ಸಾರಾಂಶ
- - -
(ಸರ್ಕಾರಕ್ಕೆ ಜಿಲ್ಲಾಡಳಿತ ವರದಿ)- - -
ಗಣೇಶ್ ತಮ್ಮಡಿಹಳ್ಳಿ ಕನ್ನಡಪ್ರಭ ವಾರ್ತೆ ಶಿವಮೊಗ್ಗಮಲೆನಾಡು ಜಿಲ್ಲೆ ಎಂದೇ ಹೆಸರಾದ ಶಿವಮೊಗ್ಗದಲ್ಲಿ ತೀವ್ರ ಬರ ಪರಿಸ್ಥಿತಿ ಉಲ್ಬಣಿಸಿದ್ದು, ಮಳೆ ಕೊರತೆ ನಡುವೆಯೂ ಶೇ.90ರಷ್ಟು ಬಿತ್ತನೆಯಾಗಿದೆ. ಬರಗಾಲದಿಂದ ಒಟ್ಟಾರೆ ₹420 ಕೋಟಿ ಮೌಲ್ಯದಷ್ಟು ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಮುಂಗಾರು, ಮುಂಗಾರುಪೂರ್ವ ಮಳೆ ಕೊರತೆ ನಡುವೆಯೂ 1,18,354 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಬಿತ್ತನೆ ಆಗಿದ್ದವು. ಈ ಪೈಕಿ ಮಳೆ ಕೊರತೆಯಿಂದ 79,770 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಗೀಡಾಗಿದೆ. ಮಳೆ ಆಶ್ರಯದಲ್ಲಿ ಬಿತ್ತನೆಯಾಗಿದ್ದ ಮೆಕ್ಕೆಜೋಳ, ಭತ್ತ ಬೆಳೆಯೇ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೀಡಾಗಿದೆ. ₹191 ಕೋಟಿ ಮೊತ್ತದ ಭತ್ತ ಬೆಳೆ ಹಾಳಾಗಿದ್ದು, ₹230 ಕೋಟಿಯಷ್ಟು ಮೆಕ್ಕೆಜೋಳ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.ಹವಾಮಾನ ವೈಪರಿತ್ಯ ಭತ್ತ ಹಾಗೂ ಮೆಕ್ಕೆಜೋಳ ಬೆಳೆಯನ್ನು ಈ ಬಾರಿ ಇನ್ನಿಲ್ಲದೇ ಕಾಡಿದೆ. ಮೆಕ್ಕೆಜೋಳ ಬೆಳೆಗೆ ಅಗತ್ಯವಾಗಿ ಬೇಕಿದ್ದ ಸಂದರ್ಭ ಮಳೆ ಬಾರದೇ, ಕೊಯ್ಲು ಸಂದರ್ಭದಲ್ಲಿ ಮಳೆ ಬಂದು ಇನ್ನಷ್ಟು ತೊಂದರೆ ಉಂಟುಮಾಡಿದೆ. ಒಟ್ಟಾರೆ ಈ ಬಾರಿ ಮಳೆಕೊರತೆ ಎದುರಾಗಿದ್ದು, ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ತೀವ್ರ ಬರ ಆವರಿಸಿದೆ.
41529 ಹೆಕ್ಟೇರ್ ಭತ್ತ ಬೆಳೆ ನಷ್ಟ:ಜಿಲ್ಲೆಯ ಎಲ್ಲ ತಾಲೂಕುಗಳನ್ನು ಸರ್ಕಾರ ಈಗಾಗಲೇ ಬರಪೀಡಿತ ಎಂದು ಘೋಷಣೆ ಮಾಡಿದೆ. ಮುಂಗಾರು ವಿಫಲಗೊಂಡ ಕಾರಣ ತಾಲೂಕಿನ ಪ್ರಮುಖ ಬೆಳೆಗಳಲ್ಲಿ ಒಂದಾದ ಭತ್ತ ಬೆಳೆ ನಷ್ಟದ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಈ ಬಾರಿ 77640 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಮಳೆ ಕೊರತೆ ಮಧ್ಯೆಯೂ ಜಿಲ್ಲೆಯಲ್ಲಿ ಶೇ.90ರಷ್ಟು ಬಿತ್ತನೆ ಕಾರ್ಯ ನಡೆದಿತ್ತು. ಒಟ್ಟಾರೆ 72135 ಹೆಕ್ಟೇರ್ ಬಿತ್ತನೆಯಾಗಿದೆ. ಈ ಬಾರಿ ಮಳೆ ಕೊರತೆಯಿಂದ ಮಕ್ಕಿಗದ್ದೆಯಲ್ಲಿ (ದಿಬ್ಬ ಪ್ರದೇಶ) ಭತ್ತ ಬೆಳೆಯುವುದನ್ನು ರೈತರು ಕಡಿಮೆ ಮಾಡಿದ್ದಾರೆ. ಜಿಲ್ಲೆ ಹಲವೆಡೆ ಮಳೆ ಆಶ್ರಯಿಸಿ ಏಕಬೆಳೆ ಬೆಳೆಯಲಾಗುತ್ತಿದೆ. ಈ ವರ್ಷ ಅನೇಕ ಕಡೆಗಳಲ್ಲಿ ಬೆಳೆ ಬೆಳೆಯಲು ನೀರಿಗಾಗಿ ಸಮೀಪದ ಹಳ್ಳವನ್ನು ಆಶ್ರಯಿಸಲಾಗಿದೆ. ಈ ಬಾರಿ ಶೇ.37ರಷ್ಟು ಮಳೆ ಕೊರತೆಯಾಗಿದೆ. ಬಿತ್ತನೆ ಆಗಿರುವ ಒಟ್ಟು ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ 41529 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆ ನಷ್ಟವಾಗಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ನೀಡಿದೆ. ಇದರಲ್ಲಿ 29785 ಹೆಕ್ಟೇರ್ ಮಳೆಯಾಶ್ರಿತ ಬೆಳೆ ಹಾನಿಯಾಗಿದ್ದರೆ, ನೀರಾವರಿ ಪ್ರದೇಶದಲ್ಲಿ ಬೆಳೆದಿದ್ದ 11744 ಹೆಕ್ಟೆರ್ ಬೆಳೆ ನಷ್ಟ ಆಗಿರುವುದು ಗಮನಾರ್ಹ.
ಶೇ.85ರಷ್ಟು ಮೆಕ್ಕೆಜೋಳ ಬೆಳೆ ನಷ್ಟ:ಜಿಲ್ಲೆಯಲ್ಲಿ ಭತ್ತವನ್ನು ಬಿಟ್ಟರೆ ಮೆಕ್ಕೆಜೋಳವನ್ನು ಹೆಚ್ಚು ಬೆಳೆಯಲಾಗುತ್ತದೆ. ಈ ಬಾರಿ 48770 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮುಂಗಾರುಪೂರ್ವ ಹಾಗೂ ಮುಂಗಾರು ಮಳೆ ಕೊರತೆಯಿಂದಾಗಿ 44577 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ಇದರಲ್ಲಿ ಮಳೆ ಕೊರತೆಯಿಂದಾಗಿ ಶೇ.85ರಷ್ಟು ಮೆಕ್ಕೆಜೋಳ ಬೆಳೆ ನಷ್ಟವಾಗಿದೆ. ಬಿತ್ತನೆಯಾಗಿದ್ದ 44577 ಹೆಕ್ಟೇರ್ ಪೈಕಿ 38240 ಹೆಕ್ಟೇರ್ ಬೆಳೆ ಬರದಿಂದ ನಷ್ಟವಾಗಿದೆ. ಇದರಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ 16210 ಹೆಕ್ಟೇರ್, ಶಿವಮೊಗ್ಗ ತಾಲೂಕಿನಲ್ಲಿ 11420 ಹೆಕ್ಟೇರ್, ಸೊರಬ 7912 ಹೆಕ್ಟೇರ್, ಸಾಗರದಲ್ಲಿ 1723 ಹೆಕ್ಟೇರ್ ಪ್ರದೇಶದ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
- - - ಕೋಟ್ ಆನ್‌ಲೈನ್‌ನಲ್ಲಿ ಬರದಿಂದ ಬೆಳೆ ನಷ್ಟ ಸಮೀಕ್ಷೆ ನಡೆದಿದೆ. ಜಿಲ್ಲೆಯಲ್ಲಿ ಬರದಿಂದ ಅಂದಾಜು ₹422 ಕೋಟಿ ನಷ್ಟವಾಗಿದೆ. ಈ ವರದಿ ಸರ್ಕಾರದ ಕೈ ಸೇರಿದೆ. ಸರ್ಕಾರದಿಂದ ಇನ್ನೂ ಪರಿಹಾರ ಮೊತ್ತ ಬಿಡುಗಡೆಯಾಗಿಲ್ಲ. ರೈತರು ಬರ ಪರಿಹಾರ ಹಾಗೂ ಇನ್ನಿತರ ಯೋಜನೆಗಳಲ್ಲಿ ಸೌಲಭ್ಯ ಪಡೆಯಲು ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ತಮ್ಮ ಜಮೀನಿನ ಸರ್ವೇ ನಂಬರ್‌ಗಳಲ್ಲಿ ಸೇರಿಸಿ, ನೋಂದಣಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಸರ್ಕಾರ ಬರ ಪರಿಹಾರ ಮೊತ್ತ ಹಾಕಲಾಗುತ್ತದೆ- ಡಾ. ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ
- - --5ಎಸ್‌ಎಂಜಿಕೆಪಿ03: ಡಾ. ಆರ್.ಸೆಲ್ವಮಣಿ