ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ಇನ್ನೇನು ದ್ರಾಕ್ಷಿ ಸೀಸನ್ ಬಂದೇ ಬಿಟ್ಟಿದೆ. ನಿಮ್ಮ ದ್ರಾಕ್ಷಿಯನ್ನು ಉತ್ತಮ ಬೆಲೆಗೆ ಖರೀದಿಸುತ್ತೇವೆ ಎಂದು ಹೇಳಿ ಬರುವ ವ್ಯಾಪಾರಿಗಳು ಮೋಸ ಮಾಡಿರುವ ಉದಾಹರಣೆ ಇಲ್ಲಿದೆ ರೈತರೆ. ನಂಬಿದ್ದ ಎಂಟು ಜನ ದ್ರಾಕ್ಷಿ ಬೆಳೆಗಾರರಿಗೆ ವ್ಯಾಪಾರಿಯೊಬ್ಬ ಬರೋಬ್ಬರಿ ಒಂದು ಕೋಟಿ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ. ವ್ಯಾಪಾರಿಯನ್ನು ನಂಬಿ ಒಣದ್ರಾಕ್ಷಿ ಕೊಟ್ಟಿದ್ದ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶಶಿಕಾಂತ ಮೆಂಡೆಗಾರ
ಕನ್ನಡಪ್ರಭ ವಾರ್ತೆ ವಿಜಯಪುರಇನ್ನೇನು ದ್ರಾಕ್ಷಿ ಸೀಸನ್ ಬಂದೇ ಬಿಟ್ಟಿದೆ. ನಿಮ್ಮ ದ್ರಾಕ್ಷಿಯನ್ನು ಉತ್ತಮ ಬೆಲೆಗೆ ಖರೀದಿಸುತ್ತೇವೆ ಎಂದು ಹೇಳಿ ಬರುವ ವ್ಯಾಪಾರಿಗಳು ಮೋಸ ಮಾಡಿರುವ ಉದಾಹರಣೆ ಇಲ್ಲಿದೆ ರೈತರೆ. ನಂಬಿದ್ದ ಎಂಟು ಜನ ದ್ರಾಕ್ಷಿ ಬೆಳೆಗಾರರಿಗೆ ವ್ಯಾಪಾರಿಯೊಬ್ಬ ಬರೋಬ್ಬರಿ ಒಂದು ಕೋಟಿ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ. ವ್ಯಾಪಾರಿಯನ್ನು ನಂಬಿ ಒಣದ್ರಾಕ್ಷಿ ಕೊಟ್ಟಿದ್ದ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದ್ರಾಕ್ಷಿ ಬೆಳೆದ ರೈತರು ಒಣದ್ರಾಕ್ಷಿ ಮಾಡಲು ಹಾಕಿದ್ದ ವೇಳೆಯೇ ತೋಟಕ್ಕೆ ಬಂದ ತಾಲೂಕಿನ ಅಲಿಯಾಬಾದ ಗ್ರಾಮದ ಒಣದ್ರಾಕ್ಷಿ ವ್ಯಾಪಾರಿ ಅಜೀತ್ ಹೂಗಾರ ಎಂಬಾತ ಅಮೊಘ ಎಂಟರಪ್ರೈಸಸ್ ಹೆಸರಿನಲ್ಲಿ ಪ್ರತಿ ಕೆಜಿಗೆ ₹150 ರಿಂದ ₹ 170 ವರೆಗೆ ಖರೀದಿಸುತ್ತೇನೆ ಎಂದು ರೈತರನ್ನು ನಂಬಿಸಿದ್ದ. ಇದನ್ನು ನಂಬಿದ ಅಲಿಯಾಬಾದ ಹಾಗೂ ಬರಟಗಿ ಗ್ರಾಮಗಳ ಸುಮಾರು