ಸಾರಾಂಶ
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆ ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರೂಪಿಸಲಾಗಿದ್ದು, 2024ರ ಜನವರಿಯಿಂದ ನವೆಂಬರ್ ವರೆಗೂ ಒಟ್ಟು 6.77 ಕೋಟಿ ಹಣ ಪಾವತಿಸಲಾಗಿದೆ. 4,714 ಯುವ ಜನರು ಯುವನಿಧಿಯ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆ ಉದ್ಯೋಗದ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವ ಜನರು, ಯುವನಿಧಿ ಯೋಜನೆಗೆ ನೋಂದಾಯಿಸಿಕೊಳ್ಳುವ ಮೂಲಕ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ ಹೇಳಿದರು.ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಏರ್ಪಡಿಸಿದ ಯುವನಿಧಿ ವಿಶೇಷ ನೋಂದಣಿ ಅಭಿಯಾನ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೃತ್ತಿಪರ ತರಬೇತಿ ಪಡೆದ ಡಿಪ್ಲೊಮಾ ವಿದ್ಯಾರ್ಥಿಗಳು ಹಾಗೂ ಪದವಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಸ್ವಾವಲಂಬಿ ಜೀವನ ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಾಜ್ಯಸರ್ಕಾರದ ಯುವನಿಧಿ ನೆರವಾಗಲಿದೆ. ಯುವನಿಧಿಯಡಿ ದೊರಕುವ ನಿರುದ್ಯೋಗ ಭತ್ಯೆಯನ್ನು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗಲು ಪುಸ್ತಕ ಖರೀದಿಗೆ ಉಪಯೋಗವಾಗಲಿದೆ ಎಂದರು.
ನಿರುದ್ಯೋಗಿ ಯುವ ಜನರಿಗೆ ಎರಡು ವರ್ಷಗಳವರೆಗೆ ಅಥವಾ ಫಲಾನುಭವಿಗಳಿಗೆ ಉದ್ಯೋಗ ಸಿಗುವವರೆಗೆ ನಿರುದ್ಯೋಗ ಭತ್ಯೆ ಒದಗಿಸಲಾಗುತ್ತದೆ. ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3000 ರು. ಹಾಗೂ ಡಿಪ್ಲೊಮಾ ಪದವೀಧರರಿಗೆ ಪ್ರತಿ ತಿಂಗಳು 1500 ರು. ಒದಗಿಸುವ ಅಭೂತಪೂರ್ವ ಯೋಜನೆ ಇದಾಗಿದೆ ಎಂದು ಹೇಳಿದರು.ಜಿಲ್ಲಾ ಉದ್ಯೋಗಾಧಿಕಾರಿ ಡಿ.ರವೀಂದ್ರ ಮಾತನಾಡಿ, ಯುವನಿಧಿ ಯೋಜನೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೊಮಾ 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023 ಮತ್ತು 2024ರಲ್ಲಿ ತೇರ್ಗಡೆಯಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಹಾಗೂ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿನಗಳನ್ನು ಪೂರೈಸಿದ ಅಭ್ಯರ್ಥಿಗಳಿಗೆ ಇದೇ ಜ.20 ರವರೆಗೆ ಯುವನಿಧಿ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಎಸ್ಎಸ್ಎಲ್‌ಸಿ, ಪಿಯುಸಿ, ಪದವಿ, ಡಿಪ್ಲೊಮಾ ಪ್ರಮಾಣ ಪತ್ರ ಸೇರಿದಂತೆ ನೋಂದಣಿಗೆ ಅಗತ್ಯವಿರುವ ದಾಖಲಾತಿಗಳೊಂದಿಗೆ http://sevasindhugs.karnataka.gov.inನಲ್ಲಿ ಆನ್‍ಲೈನ್‍ನಲ್ಲಿ ನೋಂದಾಯಿಸಬೇಕು. ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ, ಕಾಲೇಜು, ವಿಶ್ವವಿದ್ಯಾಲಯ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಣಿ ಘಟಕ ತೆರೆಯಲಾಗಿದ್ದು, ಉಚಿತವಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷ ಅಬ್ದುಲ್, ಹಿರಿಯೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಖಾದಿ ಜೆ.ರಮೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಮುದಾಸರ್ ನವಾಜ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ರಾಘವೇಂದ್ರಚಾರ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ರವಿಕುಮಾರ್, ನಾಗರಾಜ್ ಇದ್ದರು.