₹2.13 ಕೋಟಿ ಕಳವು ಮಾಲು ವಾರಸುದಾರರಿಗೆ ವಾಪಾಸ್‌

| Published : Jan 05 2025, 01:34 AM IST

ಸಾರಾಂಶ

ಚಿತ್ರದುರ್ಗದ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ಆಯೋಜಿಸಲಾದ ಕಾರ್ಯ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಳವು ಮಾಲುಗಳ ವಾರಸುದಾರರಿಗೆ ವಿತರಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ 139 ಕಳವು ಪ್ರಕರಣಗಳಲ್ಲಿ ಒಟ್ಟು ₹2.13 ಕೋಟಿ ಬೆಲೆ ಬಾಳುವ ಚಿನ್ನಾಭರಣ, ವಾಹನ, ನಗದು, ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಮ್ಮುಖದಲ್ಲಿ ವಾರಸುದಾರರಿಗೆ ಹಿಂತಿರುಗಿಸಿದರು.

ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಶನಿವಾರ ಪೊಲೀಸ್ ಇಲಾಖೆ ವತಿಯಿಂದ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ ಮತ್ತು ಪೊಲೀಸ್ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಡಿ.ಸುಧಾಕರ್, ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಳವಾದಂತೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಸರ್ಕಾರದಿಂದ ಪೊಲೀಸ್ ಇಲಾಖೆ ಬಲಪಡಿಸಲು ಎಲ್ಲ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಒಟ್ಟು ₹5.27 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ₹2.13 ಕೋಟಿ ಮೌಲ್ಯದ ವಸ್ತುಗಳನ್ನು ಸಂಬಂಧಿಸಿದ ವಾರಸುದಾರರಿಗೆ ಮರಳಿಸಲಾಗುತ್ತಿದೆ. ಇದರೊಂದಿಗೆ ಪೊಲೀಸ್ ಜಾಗೃತಿ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ. ಮಹಿಳಾ ಪೊಲೀಸ್, ಸಂಚಾರಿ ಪೊಲೀಸ್ ಹಾಗೂ ಸೈಬರ್ ಪೊಲೀಸ್ ಠಾಣೆ ವತಿಯಿಂದ ಮಹಿಳೆಯರ ರಕ್ಷಣೆ, ಆಸ್ತಿ ವಿವಾದ, ಅಪಘಾತ, ಪೋಕ್ಸೋ, ಕಳವು ಮುಂತಾದ ಪ್ರಕರಣಗಳ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ. ಸಶಸ್ತ್ರ ಮೀಸಲು ಪಡೆಯ ವತಿಯಿಂದ ಆಯುಧಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಚಿತ್ರದುರ್ಗ ಡಿವೈಎಸ್‍ಪಿ ದಿನಕರ್, ಚಳ್ಳಕೆರೆ ಡಿವೈಎಸ್‍ಪಿ ರಾಜಣ್ಣ, ಹಿರಿಯೂರು ಡಿವೈಎಸ್‍ಪಿ ಶಿವಕುಮಾರ್, ಚಿತ್ರದುರ್ಗದ ಸೈಬರ್ ಅಪರಾಧ ತಡೆ ಪೊಲೀಸ್ ಠಾಣೆ ಡಿವೈಎಸ್‍ಪಿ ಉಮೇಶ್ ನಾಯ್ಕ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವೃತ್ತ ನಿರೀಕ್ಷಕರು, ಸಬ್ ಇನ್ಸ್‌ಪೆಕ್ಟರ್‌ಗಳು ಭಾಗವಹಿಸಿದ್ದರು.