ಎಂಟು ಜನ ರೈತರ ₹64 ಲಕ್ಷ ಮೌಲ್ಯದ ಒಣದ್ರಾಕ್ಷಿ ಖರೀದಿಸಿದ್ದಾನೆ. ಅದರಂತೆ ನಗರದ ಇಂಡಸ್ಟ್ರೀಯಲ್ ಏರಿಯಾದಲ್ಲಿನ ಟ್ರೇಡರ್ಸ್ ಒಬ್ಬರಿಂದ ₹35 ಲಕ್ಷ ಒಣದ್ರಾಕ್ಷಿ ಖರೀದಿಸಿ ಪರಾರಿಯಾಗಿದ್ದಾನೆ. ಒಣ ದ್ರಾಕ್ಷಿ ಖರೀದಿಸಿದ 45 ದಿನಗಳಲ್ಲಿ ಹಣ ಕೊಡುತ್ತೇನೆ ಎಂದು ನಂಬಿಸಿದ ವಂಚಕ ಅಜೀತ ಹೂಗಾರ ವರ್ಷ ಕಳೆದರೂ ಹಣ ನೀಡಿಲ್ಲ. ಇದೀಗ ಊರನ್ನೇ ಬಿಟ್ಟು ಪರಾರಿಯಾಗಿ ಫೋನ್ ಕೂಡ ಸ್ವಿಚ್‌ಆಫ್ ಮಾಡಿಕೊಂಡಿದ್ದಾನೆ.ರೈತರಿಗೆ ನಂಬಿಸಿ ಮೋಸ:
ಅಲಿಯಾಬಾದ ನಿವಾಸಿ ಅಜೀತ ಹೂಗಾರ ಮೊದಲಿಗೆ ಖರೀದಿಸಿದ್ದ ಒಣದ್ರಾಕ್ಷಿಗೆ ಮಾತುಕೊಟ್ಟಂತೆ ವ್ಯಾಪಾರ ಮಾಡಿಕೊಂಡು ಬಂದು ರೈತರಿಗೆ ಹಣ ಕೊಟ್ಟಿದ್ದಾನೆ. ಬಳಿಕ 2024 ಮಾರ್ಚ್, ಏಪ್ರಿಲ್‌ನಲ್ಲಿ ಖರೀದಿಸಿದ್ದ ಕೋಟಿ ಮೌಲ್ಯದ ಒಣದ್ರಾಕ್ಷಿ ಸಮೇತ ಪರಾರಿಯಾಗಿದ್ದಾನೆ. ತಮ್ಮೂರಿನವನೇ ಎಂದು ನಂಬಿದ್ದ ದ್ರಾಕ್ಷಿ ಬೆಳೆಗಾರರು ನಿತ್ಯ ಆತನ ದಾರಿಯನ್ನೇ ಕಾಯುತ್ತ ಗೋಳಾಡುತ್ತಿದ್ದಾರೆ.ಯಾರಿಗೆ ಎಷ್ಟು ವಂಚನೆ?:
ರೈತ ಶ್ರೀಕಾಂತ ಜಾಧವರಿಂದ ₹ 9 ಲಕ್ಷ ಮೌಲ್ಯದ 6672 ಕೆಜಿ, ಸಂತೋಷ ಕಡಬಾಗಿಯಿಂದ ₹ 9.71 ಲಕ್ಷ ಮೌಲ್ಯದ 8000 ಕೆಜಿ, ಅರ್ಜುನ ನಿಂಬಾಳರಿಂದ ₹ 11.50 ಲಕ್ಷ ಮೌಲ್ಯದ 8128 ಕೆಜಿ, ರಮೇಶ ನಿಂಬಾಳಕರರಿಂದ ₹ 11.60 ಲಕ್ಷ ಮೌಲ್ಯದ 6825 ಕೆಜಿ, ನಿಂಗಪ್ಪ ಪೂಜಾರಿಯಿಂದ ₹ 14 ಲಕ್ಷ ಮೌಲ್ಯದ 9405 ಕೆಜಿ, ನಾಗಪ್ಪ ಪಡಗಾನೂರರಿಂದ ₹ 6ಲಕ್ಷ ಮೌಲ್ಯದ 4500 ಕೆಜಿ, ನಾಗಪ್ಪ ನಿಂಬಾಳರಿಂದ ₹ 4.52 ಲಕ್ಷ ಮೌಲ್ಯದ 3015 ಕೆಜಿ, ತಿಪ್ಪಣ್ಣ ವಾಲಿಕಾರರಿಂದ ₹ 4.50 ಲಕ್ಷ ಮೌಲ್ಯದ 3000ಕೆಜಿ ವಂಚಿಸಿದ್ದಾನೆ. ಇದಲ್ಲದೆ ಟ್ರೇಡರ್ಸ್‌ನಿಂದ ₹ 35.84 ಲಕ್ಷ ಮೌಲ್ಯದ 18,928ಕೆಜಿ ವಂಚಿಸಿದ್ದಾನೆ. ಆತ ವಂಚಿಸಿದ ಒಟ್ಟು ಮೊತ್ತ ಬರೋಬ್ಬರಿ ₹1 ಕೋಟಿಯಷ್ಟಾಗಿದೆ.