ಬೆಸ್ಕಾಂ ಅಧಿಕಾರಿ, ಗುತ್ತಿಗೆದಾರರಿಂದ ಕೋಟ್ಯಾಂತರ ರು. ಅವ್ಯವಹಾರ: ಶಾಸಕ ಎಂ.ಟಿ.ಕೃಷ್ಣಪ್ಪ

| Published : May 03 2024, 01:02 AM IST

ಬೆಸ್ಕಾಂ ಅಧಿಕಾರಿ, ಗುತ್ತಿಗೆದಾರರಿಂದ ಕೋಟ್ಯಾಂತರ ರು. ಅವ್ಯವಹಾರ: ಶಾಸಕ ಎಂ.ಟಿ.ಕೃಷ್ಣಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಬೆಸ್ಕಾಂನ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಕೋಟ್ಯಾಂತರ ರು. ಅವ್ಯವಹಾರ ನಡೆಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲು ಲೋಕಾಯುಕ್ತಕ್ಕೆ ದೂರು ಸಲ್ಲಿಸಿ, ತನಿಖೆಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಇಲ್ಲಿನ ಬೆಸ್ಕಾಂನ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಕೋಟ್ಯಾಂತರ ರು. ಅವ್ಯವಹಾರ ನಡೆಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲು ಲೋಕಾಯುಕ್ತಕ್ಕೆ ದೂರು ಸಲ್ಲಿಸಿ, ತನಿಖೆಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನ ನೂರಾರು ರೈತರು ಅಕ್ರಮ ಸಕ್ರಮ ಯೋಜನೆಯಲ್ಲಿ ಸ್ವಂತ ಟಿ.ಸಿ ಅಳವಡಿಸಿಕೊಡಲು ಈಗಾಗಲೇ ಬೆಸ್ಕಾಂ ಇಲಾಖೆಗೆ 27 ಸಾವಿರ ರು.ಪಾವತಿಸಿ ವರ್ಷಗಳಾಗಿವೆ. ಆದರೆ ಬೆಸ್ಕಾಂ ಇಲಾಖೆ 2010 ರಿಂದ ರೈತರಿಗೆ ಟಿಸಿ ನೀಡದೆ ಪೆಂಡಿಂಗ್ ಇಟ್ಟುಕೊಂಡಿದೆ. ನಾನು ವಿಧಾನಸೌಧ ಅಧಿವೇಶನದಲ್ಲಿ ಮಾತನಾಡಿ ತಾಲೂಕಿನ ರೈತರಿಗೆ 500 ಟಿಸಿ ನೀಡುವಂತೆ ಆದೇಶ ಮಾಡಿಸಿದ್ದೆ. ತಾಲೂಕಿಗೆ ಮುಂಜೂರಾದ 500 ಟಿಸಿ ಅಳವಡಿಸಲು ಗುತ್ತಿಗೆದಾರ ಗಂಗರಾಜು ಎಂಬುವರಿಗೆ ಟೆಂಡರ್ ಆಗಿದೆ. ಆದರೆ ಗುತ್ತಿಗೆದಾರ ಉಚಿತವಾಗಿ ಟಿಸಿ ನೀಡುವ ಬದಲು ರೈತರಿಂದ 80 ಸಾವಿರ ರು. ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬೇಸಿಗೆ ಕಾಲವಾಗಿದ್ದರಿಂದ ರೈತರಿಗೆ ಟಿಸಿ ಅವಶ್ಯಕತೆ ಇದೆ. ಬೆಳೆಗಳ ರಕ್ಷಣೆಗಾಗಿ ಪರದಾಡುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಗುತ್ತಿಗೆದಾರ ಗಂಗರಾಜು ರೈತರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅದಲ್ಲದೇ ಶೀಘ್ರ ಸಂಪರ್ಕ ಎಂದು ರೈತರಿಂದ 1.5 ಲಕ್ಷ ರು. ತೆಗೆದುಕೊಂಡು ಅಕ್ರಮ ಸಕ್ರಮದಲ್ಲಿ ಅರ್ಜಿ ಹಾಕಿಕೊಂಡು ಅದರಲ್ಲೂ ಹಣ ಲಪಟಾಯಿಸುತ್ತಿದ್ದಾರೆ ಎಂದರು.