2 ಕೆಜಿ ಚಿನ್ನ ಹಾಗೂ 22 ಕೆಜಿ ಬೆಳ್ಳಿ ವಶ

ಜಿಲ್ಲೆಯಾದ್ಯಂತ ಒಟ್ಟು 2 ಕೆಜಿ ಚಿನ್ನ, 22ಕೆಜಿ 654 ಗ್ರಾಂ ಬೆಳ್ಳಿ, 81ದ್ವಿಚಕ್ರ ವಾಹನ, 3 ಲಘು ವಾಹನ, 4 ಭಾರಿ ವಾಹನ ಹಾಗೂ 430 ಮೊಬೈಲ್‌ಗಳು ಸೇರಿದಂತೆ 210 ಪ್ರಕರಣಗಳಲ್ಲಿ ಒಟ್ಟಾರೆ ₹5.27 ಕೋಟಿ ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದಾರೆ. ಈ ಪೈಕಿ ಒಟ್ಟು ₹2,13,81,667 ಮೌಲ್ಯದ ವಸ್ತುಗಳನ್ನು 653 ವಾರಸುದಾರಿಗೆ ಹಿಂದುರಿಗಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಪರಾಧ ತಡೆ ಮಾಸಾಚರಣೆ ಜಾಗೃತಿ ಪುಸ್ತಕವನ್ನು ಬಿಡುಗಡೆ ಮಾಡಿದರು. ಡಿಎಆರ್ ಡಿವೈಎಸ್ಪಿ ಗಣೇಶ್ ಅಪರಾಧ ತಡೆ ಪ್ರತಿಜ್ಞಾ ವಿಧಿ ಬೋಧಿಸಿದರು.

ವಿವಿಧ ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಸಮಾರಂಭದ ಜೊತೆಗೆ ಸಾರ್ವಜನಿಕರಲ್ಲಿ ಅಪರಾಧ ತಡೆ, ರಸ್ತೆ ಸುರಕ್ಷತೆ, ಮಹಿಳಾ ಮತ್ತು ಮಕ್ಕಳ ರಕ್ಷಣೆ ಮುಂತಾದ ವಿಷಯಗಳ ಕುರಿತು ಅರಿವು ಮೂಡಿಸಲು ವಿಶೇಷ ವಸ್ತುಪ್ರದರ್ಶನವನ್ನು ಇದೇ ಕವಾಯತು ಮೈದಾನದಲ್ಲಿ ಆಯೋಜಿಸಿದ್ದು, ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ವಸ್ತು ಪ್ರದರ್ಶನದಲ್ಲಿ ಅಪರಾಧ ತಡೆಗಟ್ಟುವ ಕುರಿತು ಮಾರ್ಗಸೂಚಿ ಮತ್ತು ಸಲಹೆಗಳು, ವಿವಿಧ ಬಗೆಯ ಪೊಲೀಸ್ ಶಸ್ತ್ರಾಸ್ತ್ರಗಳ ಪ್ರದರ್ಶನ, ಶ್ವಾನದಳದ ಮಹತ್ವ ಕುರಿತು ವಸ್ತುಪ್ರದರ್ಶನ, ಪೋಕ್ಸೋ ಪ್ರಕರಣಗಳನ್ನು ತಡೆಗಟ್ಟುವುದು, ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳು, ರಸ್ತೆ ಅಪಘಾತಗಳ ವಿಡಿಯೋ ತುಣುಕುಗಳ ನಿರಂತರ ಪ್ರದರ್ಶನ ವ್ಯವಸ್ಥೆ, ವೈರ್‍ಲೆಸ್, ಕಂಟ್ರೋಲ್‍ರೂಂ ಮತ್ತು 112 ಸಹಾಯವಾಣಿ ಕಾರ್ಯನಿರ್ವಹಿಸುವ ಬಗೆ, ಅಪಘಾತ ಸಂದರ್ಭದಲ್ಲಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದು, ಅಗ್ನಿ ಅವಘಡಗಳನ್ನು ತಡೆಗಟ್ಟಲು ಅಗ್ನಿಶಾಮಕ ದಳದಿಂದ ಅಣಕು ಪ್ರದರ್ಶನ ಮುಂತಾದವುಗಳ ಬಗ್ಗೆ ಮಳಿಗೆಗಳನ್ನು ತೆರೆದು, ವಸ್ತುಪ್ರದರ್ಶನ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಶನಿವಾರದಂದು ನಗರದ ಹಲವು ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ವಸ್ತುಪ್ರದರ್ಶನ ಮಳಿಗೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.