ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಎಂಡಿಎ) ಕೋಟ್ಯಂತರ ರುಪಾಯಿ ಹಗರಣ ಆಗಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯವರು ನಗರದ ಜೆಎಲ್ ಬಿ ರಸ್ತೆಯಲ್ಲಿರುವ ಎಂಡಿಎ ಕಚೇರಿ ಮುಂಭಾಗದಲ್ಲಿ ಭಾನುವಾರ ಪ್ರತಿಭಟಿಸಿದರು.ಎಂಡಿಎನಲ್ಲಿ ಸುಮಾರು 4- 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿದ್ದಾರೆ. ಬದಲಿ ನಿವೇಶನ ನೀಡದಂತೆ ಎರಡು ವರ್ಷದ ಹಿಂದೆಯೇ ಸರ್ಕಾರ ಆದೇಶ ಮಾಡಿ, ಅತಿ ಅಗತ್ಯ ಬಿದ್ದರೆ ಮಾತ್ರ ಸರ್ಕಾರದ ಅನುಮತಿ ಪಡೆದು ಹಂಚಿಕೆಗೆ ತಾಕೀತು ಮಾಡಿದ್ದರೂ, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಬದಲಿ ನಿವೇಶನ ಹಂಚಿಕೆ ಮಾಡಿ ಸುಮಾರು 3 ಸಾವಿರ ಕೋಟಿ ಹಗರಣ ಮಾಡಿ, ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟ ಮಾಡಲಾಗಿದೆ ಎಂದು ಆರೋಪಿಸಿದರು.
ಎಂಡಿಎ ಆಯುಕ್ತರು ಕಚೇರಿಯಲ್ಲಿ ಬಹಳಷ್ಟು ಫೈಲ್ ಗಳೇ ಸಿಗದಂತೆ ಮಾಡಿ, ಊರಾಚೆಯ ಹಳ್ಳಿ ಸೈಟ್ ಗಳಿಗೂ ಮೈಸೂರಿನ ಐಷಾರಾಮಿ ಲೇಔಟ್ ನಲ್ಲಿ ಬದಲಿ ನಿವೇಶನಗಳನ್ನು ನೀಡಿದ್ದಾರೆ. ಸರ್ಕಾರ ಈ ಕೂಡಲೇ ಕಟ್ಟುನಿಟ್ಟಾಗಿ ಪ್ರಾಮಾಣಿಕವಾಗಿ ತನಿಖೆ ಮಾಡಿ, ತಪ್ಪಿತಸ್ಥರನ್ನು ಜೈಲಿಗಟ್ಟಿ, ಅಕ್ರಮ ಮಾರಾಟ ಮಾಡಿ ಬದಲಿ ನಿವೇಶನ ನೀಡಿರುವ ನಿವೇಶನಗಳನ್ನು ಹಿಂಪಡೆಯಬೇಕು. ಆ ಮೂಲಕ ಎಂಡಿಎಯನ್ನು ಭೂಗಳ್ಳರಿಂದ ರಕ್ಷಿಸಬೇಕು ಎಂದು ಒತ್ತಾಯಿಸಿದರು.ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮುಖಂಡರಾದ ಪ್ರಭುಶಂಕರ್, ಕೃಷ್ಣಪ್ಪ, ಕುಮಾರ್ ಗೌಡ, ಶಿವಲಿಂಗಯ್ಯ, ಅಂಬಾ ಅರಸ್, ನೇಹಾ, ಮಂಜುಳಾ, ಭಾಗ್ಯಮ್ಮ, ನಾರಾಯಣಗೌಡ, ಚಂದ್ರು, ವಿಜಯೇಂದ್ರ, ಆನಂದ್, ರಾಮಕೃಷ್ಣ, ರವಿ, ರಾಧಾಕೃಷ್ಣ, ಅಕ್ಬರ್, ರವೀಶ್, ಸ್ವಾಮಿಗೌಡ, ಆರ್. ಮಹದೇವ್, ದರ್ಶನ್ ಗೌಡ, ಪ್ರದೀಪ್, ದಿನೇಶ್ ಮೊದಲಾದವರು ಇದ್ದರು.
ಕಟ್ಟಡ ಕಾರ್ಮಿಕರ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ ನಾಳೆ ಪ್ರತಿಭಟನೆಮೈಸೂರು: ಕಟ್ಟಡ ಕಾರ್ಮಿಕರ ಹಲವು ದಿನಗಳ ಬೇಡಿಕೆ ಈಡೇರಿಸಲು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸುವರು.ಜು. 2 ರಂದು ಬೆಳಗ್ಗೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಕಾರ್ಮಿಕರಿಗೆ ಅಗತ್ಯವಿಲ್ಲದ ಕಿಟ್‌ಅನ್ನು ಕೂಡಲೇ ನಿಲ್ಲಿಸಬೇಕು. ಕರ್ನಾಟಕ ಹೈ ಕೋರ್ಟ್‌ನೀಡಿರುವ ಕಿಟ್ ವಿತರಣೆ ತಡೆಯಾಜ್ಞೆಯನ್ನು ಸರ್ಕಾರ ಚಾಚೂತಪ್ಪದೆ ಪಾಲಿಸಬೇಕು ಎಂದು ಒತ್ತಾಯಿಸುವರು.ಈ ಹಿಂದೆ ಇದ್ದ ಶೈಕ್ಷಣಿಕ ಧನಸಹಾಯವನ್ನು ಮುಂದುವರೆಸಬೇಕು. ಹೈ ಕೋರ್ಟ್‌ಆದೇಶದಂತೆ ಬಾಕಿ ಇರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಹಿಂದಿನ ರೀತಿಯಲ್ಲಿ ಶೈಕ್ಷಣಿಕ ಧನಸಾಹಯ ನೀಡಬೇಕು, ನಕಲಿ ಕಾರ್ಮಿಕರ ಹೆಸರಿನಲ್ಲಿ ನೈಜ ಕಾರ್ಮಿಕರನ್ನು ತಿರಸ್ಕರಿಸುವುದನ್ನು ನಿಲ್ಲಿಸಬೇಕು ಮತ್ತು ಮಂಡಳಿಯ ಏಕಪಕ್ಷೀಯ ತೀರ್ಮಾನ ಕೈಬಿಡಬೇಕು ಎಂದು ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಿ. ಸೋಮರಾಜೇ ಅರಸ್ ತಿಳಿಸಿದ್ದಾರೆ.