ಮುರುಗಮಲ್ಲ ದರ್ಗಾ ಅಭಿವೃದ್ಧಿಗೆ ₹32 ಕೋಟಿ ಬಿಡುಗಡೆ

| Published : May 01 2025, 12:49 AM IST

ಸಾರಾಂಶ

ಜಿಲ್ಲೆಯ ಚಿಂತಾಮಣಿ ತಾಲೂಕಿನ‌ ಮುರುಗಮಲ್ಲ ದರ್ಗಾವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 32 ಕೋಟಿ ರೂಪಾಯಿಗಳನ್ಮು ಬಿಡುಗಡೆ ಮಾಡಿದ್ದು, ಇನ್ನೆರಡು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭವಾಗಲಿದೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ/ ಚಿಂತಾಮಣಿ

ಜಿಲ್ಲೆಯ ಚಿಂತಾಮಣಿ ತಾಲೂಕಿನ‌ ಮುರುಗಮಲ್ಲ ದರ್ಗಾವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ 32 ಕೋಟಿ ರೂಪಾಯಿಗಳನ್ಮು ಬಿಡುಗಡೆ ಮಾಡಿದ್ದು, ಇನ್ನೆರಡು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭವಾಗಲಿದೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಚಿಂತಾಮಣಿ ತಾಲೂಕಿನ ಕೈವಾರ ಗ್ರಾಪಂ ವ್ಯಾಪ್ತಿಯಲ್ಲಿ ಬುಧವಾರ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ 89.20 ಲಕ್ಷ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಮುರುಗಮಲ್ಲಾ ಜಿಲ್ಲೆಯ ಸುಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ಇಲ್ಲಿನ ದರ್ಗಾಗೆ ಹಲವು ಭಾಗಗಳಿಂದ ಮುಸ್ಲಿಂ ಬಾಂಧವರು ನಂಬಿಕೆಯಿಟ್ಟು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಮುರುಗಮಲ್ಲಾ ದರ್ಗಾ ಅಭಿವೃದ್ಧಿಗೆ ಇದೇ ಮೊದಲ ಬಾರಿಗೆ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ 32 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ನೀಡಿದೆ. ಎರಡು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಕೈವಾರದಲ್ಲಿ ಈದ್ಗಾ ಸಮಸ್ಯೆಯನ್ನು ಕೆಲವೇ ದಿನಗಳಲ್ಲಿ ಸ್ಥಳೀಯ ಮುಖಂಡರ ಸಭೆ ಕರೆದು ಬಗೆ ಹರಿಸಲಾಗುವುದು. ಕೈವಾರದಲ್ಲಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾದಿ ಮಹಲ್ ನಿರ್ಮಿಸಲಾಗುವುದು ಎಂದರು.

ಕೈವಾರ, ಮಸ್ತೇನಹಳ್ಳಿ ಪಂಚಾಯಿತಿಗಳು ಒಳಗೊಂಡಂತೆ ಕೈವಾರ ಹೋಬಳಿ ಕೇಂದ್ರವನ್ನು ಪಪಂಯಾಗಿ ಮೇಲ್ದರ್ಜೆಗೇರಿಸುವ ಉದ್ದೇಶವಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ತಾಲೂಕಿನ‌ ಕನಿಶೆಟ್ಟಿಹಳ್ಳಿ, ಕಾಗತಿ ಪ್ರದೇಶ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಾಡಲು 2000 ಎಕರೆ ಭೂಮಿ ಗುರುತಿಸಲಾಗಿದ್ದು,ಈ ಭಾಗದ ಸುತ್ತಮುತ್ತಲೂ ಇರುವ ರೈತರು ಕೈಗಾರಿಕೆಗಳ ಅಭಿವೃದ್ಧಿಗೆ ಭೂಮಿ ನೀಡಲು ಒಪ್ಪಿದ್ದಾರೆ ಎಂದು ತಿಳಿಸಿದರು.

ತಹಸೀಲ್ದಾರ್ ಸುದರ್ಶನ್ ಯಾದವ್,ಇದ್ದರು.