ಪ್ರತ್ಯೇಕ ದೂರು ದಾಖಲು:ವಂಚಕ ಅಜೀತ ಹೂಗಾರ, ಆತನ ತಂದೆ ಸುಭಾಷ ಹೂಗಾರ ವಿರುದ್ಧ ವಂಚನೆಗೊಳಗಾದ ರೈತರು ವಿಜಯಪುರ ಗ್ರಾಮೀಣ ಠಾಣೆಯಲ್ಲಿ 2025, ಜ.11ರಂದು ವಂಚನೆ ದೂರು ದಾಖಲಿಸಿದ್ದಾರೆ. ಇನ್ನೊಂದೆಡೆ ಟ್ರೇಡರ್ಸ್ ಮಾಲೀಕ ಕೂಡ ಎಪಿಎಂಸಿ ಠಾಣೆಯಲ್ಲಿ ಫೆ.22ರಂದು ದೂರು ದಾಖಲಿಸಿದ್ದಾರೆ.
-------------ಕೋಟ್:
ಒಳ್ಳೆಯ ಬೆಲೆ ಕೊಡುತ್ತೇನೆಂದು ವಂಚಿಸಿದ್ದಾನೆ. ಭದ್ರತೆಗಾಗಿ ಆತ ಕೊಟ್ಟಿದ್ದ ಚೆಕ್‌ಗಳು ಬೌನ್ಸ್ ಆಗಿವೆ. ಈಗ ಆತ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಒಣದ್ರಾಕ್ಷಿಗೆ ಒಳ್ಳೆಯ ಹಣ ಕೊಡುತ್ತೇವೆ ಎಂದು ಬರುವ ವ್ಯಾಪಾರಿಗಳನ್ನು ಯಾರೂ ನಂಬಬೇಡಿ. ನಾವು ಮೋಸ ಹೋದಂತೆ ಬೇರೆಯವರು ಮೋಸ ಹೋಗಬಾರದು. ವಿಶ್ವಾಸವಿದ್ದವರು, ಹಣ ಕೊಟ್ಟವರ ಬಳಿ ಮಾತ್ರ ವ್ಯವಹಾರ ಮಾಡಿ.- ನಿಂಗಪ್ಪ ಪೂಜಾರಿ, ವಂಚನೆಗೊಳಗಾದ ದ್ರಾಕ್ಷಿ ಬೆಳೆಗಾರ.-----------
ಒಣದ್ರಾಕ್ಷಿ ವ್ಯಾಪಾರದ ಹೆಸರಿನಲ್ಲಿ ದ್ರಾಕ್ಷಿ ಬೆಳೆಗಾರರಿಗೆ ವಂಚಿಸಿದ ಆರೋಪಿ ಅಜೀತ ಹೂಗಾರ ವಿರುದ್ಧ ಎರಡು ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ನಮ್ಮ ತಂಡ ಆರೋಪಿ ಬಲೆಗೆ ಜಾಲ ಬೀಸಿದ್ದು, ಆದಷ್ಟು ಬೇಗ ಆರೋಪಿಗಳನ್ನು ಹಿಡಿದು, ನೊಂದ ರೈತರಿಗೆ ನ್ಯಾಯ ಒದಗಿಸಲಾಗುವುದು. ರೈತರು ಸಹ ವಂಚಕರನ್ನು ನಂಬದೆ ಹಣ ಕೊಟ್ಟು ಖರೀದಿಸುವವರಿಗೆ ಮಾತ್ರ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕು.- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