ ದೇವರೇ ಕಾಯಬೇಕು ಎಂದು ಹದಲಿ ರೈತ ಬಸವಣ್ಣಪ್ಪ ಸುಂಕದ ಹೇಳಿದರು.