ಸಾರಾಂಶ
ಹೆಚ್ಚು ಕರ ವಸೂಲಾತಿ ಮಾಡಿದ ಪಿಡಿಒಗಳಿಗೆ ಸನ್ಮಾನ । ಸರ್ಕಾರದ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಸಲಹೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗ್ರಾಮದ ಅಭಿವೃದ್ಧಿಯಿಂದ ಮಾತ್ರ ದೇಶ ಮುನ್ನಡೆಯಲು ಸಾಧ್ಯವೆಂದು ಚಿತ್ರದುರ್ಗ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್ ಹೇಳಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಚಿತ್ರದುರ್ಗ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ಕರ ವಸೂಲಾತಿ ಮಾಡಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗೆ ಸನ್ಮಾನಿಸಿ ಮಾತನಾಡಿದ ಅವರು ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಉತ್ತಮ ಅನುಷ್ಠಾನಕ್ಕೆ ಹೊಸ ವರ್ಷದ ದಿನ ಕಟಿಬದ್ಧರಾಗಬೇಕು. ಉತ್ತಮ ಕರ ವಸೂಲಿ ಮಾಡಿರುವ ಗ್ರಾಮ ಪಂಚಾಯಿತಿಗಳಂತೆ ಇತರೆ ಗ್ರಾಮ ಪಂಚಾಯಿತಿಗಳೂ ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ತೆರಿಗೆಯಿಂದ ಸಂಗ್ರಹಿಸುವ ಆದಾಯವನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ನೌಕರರ ಸಂಬಳ, ಗ್ರಾಮದ ಅಭಿವೃದ್ಧಿಗೆ ಮತ್ತು ಅಲ್ಲಿನ ನಿವಾಸಿಗಳ ಮೂಲಭೂತ ಸೇವೆ ಒದಗಿಸಲು ಬಳಸಲಾಗುತ್ತದೆ. ಈ ನಿಟ್ಟಿನಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಸೂಚನೆಯಂತೆ ಚಿತ್ರದುರ್ಗ ತಾಲೂಕಿನ 38 ಗ್ರಾಪಂ ಗಳಲ್ಲಿ ಎಲ್ಲಾ ಸಿಬ್ಬಂದಿಗಳೂ ಕಳೆದ ಒಂದು ತಿಂಗಳಿಂದ ಅಭಿಯಾನದ ರೂಪದಲ್ಲಿ ಕರ ವಸೂಲಾತಿ ಆಂದೋಲನ ಹಮ್ಮಿಕೊಂಡಿದ್ದರಿಂದ ಪ್ರಸಕ್ತ ಸಾಲಿನಲ್ಲಿ ಚಿತ್ರದುರ್ಗ ತಾಲೂಕಿನ ರು.12,44,11,412 ಗಳ ಒಟ್ಟು ಬೇಡಿಕೆಯಲ್ಲಿ ರು.6,68,06,208 ವಸೂಲಿಯಾಗಿ ಡಿಸೆಂಬರ್ ಅಂತ್ಯಕ್ಕೆ ಶೇ.53.70 ಕರ ವಸೂಲಾತಿಯಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಚಿತ್ರದುರ್ಗ ತಾಲೂಕಿನಲ್ಲಿ ಅತಿ ಹೆಚ್ಚು ಕರ ವಸೂಲಿ ಮಾಡಿರುವ ಆಲಗಟ್ಟ (ಶೇ.82.98), ಇಂಗಳದಾಳ್(ಶೇ.87.29), ಜಿ.ಆರ್.ಹಳ್ಳಿ(ಶೇ.84.47) ಮತ್ತು ಮಾಡನಾಯಕನಹಳ್ಳಿ (ಶೇ.86.28) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಪ್ರಮುಖವಾಗಿ ಬಿಲ್ ಕಲೆಕ್ಟರ್ ಗಳನ್ನು ಸನ್ಮಾನಿಸಲಾಯಿತು.
ಈ ಸಂಸದರ್ಭದಲ್ಲಿ ಚಿತ್ರದುರ್ಗ ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ಕೆಂಚಪ್ಪ, ತಾಲೂಕು ಯೋಜನಾಧಿಕಾರಿ ರಾಘವೇಂದ್ರ, ನರೇಗಾ ಮತ್ತು ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ಎಚ್.ಯರ್ರಿಸ್ವಾಮಿ ಮತ್ತು ರೂಪಾ ಕುಮಾರಿ, ವ್ಯವಸ್ಥಾಪಕ ಇರ್ಫಾನ್, ಪಿಡಿಒ ಮಹಾಲಕ್ಷ್ಮಿ, ನಾಸೀರ್, ಎಂಐಎಸ್ ಸಂಯೋಜಕ ಉಮೇಶ್, ಐಇಸಿ ಸಂಯೋಜಕ ಸತ್ಯನಾರಾಯಣ, ಚಿತ್ರದುರ್ಗ ತಾಲೂಕಿನ ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಸಹಾಯಕರು, ಬಿಲ್ ಕಲೆಕ್ಟರ್ ಗಳು ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.