ಕುಡಿಯುವ ನೀರಿನ ಸಂಪರ್ಕ, ಗಂಗಾ ಕಲ್ಯಾಣ ಸಂಪರ್ಕ ಯೋಜನೆಗಳಲ್ಲಿಯೂ ಸರಿಯಾಗಿ ಕಾಮಗಾರಿ ನಿರ್ವಹಿಸುತ್ತಿಲ್ಲ. ಕಳಪೆ ಗುಣಮಟ್ಟದ ಪರಿಕರಗಳನ್ನು ಬಳಸಲಾಗುತ್ತಿದೆ. ಹಳೆ ಕಂಬ, ತಂತಿ ಬದಲಾಯಿಸಿ ಹೊಸ ಕಂಬ, ವಿದ್ಯುತ್ ವೈರ್ ಅಳವಡಿಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಠಿಸಲಾಗಿದೆ. ಇದರಲ್ಲೂ ಸಹ ಅಕ್ರಮವಾಗಿದೆ.

ಪಟ್ಟಣದಲ್ಲಿ ಹಳೆಯ ವೈರ್ ತೆಗೆದು ಹೊಸ ವೈರ್ ಹಾಕಲಾಗಿದೆ. ಆದರೆ ಹಳೆಯ ವೈರ್, ಕಂಬಗಳನ್ನು ಇಲಾಖೆಗೆ ನೀಡದೆ ಗುತ್ತಿಗೆದಾರರು ತಮ್ಮ ಮನೆ ಹತ್ತಿರ ಇಟ್ಟುಕೊಂಡಿದ್ದಾರೆ. ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರ ಜೊತೆ ಶಾಮೀಲಾಗಿದ್ದಾರೆ ಎಂದು ತಿಳಿಸಿದರು.ಸಿಎಂ ಸಿದ್ದರಾಮಯ್ಯರಿಂದ ಅಧಿಕಾರ ದುರುಪಯೋಗ: ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಹಾಗೂ ಎಸ್‌ಐಟಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಹುಬ್ಬಳ್ಳಿ ನೇಹಾ ಹಿರೇಮಠ ಕೊಲೆಯನ್ನು ಎಸ್‌ಐಟಿ ಕೊಡಲಿಲ್ಲ. ಆದರೆ ಪ್ರಜ್ವಲ್ ಪ್ರಕರಣವನ್ನು ಮಾತ್ರ ಎಸ್‌ಐಟಿಗೆ ಕೊಟ್ಟಿದ್ದಾರೆ. ಇದರಲ್ಲಿ ಬೇರೆ ಏನೂ ಹುನ್ನಾರವಿದೆ ಎಂದರು.ಕಾಂಗ್ರೆಸ್‌ನವರು ಹರಿಶ್ಚಂದ್ರರಾ?: ಕಾಂಗ್ರೆಸ್‌ನವರು ಹರಿಶ್ಚಂದ್ರರಾ, ಅವರ್‍ಯಾರೂ ತಪ್ಪು ಮಾಡೇ ಇಲ್ವಾ. ಪ್ರಜ್ವಲ್ ರೇವಣ್ಣ ಪ್ರಕರಣ ಬಗ್ಗೆ ಎಸ್‌ಐಟಿ ತನಿಖೆ ನಂತರ ಎಲ್ಲ ತಿಳಿಯಲಿದೆ. ಪ್ರಜ್ವಲ್ ತಪ್ಪು ಮಾಡಿದ್ದಾನೋ ಇಲ್ಲವೂ ನನಗೆ ಗೊತ್ತಿಲ್ಲ. ಎಸ್‌ಐಟಿ ತನಿಖೆ ಮಾಡುತ್ತಿದೆ ಸತ್ಯ ಗೊತ್ತಾಗುತ್ತದೆ. ಯಾವ ಹೆಣ್ಣು ಮಕ್ಕಳು ಸಹ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಎಸ್‌ಐಟಿ ಮುಂದೆ ದೂರು ದಾಖಲಿಸಿಲ್ಲ. ಇದು ಕಾಂಗ್ರೆಸ್ ಚುನಾವಣಾ ಗಿಮಿಕ್ ಆಗಿದೆ. ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಅಮಾನತು ಮಾಡಿರುವುದು ಪಾರ್ಟಿಯ ತೀರ್ಮಾನವಾಗಿದೆ ಎಂದು ಹೇಳಿದರು.ಜೆಡಿಎಸ್ ವಕ್ತಾರ ಯೋಗೀಶ್, ಬಸವರಾಜು, ರಾಘು ಇತರರು ಇದ್ದರು.